ಅಗಸೂರಿನಲ್ಲಿ ಗುಡ್ಡ ಕುಸಿತ

| Published : Jul 18 2024, 01:32 AM IST

ಸಾರಾಂಶ

ಅಂಕೋಲಾ ತಾಲೂಕು ಕೇಂದ್ರದಿಂದ 17 ಕಿಮೀ ದೂರದ ಅಗಸೂರು ಬಳಿಯ ಹಳಕೇರಿ ಗುಡ್ಡದ ಮೇಲ್ಭಾಗ ಏಕಾಏಕಿ ಕುಸಿಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಂಕೋಲಾ: ಶಿರೂರಿನಲ್ಲಿ ಮಣ್ಣು ಕುಸಿತ ಭೀಕರ ದುರಂತದ ಬೆನ್ನಲ್ಲೆ ಬುಧವಾರ ಅಗಸೂರಿನ ಹಳಕೇರಿ ಗುಡ್ಡ ಏಕಾಏಕಿ ಕುಸಿಯಲು ಆರಂಭಿಸಿದ್ದು, ಆತಂಕ ಮೂಡಿಸಿದೆ.

ಅಂಕೋಲಾ ತಾಲೂಕು ಕೇಂದ್ರದಿಂದ 17 ಕಿಮೀ ದೂರದ ಅಗಸೂರು ಬಳಿಯ ಹಳಕೇರಿ ಗುಡ್ಡದ ಮೇಲ್ಭಾಗ ಏಕಾಏಕಿ ಕುಸಿಯುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆದರೆ ಹಳಕೇರಿ ಗುಡ್ಡದ ಕೆಳಭಾಗದಲ್ಲಿ ಇನ್ನೊಂದು ಗುಡ್ಡವಿದ್ದು, ಕುಸಿದು ಬಂದ ಗುಡ್ಡದ ಮಣ್ಣನ್ನು ನಿಯಂತ್ರಿಸಬಹುದು ಎನ್ನಲಾಗುತ್ತಿದೆ. 5ರಿಂದ 6 ಎಕರೆ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿದೆ ಎಂದು ಪ್ರತ್ಯಕ್ಷದರ್ಶಿ ಬೀರಣ್ಣಾ ನಾಯಕ ಪುಕ್ಕಜ್ಜಿಮನೆ ತಿಳಿಸಿದ್ದಾರೆ.

ಆದರೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಕುಸಿತ ತೀವ್ರವಾದರೆ ಅವಘಡಗಳಾಗುವ ಸಾಧ್ಯತೆ ಇದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಹಳಕೇರಿ ಗುಡ್ಡ ಕುಸಿತದತ್ತ ಕಣ್ಣಿಟ್ಟಿದ್ದು, ಎಲ್ಲರಲ್ಲೂ ಅತಂಕ ಮೂಡಿಸಿದೆ. ಶಿರೂರು ಗುಡ್ಡ ಕುಸಿತದ ಭೀತಿಯ ಬೆನ್ನಲ್ಲೇ ಅಗಸೂರಿನ ಹಳಕೇರಿ ಗುಡ್ಡ ಕುಸಿತ ಗ್ರಾಮಸ್ಥರಲ್ಲಿ ಚಿಂತೆಗೀಡು ಮಾಡಿದೆ. ಯಾಣದಲ್ಲಿ ಭೂಕುಸಿತಕಾರವಾರ: ಕುಮಟಾ ತಾಲೂಕಿನ ಯಾಣ ಭೈರವೇಶ್ವರ ದೇವಾಲಯದ ಮುಂಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.ದೇವಾಲಯದ ಮುಂಭಾಗದಲ್ಲಿ ಕೆಳಗಡೆ ಭೂಕುಸಿತ ಉಂಟಾಗಿದೆ. 3 ವರ್ಷಗಳ ಹಿಂದೆಯೂ ಇಲ್ಲಿ ಭೂಕುಸಿತ ಉಂಟಾಗಿತ್ತು. ಭಾರಿ ಮಳೆಯಿಂದಾಗಿ ಮಂಗಳವಾರ ನಸುಕಿನಲ್ಲಿ ಭೂಕುಸಿತ ಉಂಟಾಗಿದೆ.

ಯಾಣ ದೇವಾಲಯದ ಎದುರು ಭೂಕುಸಿತ ಉಂಟಾಗುತ್ತಿರುವುದನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದೆ ಭಾರೀ ಅನಾಹುತ ಆಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಗ್ರಾಪಂ ಸದಸ್ಯ ರಾಜೀವ ಭಟ್ ತಿಳಿಸಿದ್ದಾರೆ. ಗಂಗಾವಳಿ- ಮಂಜುಗುಣಿ ಸಂಪರ್ಕ ರಸ್ತೆ ಸಂಚಾರಕ್ಕೆ ಮುಕ್ತ

ಗೋಕರ್ಣ: ಗಂಗಾವಳಿ- ಮಂಜುಗುಣಿ ನಡುವಣ ಸಂಪರ್ಕ ಕಲ್ಪಿಸುವ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯಲ್ಲಿ ವಾಹನ ಸಂಚಾರಕ್ಕೆ ಅಂತೂ ಅನುವು ಮಾಡಿದ್ದರಿಂದ ಶಿರೂರ ದುರ್ಘಟನೆಯ ತುರ್ತು ಸಂದರ್ಭದಲ್ಲಿ ಸಂಚಾರಕ್ಕೆ ನೆರವಾಗಿದೆ.ಆರು ವರ್ಷದಿಂದ ಕುಂಟುತ್ತಾ ಸಾಗಿತ್ತು. ಸಾರ್ವಜನಿಕರು ಮತ್ತು ಸಂಘಟನೆಗಳ ಹೋರಾಟದ ಫಲವಾಗಿ ಜಿಡ್ಡು ಹಿಡಿದ ಆಡಳಿತ ಎಚ್ಚೆತ್ತುಕೊಂಡ ಪರಿಣಾಮ ಅರೆಬರೆ ಸ್ಥಿತಿಯಲ್ಲೆ ಸಂಚಾರಕ್ಕೆ ತೆರೆದುಕೊಂಡಿದೆ.ಹೆದ್ದಾರಿಯಲ್ಲಿ ಧರೆ ಕುಸಿತದ ಪರಿಣಾಮ ಕಡಿತಗೊಂಡ ಅಂಕೋಲಾ- ಕುಮಟಾ ಸಂಪರ್ಕಕ್ಕೆ ಪರ್ಯಾಯ ಮಾರ್ಗವಾಗಿ ಸಹಾಯಕ್ಕೆ ನಿಂತಿದೆ. ಸೇತುವೆ ಮೇಲೆ ಬಸ್ ಸಂಚಾರ ಇಲ್ಲದಿದ್ದರೂ ಉಳಿದ ವಾಹನಗಳ ಮೂಲಕ ಅಗತ್ಯ ಕೆಲಸಕ್ಕೆ ನೆರವಾಗಿದೆ.

ಮಾತು ಕೇಳುತ್ತಿಲ್ಲ ಎಂದ ಮಾಜಿ ಶಾಸಕಿ: ಗಂಗಾಗಳಿಯಲ್ಲಿ ದೊರೆತ ಶಿರೂರ ದುರಂತದಲ್ಲಿ ಮೃತಪಟ್ಟವರ ಪಾರ್ಥೀವ ಶರೀರವನ್ನು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮರಣೋತ್ತರ ಪರೀಕ್ಷೆಗೆ ತಂದ ವೇಳೆ ಇದ್ದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರನ್ನು ಸೇತುವೆ ಬಗ್ಗೆ ಪ್ರಶ್ನಿಸಿದಾಗ, ಗುತ್ತಿಗೆ ಕಂಪನಿಯವರು ಯಾರ ಮಾತನ್ನು ಕೇಳುತ್ತಿಲ್ಲ. ನನ್ನ ಅವಧಿಯಲ್ಲಿ ಸಾಕಷ್ಟು ಬಾರಿ ಹೇಳಿ ಎಚ್ಚರಿಕೆಯನ್ನು ನೀಡಿದ್ದೆ. ಆದರೂ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.