ಕನ್ನಡಪ್ರಭ ವಾರ್ತೆ ಹಾಸನ

ದೇಶದ ಗಡಿಯನ್ನು ರಕ್ಷಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡಿದ ಕಾರ್ಗಿಲ್ ಸಮರದ ವೀರ ಯೋಧರ ತ್ಯಾಗ, ಶೌರ್ಯ ಮತ್ತು ದೇಶಭಕ್ತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ನಾವುಗಳು ಮಾಡಬೇಕು ಎಂದು ಸಂಸದ ಶ್ರೇಯಸ್ ಎಂ. ಪಟೇಲ್ ತಿಳಿಸಿದರು. ನಗರದ ಕುವೆಂಪು ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಉದ್ಯಾನವನದ ಯುದ್ಧ ಸ್ಮಾರಕದಲ್ಲಿ ಭಾನುವಾರ ಕಾರ್ಗಿಲ್ ವಿಜಯ್ ದಿವಸ್‌ನ್ನು ಅತ್ಯಂತ ಗೌರವಯುತವಾಗಿ ಆಚರಿಸಲಾಯಿತು. ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರ ಸ್ಮರಣಾರ್ಥ ಎರಡು ನಿಮಿಷ ಮೌನಾಚರಣೆ ನಡೆಸಿದರು. ಬಳಿಕ ಮಾಜಿ ಸೈನಿಕರು, ಅವರ ಕುಟುಂಬ ಸದಸ್ಯರು ಹಾಗೂ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸಿದರು. ಸೈನಿಕರಾಗಿ ಹೋರಾಡಿ ವೀರ ಮರಣ ಹೊಂದಿದ ಕುಟುಂಬದವರಿಗೆ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು. ಹಾಸನ ಲಯನ್ಸ್ ಕ್ಲಬ್ ನಿಂದ ಮೂವರು ನಿವೃತ್ತ ಯೋಧರನ್ನು ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಶ್ರೇಯಸ್ ಎಂ. ಪಟೇಲ್, ಕಾರ್ಗಿಲ್ ವಿಜಯ್ ದಿವಸ್ ಕೇವಲ ಒಂದು ಸ್ಮರಣಾ ದಿನವಲ್ಲ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಶೌರ್ಯವನ್ನು ನೆನೆಯುವ ಪವಿತ್ರ ದಿನವಾಗಿದೆ. ಕಾರ್ಗಿಲ್ ಯುದ್ಧದಲ್ಲಿ ದೇಶದ ೫೨೭ ಯೋಧರು ತಮ್ಮ ಅಮೂಲ್ಯ ಪ್ರಾಣವನ್ನು ದೇಶದ ರಕ್ಷಣೆಗಾಗಿ ಅರ್ಪಿಸಿದ್ದಾರೆ. ಅವರ ತ್ಯಾಗದಿಂದಲೇ ಇಂದು ದೇಶದ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದ್ದರಿಂದ ಯೋಧರನ್ನು ಕೇವಲ ಒಂದು ದಿನ ನೆನಪಿಸಿಕೊಳ್ಳುವುದು ಸಾಕಾಗುವುದಿಲ್ಲ. ವರ್ಷದ ೩೬೫ ದಿನಗಳಲ್ಲೂ ಅವರ ಸೇವೆ ಮತ್ತು ತ್ಯಾಗವನ್ನು ಗೌರವಿಸುವ ಮನೋಭಾವ ಪ್ರತಿಯೊಬ್ಬ ಭಾರತೀಯನಲ್ಲೂ ಇರಬೇಕು ಎಂದು ಹೇಳಿದರು. ದೇಶಕ್ಕಾಗಿ ಹೋರಾಡಿದ ಯೋಧರನ್ನು ದೇವರಿಗೆ ಸಮಾನವಾಗಿ ಕಾಣಬೇಕು. ಅವರ ಕುಟುಂಬಗಳು ಎದುರಿಸುವ ಸಮಸ್ಯೆಗಳಿಗೆ ಸಮಾಜ ಮತ್ತು ಸರ್ಕಾರ ಸ್ಪಂದಿಸಬೇಕಿದೆ. ಜನಪ್ರತಿನಿಧಿಗಳಾಗಿ ಮಾಜಿ ಸೈನಿಕರು ಹಾಗೂ ಅವರ ಕುಟುಂಬಗಳ ಪರವಾಗಿ ನಿಲ್ಲುವುದು ನಮ್ಮ ಕರ್ತವ್ಯ ಎಂದು ಅವರು ತಿಳಿಸಿದರು.ಇಂದಿನ ಯುವಜನತೆಗೆ ದೇಶಭಕ್ತಿ ಮತ್ತು ರಾಷ್ಟ್ರಸೇವೆಯ ಮೌಲ್ಯಗಳನ್ನು ಪರಿಚಯಿಸುವ ಅಗತ್ಯವಿದೆ. ಪೋಷಕರು ತಮ್ಮ ಮಕ್ಕಳಲ್ಲಿ ಸೇನೆಯ ಬಗ್ಗೆ ಗೌರವವನ್ನು ಬೆಳೆಸಬೇಕು. ಸೇನೆ ಎಂದರೆ ಭಯದ ವೃತ್ತಿಯಲ್ಲ, ಅದು ದೇಶಸೇವೆಯ ಅತ್ಯುನ್ನತ ಮಾರ್ಗ ಎಂಬ ಅರಿವು ಮೂಡಿಸಬೇಕಿದೆ ಎಂದರು. ಸೈನಿಕರ ಸಂಘದ ಅಧ್ಯಕ್ಷರು ಪ್ರಸ್ತಾಪಿಸಿದ ಸೈನಿಕರ ಕಲ್ಯಾಣ ಯೋಜನೆಗಳು, ಅನುದಾನ ಹಾಗೂ ಮೂಲಸೌಕರ್ಯಗಳ ಕೊರತೆ ಕುರಿತು ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಾಜಿ ಸೈನಿಕರು ಹಾಗೂ ಅವರ ಕುಟುಂಬಗಳಿಗೆ ಯಾವುದೇ ಸಮಸ್ಯೆ ಎದುರಾದರೆ ನೇರವಾಗಿ ತಮ್ಮನ್ನು ಸಂಪರ್ಕಿಸಬಹುದು. ಅವರ ಕುಟುಂಬದ ಸದಸ್ಯರಂತೆ ಜೊತೆಯಾಗಿ ನಿಲ್ಲುವ ಭರವಸೆಯನ್ನು ನೀಡಿದರು. ಪ್ರತಿ ವರ್ಷ ನಿವೃತ್ತಿಯಾಗಿ ತವರಿಗೆ ಮರಳುವ ಯೋಧರನ್ನು ಸಾರ್ವಜನಿಕವಾಗಿ ಅಭಿನಂದಿಸಿ ಗೌರವಿಸುವ ಕಾರ್ಯಕ್ರಮವನ್ನು ರೂಪಿಸಬೇಕು. ಅದಕ್ಕೆ ತಾವು ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ಮಾಜಿ ಸೈನಿಕರ ಸಮನ್ವಯದ ಅಧ್ಯಕ್ಷ ಎ.ಎಸ್. ಪ್ರದೀಪ್ ಸಾಗರ್‌, ಕಾರ್ಗಿಲ್ ವಿಜಯ್ ದಿವಸ್ ಆಚರಣೆಯನ್ನು ಹಾಸನ ಜಿಲ್ಲೆಯ ಎಲ್ಲಾ ಏಳು ತಾಲೂಕುಗಳಿಗೂ ವಿಸ್ತರಿಸುವ ಆಶಯ ವ್ಯಕ್ತಪಡಿಸಿದರು. ಪ್ರತಿಯೊಂದು ತಾಲೂಕಿನಲ್ಲಿ ಸೈನಿಕ ಭವನ ನಿರ್ಮಾಣವಾಗಬೇಕು. ಕೆಲವು ತಾಲೂಕುಗಳಲ್ಲಿ ನಿವೇಶನ ಗುರುತಿಸುವ ಕಾರ್ಯ ಆರಂಭವಾಗಿದ್ದು, ಉಳಿದ ಕಡೆಗಳಲ್ಲೂ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಹಾಸನದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಉದ್ಯಾನವನದಲ್ಲಿರುವ ಯುದ್ಧ ಸ್ಮಾರಕ ರಾಜ್ಯದಲ್ಲೇ ಅಪರೂಪದ ಸ್ಮಾರಕವಾಗಿದ್ದು, ಯೋಧರ ತ್ಯಾಗವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಶಾಶ್ವತ ಸ್ಮರಣಿಕೆಯಾಗಿದೆ. ಈ ಸ್ಮಾರಕ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕಮಾಂಡರ್ ಮಂಜುನಾಥ್, ಉಪಾಧ್ಯಕ್ಷ ಡಿ.ಎನ್. ವೆಂಕಟೇಶ್, ಕಾರ್ಯದರ್ಶಿ ಡಿ.ಇ. ಸ್ವಾಮಿ, ಸಹ ಕಾರ್ಯದರ್ಶಿ ಶ್ರೀಧರ್, ಖಜಾಂಚಿ ಎ.ಇ. ಲೋಕೇಶ್, ಸಂಚಾಲಕ ನಾರಾಯಣಸ್ವಾಮಿ, ನಿರ್ದೇಶಕರಾದ ಕೃಷ್ಣೇಗೌಡ, ಮೇಲೆಗೌಡ, ಬೆಟ್ಟೇಗೌಡ, ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ಜವರಪ್ಪ, ಕಾರ್ಯದರ್ಶಿ ಸಿ.ಬಿ. ನಾಗರಾಜ್, ಖಜಾಂಚಿ ಪಂಚಾಕ್ಷರಿ, ಮಾಜಿ ಅಧ್ಯಕ್ಷ ಹೆಚ್. ರಮೇಶ್, ಹೆಚ್.ಕೆ. ಕಿರಣ್, ಹಾಸನಾಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಕೆ.ಕೆ. ಮೋಹನ್, ತಿಮ್ಮರಾಯಶೆಟ್ಟಿ, ಯೋಗಿಶ್ ಸೇರಿದಂತೆ ಮಾಜಿ ಸೈನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಗೂ ಯುವಕರು ಭಾಗವಹಿಸಿದ್ದರು. ಸೌಮ್ಯ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.