ಮುಸ್ಲಿಮರಿಲ್ಲದ ಕೆ. ಕಲ್ಲಹಳ್ಳಿಯಲ್ಲಿ ಮೊಹರಂ ಆಚರಣೆ

| Published : Jul 18 2024, 01:33 AM IST

ಮುಸ್ಲಿಮರಿಲ್ಲದ ಕೆ. ಕಲ್ಲಹಳ್ಳಿಯಲ್ಲಿ ಮೊಹರಂ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಂ ಸಮುದಾಯವೇ ಇಲ್ಲದ ತಾಲೂಕಿನ ಕೆ. ಕಲ್ಲಹಳ್ಳಿ ಗ್ರಾಮದಲ್ಲಿ ಹಿಂದೂಗಳೇ ಸೇರಿ ಮೊಹರಂ ಹಬ್ಬವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವ ಮೂಲಕ ಭಾವೈಕ್ಯ ಸಾರಿದ್ದಾರೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಮುಸ್ಲಿಂ ಸಮುದಾಯವೇ ಇಲ್ಲದ ತಾಲೂಕಿನ ಕೆ. ಕಲ್ಲಹಳ್ಳಿ ಗ್ರಾಮದಲ್ಲಿ ಹಿಂದೂಗಳೇ ಸೇರಿ ಮೊಹರಂ ಹಬ್ಬವನ್ನು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವ ಮೂಲಕ ಭಾವೈಕ್ಯ ಸಾರಿದ್ದಾರೆ.

ಗ್ರಾಮದಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬ ಇಲ್ಲದಿದ್ದರೂ ಪ್ರತಿವರ್ಷ ಗ್ರಾಮಸ್ಥರು ಗ್ರಾಮದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಪಂಜಾ ಪ್ರತಿಷ್ಠಾಪಿಸಿ ಅಲಾಯಿ ದೇವರಿಗೆ ಭಕ್ತಿ ಭಾವದಿಂದ ಪೂಜಿಸುತ್ತಾರೆ.

ಗ್ರಾಮದಲ್ಲಿ ಲಿಂಗಾಯತರು, ಕುರುಬ, ಕಮ್ಮಾರ, ಗೊಲ್ಲ ಸೇರಿ ಇತರ ಸಮುದಾಯದವರೇ ನಿವಾಸಿಗಳಾಗಿದ್ದಾರೆ. ಆದರೂ ಪೂರ್ವಜರ ಕಾಲದಿಂದಲೂ ಮೊಹರಂ ಆಚರಣೆ ಮಾಡುತ್ತಾ ಬಂದಿದ್ದಾರೆ.

ಮೊಹರಂ ಹಬ್ಬದ ಅಂಗವಾಗಿ ಸಮೀಪದ ಹುಲಿಕಟ್ಟಿ ಗ್ರಾಮದ ಮುಸ್ಲಿಂ ಸಮುದಾಯದ ವ್ಯಕ್ತಿರೊಬ್ಬರನ್ನು ಊರಿಗೆ ಕರೆಯಿಸಿ ಅವರ ಮಾರ್ಗದರ್ಶನದಲ್ಲಿ ಕಳೆದ ಐದು ದಿನ ಅಲಾಯಿ ದೇವರ ಪೂಜೆ, ಪುನಸ್ಕಾರ, ಧಾರ್ಮಿಕ ವಿಧಿ-ವಿಧಾನಗಳನ್ನು ಸಂಪ್ರದಾಯಬದ್ಧವಾಗಿ ನೆರವೇರಿಸಿ, ಮೊಹರಂ ಕೊನೆಯ ದಿನ ಬುಧವಾರ ಮೆರವಣಿಗೆ ನಡೆಸಲಾಯಿತು.

ಬಹುತೇಕ ಕಡೆ ಮೊಹರಂ ಹಬ್ಬದ ಅಲಾಯಿ ದೇವರನ್ನು ಮುಸ್ಲಿಂ ಸಮುದಾಯದವರೇ ಮೆರವಣಿಗೆಯಲ್ಲಿ ಹೊತ್ತೊಯ್ಯುವುದು ಸಾಮಾನ್ಯ. ಆದರೆ ಈ ಗ್ರಾಮದಲ್ಲಿ ಹಿಂದೂ ಯುವಕರೇ ಅಲಾಯಿ ದೇವರ ಕುದುರೆಗಳಾಗುತ್ತಾರೆ. ಮೆರವಣಿಗೆ ವೇಳೆ ವಿವಿಧ ವೇಷ ಧರಿಸಿ ಅಲಾಯಿ ದೇವರನ್ನು ಅತ್ಯಂತ ಭಕ್ತಿಯಿಂದ ಹೊತ್ತೊಯ್ಯುತ್ತಾರೆ.

ಮೊಹರಂ ಅಂತಿಮ ದಿನ ಬೆಳಗಿನ ಜಾವ ಅಲಾಯಿ ದೇವರ ಅಗ್ನಿ ಹಾಯುವ ಆಚರಣೆ ನಡೆಯಿತು. ಆನಂತರ ಸಂಜೆ ಗ್ರಾಮದ ಹೊರವಲಯದ ಬಳಿ ಅಲಾಯಿ ದೇವರಿಗೆ ಗಂಗೆ ಪೂಜೆ ನರೆವೇರಿಸಿ, ಬಳಿಕ ಮೂಲಸ್ಥಾನಕ್ಕೆ ಅಲಾಯಿ ದೇವರನ್ನು ಕರೆತಂದು ಕೂರಿಸಲಾಯಿತು.ಪೂರ್ವಜರ ಕಾಲದಿಂದಲೂ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆ ಮಾಡುತ್ತ ಬರಲಾಗಿದೆ. ಯಾವುದೇ ಜಾತಿ ಭೇದವಲ್ಲದೇ ಈ ಹಬ್ಬವನ್ನು ಸೌಹಾರ್ದತೆಯಿಂದ ಆಚರಿಸುತ್ತೇವೆ ಎಂದು ಗ್ರಾಮದ ಟ್ರಸ್ಟ್ ಕಮಿಟಿ ಅಧ್ಯಕ್ಷ ಕೌಟಿ ದೇವೇಂದ್ರಪ್ಪ ಹೇಳುತ್ತಾರೆ.