ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಮಹಾಕವಿ ರನ್ನ ನಮ್ಮ ಬೆಳಗಲಿಯಲ್ಲಿ ಜನ್ಮತಾಳಿದ್ದು ನಮ್ಮಲ್ಲರ ಪುಣ್ಯ. ಇಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು. ಕವಿರತ್ನತ್ರಯರಲ್ಲಿ ಒಬ್ಬರಾದ ಚಕ್ರವರ್ತಿ ರನ್ನನ ಇತಿಹಾಸ ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೆಳಗಲಿ ವಿದ್ಯಾವರ್ಧಕ ಸಂಘದ ಶಿಕ್ಷಕ ಎ.ಎಂ. ಕಂಬಾರ ಹೇಳಿದರು.ಸಮೀಪದ ರನ್ನ ಬೆಳಗಲಿಯಲ್ಲಿ ಜರುಗಿದ ಶಾಲಾ ಹಂತದ ಒಂದು ದಿನದ ರನ್ನ ವೈಭವ-೨೦೨೬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಕ್ರವರ್ತಿ ರನ್ನನ ಸಾಹಿತ್ಯ ಕನ್ನಡ ಭಾಷೆಯ ಸೊಗಡಿನ ಪಾಂಡಿತ್ಯವನ್ನು ತನ್ನ ಶ್ರೇಷ್ಠ ಗ್ರಂಥಗಳ ಮೂಲಕ ಎತ್ತಿ ತೋರಿಸುತ್ತದೆ. ರನ್ನನ ಗದಾಯುದ್ಧ,(ಸಾಹಸ ಭೀಮ ವಿಜಯ) ಅಜಿತ ಪುರಾಣ, ರನ್ನ ಕಂದ, ಪರಶುರಾಮ ಚರಿತ ಮುಂತಾದವುಗಳು ರನ್ನನ ಇತಿಹಾಸ ಸಾಕ್ಷೀಕರಿಸುತ್ತವೆ. ರನ್ನನ ಕಾವ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು, ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಳೆಗನ್ನಡ ಮತ್ತು ಕನ್ನಡ ಸಾಹಿತ್ಯ ಪಸರಿಸುವ ಕೆಲಸ ರನ್ನ ವೈಭವದ ಮೂಲಕ ಜರುಗಬೇಕು. ಮಹಾಕವಿ ರನ್ನನ ತತ್ವ ಚಿಂತನೆಗಳು, ಸಾಹಿತ್ಯಿಕ ಚಟುವಟಿಕೆಗಳು ರಾಜ್ಯದ ಪ್ರತಿ ಶಾಲೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಬೇಕು. ರನ್ನ ವೈಭವ ಇದ್ದಾಗ ಮಾತ್ರ ಕಾಳಜಿ ಬೇಡ ,ನಿತ್ಯ ರನ್ನನ ಉಕ್ತಿಗಳನ್ನು ಮಕ್ಕಳಿಂದ ಹೇಳಿಸಬೇಕು. ಸರ್ಕಾರ ಹಮ್ಮಿಕೊಂಡಾಗ ಮಾತ್ರ ರನ್ನ ವೈಭವ ಮಾಡುತ್ತೇವೆಂಬ ಭಾವನೆ ಬೇಡ ಸರ್ಕಾರ ಮಾಡಿದರೂ ಸರಿ, ಮಾಡದಿದ್ದರೂ ಸರಿ ಊರಲ್ಲಿರುವ ಸರ್ವಧರ್ಮೀಯರ ಚೇತಾತ್ಮಗಳು ಒಂದುಗೂಡಿ ಪ್ರತಿ ವರ್ಷ ನಾವೆಲ್ಲರೂ ರನ್ನ ವೈಭವ ವಿಜೃಂಭಣೆಯಿಂದ ಆಚರಿಸಬೇಕು ಎಂದರು.
ಮುಧೋಳದಲ್ಲಿ ಒಂದು ದಿನ, ರನ್ನ ಬೆಳಗಲಿಯಲ್ಲಿ ಎರಡು ದಿನ, ರನ್ನ ವೈಭವ ಕಾರ್ಯಕ್ರಮ ಜರಗಬೇಕು. ನಮ್ಮೂರಲ್ಲಿರುವ ಕಲಾವಿದರಿಗೆ ಆದ್ಯತೆ ಸಿಗಬೇಕು. ರನ್ನನ ಗದಾಯುದ್ಧ ಹಳ್ಳಿಯಿಂದ ದಿಲ್ಲಿಯವರೆಗೆ ಎಂಬ ನಾಟಕವನ್ನು ಜಿಲ್ಲೆಯಾದ್ಯಂತ ಸರ್ಕಾರ ಪ್ರದರ್ಶಿಸುವ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.ಶಾಲಾ ಮಕ್ಕಳು ರನ್ನನ ಬಗ್ಗೆ ಬರೆದ ಸ್ವರಚಿತ ಕವನಗಳನ್ನು ವಾಚನ ಮಾಡಿದರು. ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಪಿ ಚೋಪಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮಕ್ಕಳು, ಎತ್ತಿನ ಬಂಡಿಯಲ್ಲಿ ರನ್ನನ ಭಾವಚಿತ್ರ ಇಟ್ಟು ಮೆರವಣಿಗೆ ನಡೆಯಿತು. ಶಾಲಾ ಆವರಣದಿಂದ ಬಾಜಾ ಭಜಂತ್ರಿ, ಡೊಳ್ಳು, ಕರಡಿಮಜಲು, ಝಾಂಜ್ ಮೇಳ, ಕೋಲಾಟ, ಲೇಜಿಮ್, ಛತ್ರಚಾಮರ, ರನ್ನನ ಗದೆಗಳೊಂದಿಗೆ ಮೆರವಣಿಗೆಗೆ ಮೆರೆಗು ತಂದಿದ್ದವು. ಪ್ರಸಾಂಕೇತಿಕ ರನ್ನ ವೈಭವಕ್ಕೆ ಚಾಲನೆ ನೀಡಲಾಯಿತು. ಎಸ್.ಬಿ. ರೆಡ್ಡೆರಟ್ಟಿ, ಎಂ.ಬಿ. ಸಾಬೋಜಿ, ಸಿ.ಎ. ಕುಂಬಾರ, ಎಂ.ಕೆ. ಕುಲಗೋಡ, ಎಂ.ಎಸ್. ಗಾಣಿಗೇರ, ವಿ.ಕೆ. ಬಕರೆ, ಎ.ಜಿ. ಮೂಡಲಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿಕ್ಷಕ ಕೆ ಎ ಧಡೂತಿ ನಿರೂಪಿಸಿ, ವಂದಿಸಿದರು.