ಕಾಡಾನೆ ಹಾವಳಿ ತಡೆಗೆ ರೈಲ್ವೇ ಹಳಿ ಬ್ಯಾರಿಕೇಡ್‌ ಅಳವಡಿಕೆಗೆ ಸಂಸದ ಸೂಚನೆ

| Published : Jul 12 2024, 01:32 AM IST

ಕಾಡಾನೆ ಹಾವಳಿ ತಡೆಗೆ ರೈಲ್ವೇ ಹಳಿ ಬ್ಯಾರಿಕೇಡ್‌ ಅಳವಡಿಕೆಗೆ ಸಂಸದ ಸೂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ರೈಲ್ವೆ ಹಳಿ ಬ್ಯಾರಿಕೇಡ್ ಅಳವಡಿಕೆಯಿಂದ ಕಾಡಾನೆ ಬರುವುದನ್ನು ತಡೆಗಟ್ಟುವುದು ಪರಿಣಾಮಕಾರಿಯಾಗಿದೆ. ಇನ್ನಷ್ಟು ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕೆಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ರೈಲ್ವೆ ಹಳಿ ಬ್ಯಾರಿಕೇಡ್ ಅಳವಡಿಕೆಯಿಂದ ಕಾಡಾನೆ ಬರುವುದನ್ನು ತಡೆಗಟ್ಟುವುದು ಪರಿಣಾಮಕಾರಿಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದರಂತೆ ಇನ್ನಷ್ಟು ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕೆಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆನೆಗಳ ಕಾಟ ತಪ್ಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ವಿವರಿಸಿದರು. ಈ ಸಂದರ್ಭ ಸಂಸದರು ಮಾತನಾಡಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ಡಿಎಫ್ಒ ಭಾಸ್ಕರ್ ಮಾತನಾಡಿ ಜಿಲ್ಲೆಯ ಕಾಫಿ ತೋಟಗಳಲ್ಲಿ ಸುಮಾರು 150 ಕಾಡಾನೆಗಳು ಬೀಡು ಬಿಟ್ಟಿದ್ದ, ಇವುಗಳಿಂದ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಇಲಾಖೆ ರ್‍ಯಾಪಿಡ್‌ ರೆಸ್ಪಾನ್ಸ್ ತಂಡವನ್ನು ಮಾಡಿದ್ದು, ಕಾಡಾನೆ ಬಂದ ಸಂದರ್ಭ ಕೂಡಲೇ ನಮ್ಮ ಸಿಬ್ಬಂದಿ ಕಾರ್ಯಪ್ರವೃತ್ತರಾಗುತ್ತಾರೆಂದು ಮಾಹಿತಿ ನೀಡಿದರು.

ತಲಕಾವೇರಿ ಸೂಕ್ಷ್ಮ ವನ್ಯಜೀವಿ ಪ್ರದೇಶದಲ್ಲಿ ಮರ ಕಡಿದಿರುವ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಂಸದರು ಸೂಚಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರು ಈ ಸಂಬಂಧ ಅಂತಿಮ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರಸ್ತೆ ಬದಿ ಗಿಡಗಂಟೆಗಳು ಬೆಳೆದಿವೆ. ವಿರಾಜಪೇಟೆ-ಮಾಕುಟ್ಟ, ಬಾಳೆಲೆ-ಕಾರ್ಮಾಡು ರಸ್ತೆ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿಗಳು ಗುಂಡಿಮಯವಾಗಿದ್ದು, ಅಪಘಾತಗಳು ಸಂಭವಿಸುತ್ತಿವೆ. ಜೊತೆಗೆ ಮರದ ದಿಮ್ಮಿಗಳನ್ನು ರಸ್ತೆ ಬದಿಯೇ ಇಟ್ಟುಕೊಂಡು ಸಾಗಿಸುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಟಿಂಬರ್‌ಗೆ ಒಂದು ದಿನ ಗಡುವು: ವಿಧಾನ ಪರಿಷತ್‌ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಜಿಲ್ಲೆಯ ಲೋಕೋಪಯೋಗಿ ರಸ್ತೆಗಳಲ್ಲಿ ಟಿಂಬರ್ ಲಾರಿಗಳು ರಾಜಾರೋಷವಾಗಿ ಓಡಾಡುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮವಹಿಸುತ್ತಿಲ್ಲ ಎಂದು ಅಸಮಾಧಾನಗೊಂಡರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ಈ ಹಿಂದೆಯೇ ಮರದ ದಿಮ್ಮಿಗಳನ್ನು ಕಟಾವಣೆ ಮಾಡುವವರು ಸಣ್ಣ ವಾಹನಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನು ಒಂದು ದಿನ ಅವಕಾಶ ನೀಡಲಾಗಿದೆ. ಮತ್ತೆ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.

ಭಾಗಮಂಡಲ-ಕರಿಕೆ ರಸ್ತೆ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದ ಸಂಸದರು, ಈ ಮಾರ್ಗದ ರಸ್ತೆಯನ್ನು ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಸೂಚಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಲೋಕೋಪಯೋಗಿ ಇಲಾಖೆ ಇಇ ಸಿದ್ದೇಗೌಡ ಅವರು ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ ಅಭಿವೃದ್ಧಿಗಾಗಿ 12 ಕೋಟಿ ರು. ಅನುಮೋದನೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.

ಮೈಸೂರು-ಕುಶಾಲನಗರ ಚತುಷ್ಪಥ ಯೋಜನೆ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಭೂಸ್ವಾಧೀನ ಪ್ರಕ್ರಿಯೆಯು ಬಹುತೇಕ ಪೂರ್ಣಗೊಂಡಿದ್ದು, ಕೆಲವು ಪ್ರಕರಣಕ್ಕೆ ಪರಿಹಾರ ವಿತರಣೆಗೆ ಬಾಕಿ ಇದೆ. ಅರಣ್ಯ ಇಲಾಖೆಯಿಂದ ಅನುಮತಿ ಸಹ ದೊರೆಯಬೇಕಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಬಿಎಸ್‌ಎನ್‌ಎಲ್ ವತಿಯಿಂದ 63 ಹೊಸ ಟವರ್‌ಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಇದರಲ್ಲಿ 30 ಕ್ಕೂ ಹೆಚ್ಚು ಟವರ್ ನಿರ್ಮಾಣ ಮಾಡಲಾಗಿದೆ. ನಾಗರಹೊಳೆ ಸೇರಿದಂತೆ ವಿವಿಧ ಪ್ರದೇಶ ವ್ಯಾಪ್ತಿಯಲ್ಲಿ ಟವರ್ ನಿರ್ಮಾಣಕ್ಕೆ ಬಾಕಿ ಇದೆ ಎಂದು ಬಿಎಸ್‌ಎನ್‌ಎಲ್ ವ್ಯವಸ್ಥಾಪಕರು ಮಾಹಿತಿ ನೀಡಿದರು.

ಬೇಸಿಗೆ ಅವಧಿಯಲ್ಲಿ ಬರ ನಿರ್ವಹಣೆ ಹಾಗೂ ಮುಂಗಾರು ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಿದೆ. ಪರಿಹಾರ ವಿತರಣೆಗೆ ಕ್ರಮವಹಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾಹಿತಿ ನೀಡಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಉತ್ತಮವಾಗಿದ್ದು, ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಸೂಚಿಸಿದರು.

ಜಿಲ್ಲೆಯಲ್ಲಿ ಡೆಂಘೀ ನಿಯಂತ್ರಣ ಕುರಿತು ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಜಿಲ್ಲೆಯಲ್ಲಿ 125 ಪ್ರಕರಣಗಳು ದಾಖಲಾಗಿದ್ದು, ಪೊನ್ನಂಪೇಟೆ ಹಾಗೂ ಕುಶಾಲನಗರದಲ್ಲಿ ಹೆಚ್ಚಾಗಿ ಡೆಂಘೀ ಕಂಡುಬಂದಿದೆ. 4 ಪ್ರಕರಣಗಳು ಪಾಸಿಟಿವ್ ಆಗಿದ್ದು, 1 ಪ್ರಕರಣವನ್ನು ಹೊರ ಜಿಲ್ಲೆಗೆ ಕಳುಹಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜ ಮಾತನಾಡಿ, ಜಿಲ್ಲೆಯ ಎಲ್ಲೆಡೆ ಲಾರ್ವ ಸರ್ವೆ ಮಾಡಲಾಗುತ್ತಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಕಿಂಗ್ ಫಾಗಿಂಗ್ ಮಾಡಲಾಗುತ್ತದೆ ಎಂದರು.

ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಕೊನೆಗೆ ಬಂದ ಶಾಸಕರು:

ಸಭೆಯ ಕೊನೆಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಆಗಮಿಸಿದರು. ಅವರು ಬಂದ ಎರಡು ನಿಮಿಷದಲ್ಲಿ ದಿಶಾ ಸಭೆ ಮುಕ್ತಾಯಗೊಂಡಿತು. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಭೆಗೆ ಗೈರಾಗಿದ್ದರು.