ಪೂರ್ಣಿಮಾ ಸುರೇಶ್, ಕಾವ್ಯಶ್ರೀ ಕಲಬುರ್ಗಿಗೆ ಮುದ್ದಣ ಕಾವ್ಯ ಪ್ರಶಸ್ತಿ

| Published : Oct 26 2024, 01:03 AM IST

ಪೂರ್ಣಿಮಾ ಸುರೇಶ್, ಕಾವ್ಯಶ್ರೀ ಕಲಬುರ್ಗಿಗೆ ಮುದ್ದಣ ಕಾವ್ಯ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

೧೯೭೯ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ತಲಾ 10 ಸಾವಿರ ರುಪಾಯಿ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ೨೦೨೫ರ ಫೆಬ್ರವರಿ ತಿಂಗಳಲ್ಲಿ ಕಾಂತಾವರದ ಕನ್ನಡ ಭವನದಲ್ಲಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ ೨೦೨೪ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಗೆ ಉಡುಪಿಯ ಪೂರ್ಣಿಮಾ ಸುರೇಶ್ ಅವರ ‘ಸಂತೆಯೊಳಗಿನ ಏಕಾಂತ’ ಮತ್ತು ಕಲಬುರ್ಗಿಯ ಕಾವ್ಯಶ್ರೀ ಮಹಾಗಾಂವಕರ ಅವರ ‘ಒಲವ ಒರತೆಯ ಜಾಡಿನಲ್ಲಿ’ ಎಂಬ ಎರಡು ಹಸ್ತಪ್ರತಿಗಳು ಆಯ್ಕೆಯಾಗಿವೆ.

ಈ ಎರಡೂ ಹಸ್ತಪ್ರತಿಗಳು ತೀರ್ಪುಗಾರರಿಂದ ಸಮಾನ ಅಂಕಗಳನ್ನು ಪಡೆದಿರುವುದರಿಂದ ಎರಡು ಹಸ್ತಪ್ರತಿಗಳನ್ನು ಕೂಡಾ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ.ನಾ. ಮೊಗಸಾಲೆ ತಿಳಿಸಿದ್ದಾರೆ.

ಈ ಸಾಲಿನ ಸ್ಪರ್ಧೆಗೆ 59 ಹಸ್ತಪ್ರತಿಗಳು ಬಂದಿದ್ದು ಪ್ರಸಿದ್ಧ ವಿಮರ್ಶಕ ಮತ್ತು ಕತೆಗಾರ ಬೆಳಗೋಡು ರಮೇಶ ಭಟ್ (ವಿಭಾವರಿ ಭಟ್), ಮೈಸೂರು ಮತ್ತು ವಿಮರ್ಶಕರಾದ ವಿಕಾಸ ಹೊಸಮನಿ ಹಾವೇರಿ, ಡಾ. ರವಿಶಂಕರ ಜಿ.ಕೆ. ಉಜಿರೆ ಅವರು ನೀಡಿದ ಅಂಕಗಳ ಆಧಾರದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

೧೯೭೯ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ತಲಾ 10 ಸಾವಿರ ರುಪಾಯಿ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ೨೦೨೫ರ ಫೆಬ್ರವರಿ ತಿಂಗಳಲ್ಲಿ ಕಾಂತಾವರದ ಕನ್ನಡ ಭವನದಲ್ಲಿ ನಡೆಯಲಿದೆ. ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರದಾನ ಮಾಡುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.