ಕನ್ನಡಪ್ರಭ ವಾರ್ತೆ ಬೆಳಗಾವಿ
ದಂಡುಮಂಡಳಿ ನಡೆಸಿದ ಸಾಮಾನ್ಯ ಸಭೆಯಲ್ಲಿ ಹೂವಿನ ಮಾರುಕಟ್ಟೆ ಮಳಿಗೆ ನಿರ್ಮಾಣಕ್ಕೆ ಸಂಬಂಧಿಸಿದ ವಿಚಾರವಾಗಿ ಉದ್ಭವಿಸಿದ ವಿವಾದದ ಹಿನ್ನೆಲೆಯಲ್ಲಿ ಸಂಸದ ಜಗದೀಶ ಶೆಟ್ಟರ್ ಸಭೆಯಿಂದ ಹೊರನಡೆದ ಘಟನೆ ನಡೆದಿದೆ.ಸಭೆಯಲ್ಲಿ ಭಾಗವಹಿಸಿದ್ದ ಸಂಸದರು, ದಂಡುಮಂಡಳಿ ಪ್ರದೇಶದ ಸುಮಾರು 6045 ಚದರ ಮೀಟರ್ ಜಾಗವನ್ನು ಕೃಷಿ ಮಾರುಕಟ್ಟೆ ಸಮಿತಿಯ ಪರವಾನಗಿ ಪಡೆಯದೆ ನಿಯಮಬಾಹಿರವಾಗಿ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದರು. ಇದರಿಂದ ದಂಡುಮಂಡಳಿಗೆ ಲಕ್ಷಾಂತರ ರುಪಾಯಿ ನಷ್ಟವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.
ಯಾವುದೇ ಜಾಗವನ್ನು ಹಂಚಿಕೆ ಮಾಡುವ ಮೊದಲು ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆದರೆ, ಬೆಳಗಾವಿ ಲೋಕಸಭೆಯನ್ನು ಪ್ರತಿನಿಧಿಸುವ ಸಂಸದರಿಗೆ ಮಾಹಿತಿ ನೀಡದೆ ಠರಾವು ಪಾಸ್ ಮಾಡಿ ಟೆಂಡರ್ ಆಹ್ವಾನಿಸಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈ ಹಿನ್ನೆಲೆಯಲ್ಲಿ ಹಿಂದಿನ ಠರಾವನ್ನು ರದ್ದುಗೊಳಿಸಿ ಹೊಸ ಠರಾವನ್ನು ಸಭೆಯಲ್ಲಿ ಪ್ರಸ್ತಾಪಿಸಬೇಕು ಎಂದು ಸಂಸದರು ಸಭಾಧ್ಯಕ್ಷರಿಗೆ ಸೂಚಿಸಿದರು. ಆದರೆ, ಅಧ್ಯಕ್ಷರು ಅದನ್ನು ನಿರಾಕರಿಸಿ ಹಿಂದಿನ ಸಭೆಯ ಠರಾವನ್ನೇ ಪರಿಗಣಿಸಲಾಗುವುದು ಎಂದು ತಿಳಿಸಿದಾಗ, ಅಧ್ಯಕ್ಷರ ನಿಲುವನ್ನು ಖಂಡಿಸಿದ ಜಗದೀಶ ಶೆಟ್ಟರ್ ಅವರು ಸಭೆಯಲ್ಲಿ ಭಾಗವಹಿಸುವುದನ್ನು ಅರ್ಧದಲ್ಲೇ ನಿಲ್ಲಿಸಿ ಸಭಾ ಕೊಠಡಿಯಿಂದ ಹೊರನಡೆದರು.