ಸಾರಾಂಶ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ತಾಲೂಕಿಗೆ ಮಂಜೂರಾಗಿರುವ ₹344 ಕೋಟಿ ಅನುದಾನದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಜನವಿರೋಧ ನಡುವೆಯೂ ಸೋಮವಾರ ಪೊಲೀಸ್ ಬಿಗಿ ಬಂದೋಬಸ್ತ್‌ನೊಂದಿಗೆ ಚಾಲನೆ ನೀಡಲಾಯಿತು.ತಾಲೂಕಿನ ಕೋಡ್ಲು ಗ್ರಾಮದ ಸ.ನಂ. 142ರಲ್ಲಿ ಈ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಬೆಳಗ್ಗಿನ ಜಾವ ಉದ್ದೇಶಿತ ಯೋಜನಾ ಸ್ಥಳಕ್ಕೆ ಯಾರೂ ತೆರಳದಂತೆ ರಸ್ತೆಗಳಿಗೆ ರೈತರು ಟ್ರ್ಯಾಕ್ಟರ್, ಕಾರು, ಬೈಕ್ ಸೇರಿದಂತೆ ಇನ್ನಿತರ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಲಾಗಿತ್ತು. ಬಳಿಕ ಕಾಮಗಾರಿಗೆ ಅಗತ್ಯವಾದ ಸರಕು, ವಾಹನ, ಜೆಸಿಬಿಗಳಿಗೆ ತೆರಳಲು ಅವಕಾಶ ಕಲ್ಪಿಸಿ, 70ಕ್ಕೂ ಹೆಚ್ಚು ಪೊಲೀಸ್ ಬಂದೋಬಸ್ತ್‌ನಲ್ಲಿ ಜಿಲ್ಲಾಡಳಿತ ಕಾಮಗಾರಿಗೆ ಚಾಲನೆ ನೀಡಲಾಯಿತು.
ರೈತರ ಪ್ರತಿಭಟನೆ:ಕೋಡ್ಲು ಗ್ರಾಮದ ಈ ಸ್ಥಳದಲ್ಲಿ ಬೆಳಗಿನಿಂದಲೇ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆಯರೂ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ನೆರೆದಿದ್ದರು. ಅನೇಕ ರೈತರು ಊರಿಗೆ ಸಂಪರ್ಕಿಸುವ ರಸ್ತೆಯಲ್ಲಿಯೇ ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ಅವಾಚ್ಯವಾಗಿ ಸರ್ಕಾರ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.ಬ್ಯಾರಿಕೇಡ್ ಮೂಲಕ ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ಜನರು ರಸ್ತೆಗಳಿಗೆ ಇಳಿಯದಂತೆ ನಿರ್ಬಂಧಿಸಲಾಗಿತ್ತು. ಹೊಸಹಳ್ಳಿ, ಹೆಗ್ಗೋಡು, ಮುಳುಬಾಗಿಲು, ಮೇಲಿನ ಕುರುವಳ್ಳಿ, ಬಸವಾನಿ, ತೀರ್ಥಮುತ್ತೂರು ಸೇರಿದಂತೆ ಅನೇಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಜನರು ಪ್ರತಿಭಟನೆಗೆ ಬೆಂಬಲಿಸಿದ್ದರು.
ಪೊಲೀಸರು ಅಹಿತಕರ ಘಟನೆ ಸಂಭವಿಸದಂತೆ ಕಟ್ಟೆಚ್ಚರ ವಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ಡಿವೈಎಸ್ಪಿ ಗಜಾನನ ವಾಮನ ಸುತಾರ ರೈತರನ್ನು ಸಮಾಧಾನಿಸಲು ಪ್ರಯತ್ನಿಸಿದರು. ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿ ಆದೇಶದನ್ವಯ ಕಾಮಗಾರಿ ಆರಂಭಿಸಲಾಗಿದೆ. ರೈತರು ನಮ್ಮೊಂದಿಗೆ ಸಹಕರಿಸಬೇಕು ಎಂದು ಎಚ್ಚರಿಕೆ ನೀಡಿದರು.ಯೋಜನೆ ಜಾಗ ಸೂಕ್ತವಾಗಿಲ್ಲ:
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರೈತ ಮುಖಂಡ ಕೊಡ್ಲು ವೆಂಕಟೇಶ್ ಅವರು, ಕುಡಿಯುವ ನೀರಿನ ಯೋಜನೆಗೆ ನಮ್ಮ ವಿರೋಧವಿಲ್ಲ ಎಂಬುದನ್ನು ಲಾಗಾಯ್ತಿನಿಂದ ಹೇಳಿದ್ದೇವೆ. ಈ ಯೋಜನೆ ಅವೈಜ್ಞಾನಿಕವಾಗಿದ್ದು, ಯೋಜನೆಗೆ ಗುರುತಿಸಿರುವ ಜಾಗ ಸೂಕ್ತವಾಗಿಲ್ಲ. ವಾರಾಹಿ ನದಿಯಿಂದ ನೀರನ್ನು ಎತ್ತುವುದಾದರೆ ಇಲ್ಲಿ ಟ್ರೀಟ್‌ಮೆಂಟ್ ಪ್ಲಾಂಟ್ ಮಾಡುವ ಉದ್ದೇಶವಾದರೂ ಏನು ಎಂಬುದು ತಿಳಿಯುತ್ತಿಲ್ಲ. ಮಾಲತಿ ನದಿ ದಡದಲ್ಲಿ ಸರ್ವೆ ಮಾಡುತ್ತಿದ್ದು, ಇದರ ಹಿಂದಿನ ಹಿಡನ್ ಅಜೆಂಡಾ ಬಯಲಾಗಿದೆ ಎಂದೂ ಆರೋಪಿಸಿದರು.ಹೆಗ್ಗೋಡು ಗ್ರಾಪಂ ಸದಸ್ಯೆ ಇಂದಿರಮ್ಮ ಮಾತನಾಡಿ, ಪ್ರತಿ ಗ್ರಾಪಂ ಮಟ್ಟದಲ್ಲಿ ಇರುವ ಸಂಪನ್ಮೂಲವನ್ನು ಬಳಸಿ ಕುಡಿಯುವ ನೀರಿನ ಯೋಜನೆಯನ್ನು ಮಾಡುವುದು ಸೂಕ್ತ. ಗ್ರಾಮಸ್ಥರ ಅಭಿಪ್ರಾಯವನ್ನು ದಿಕ್ಕರಿಸಿ ಇಲ್ಲಿಂದಲೇ ನೀರನ್ನು ಸರಬರಾಜು ಮಾಡಬೇಕೆಂಬ ಹಠ ಸರಿಯಲ್ಲ ಎಂದು ಹೇಳಿದರು.
ಕರ್ನಾಟಕ ವಿದ್ಯುತ್ ನಿಗಮದ ಷರತ್ತು:ಕಟ್ಟೆಕೊಪ್ಪ ಗ್ರಾಮದ ದೊಡ್ಡಿನಮನೆ ಸ.ನಂ. 106ರಲ್ಲಿ ಡೆಡ್ ಸ್ಟೋರೇಜಿನಿಂದ ನೀರನ್ನು ಎತ್ತುವ 0.129 ಟಿಎಂಸಿ ನೀರಿನಿಂದ ನಿಗಮಕ್ಕಾಗುವ ನಷ್ದಟ ₹97.77 ಲಕ್ಷ ಭರಿಸುವುದೂ ಸೇರಿದಂತೆ 13 ಷರತ್ತುಗಳನ್ನು ವಿಧಿಸಿ ಕರ್ನಾಟಕ ವಿದ್ಯುತ್ ನಿಗಮದಿಂದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರಿಗೆ ಜ.24ರಂದು ಪತ್ರ ಬರೆಯಲಾಗಿದೆ. ಈ ಷರತ್ತುಗಳಿಗೆ ಸಮ್ಮತಿಸಿದಲ್ಲಿ ಮಾತ್ರ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಮಂಡಿಸುವುದಾಗಿಯೂ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
ಸ್ಥಳದಲ್ಲಿ ಉಪವಿಭಾಗಾಧಿಕಾರಿ ಸತ್ಯನಾರಾಯಣ, ಎಇಇ ಚಂದ್ರಶೇಖರ್, ಇಒ ಎನ್.ಶೈಲಾ, ತಾಪಂ ಮಾಜಿ ಸದಸ್ಯ ಬಾಳೇಹಳ್ಳಿ ಪ್ರಭಾಕರ್, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿರಿಬೈಲು ಧರ್ಮೇಶ್, ತಲುಬಿ ರಾಘವೇಂದ್ರ, ಯೋಜನೆಯ ಗುತ್ತಿಗೆದಾರ ಡಿ.ಎಸ್. ಅಬ್ದುಲ್ ರೆಹಮಾನ್ ಮತ್ತು ಅಧಿಕಾರಿಗಳು ಇದ್ದರು.- - - -26ಟಿಟಿಎಚ್02:
ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿಗೆ ಮಂಜೂರಾಗಿರುವ ₹344 ಕೋಟಿ ಅನುದಾನದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಪ್ರಾರಂಭಗೊಂಡಿತು.- - -
-26ಟಿಟಿಎಚ್02ಎ: ತೀರ್ಥಹಳ್ಳಿ ತಾಲೂಕಿಗೆ ಮಂಜೂರಾಗಿರುವ ₹344 ಕೋಟಿ ವೆಚ್ಚದ ಅನುದಾನದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ವಿರೋಧಿಸಿ ಸ್ಥಳದಲ್ಲಿ ರೈತರು, ವಿವಿಧ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.