ರುದ್ರಭೂಮಿ ಒತ್ತುವರಿ ತೆರವುಗಳಿಸಲು ಆಗ್ರಹಿಸಿ ಧರಣಿ

| Published : Feb 27 2024, 01:32 AM IST

ರುದ್ರಭೂಮಿ ಒತ್ತುವರಿ ತೆರವುಗಳಿಸಲು ಆಗ್ರಹಿಸಿ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಔರಾದ್ ಪಟ್ಟಣದ ಅಮರೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ರುದ್ರಭೂಮಿ ಒತ್ತುವರಿ ತೆರವುಗೊಳಿಸಲು ಆಗ್ರಹಿಸಿ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಔರಾದ್

ಔರಾದ್ ಪಟ್ಟಣದ ಅಮರೇಶ್ವರ ದೇವಸ್ಥಾನ ಪಕ್ಕದಲ್ಲಿರುವ ರುದ್ರಭೂಮಿ ಸ್ಥಳ ಒತ್ತುವರಿ ತೆರವುಗೊಳಿಸುವ ಸಂಬಂಧ ಕನ್ನಡಪರ ಸಂಘಟನೆಗಳಿಂದ ಅನಿರ್ಧಿಷ್ಠಾವಧಿ ಧರಣಿ ನಡೆಯುತ್ತಿದ್ದು, ನಾಲ್ಕನೇ ದಿನ ಪ್ರತಿಭಟನಾಕಾರರು ಅಣಕು ಶವಯಾತ್ರೆ ಮೆರವಣಿಗೆ ಮೂಲಕ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯತೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಪಟ್ಟಣದ ತಹಸೀಲ್ದಾರ್‌ ಆವರಣದಲ್ಲಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಸೇರಿಕೊಂಡು ತಹಸೀಲ್ದಾರ್‌ ಕಚೇರಿ ಎದುರೆ ಶವವಿಟ್ಟು ಹೂಳಲು ಸ್ಥಳವಿಲ್ಲ ಎಂದು ಅಳುತ್ತ ಅಣಕು ಶವಯಾತ್ರೆ ಮೆರವಣಿಗೆ ಮಾಡಿದರು.

ಈ ವೇಳೆ ಮಾತನಾಡಿದ ಹೋರಾಟಗಾರ ಶಿವಶಂಕರ ನಿಷ್ಪತೆ, ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ರುದ್ರಭೂಮಿ ಸ್ಥಳ ಅತಿಕ್ರಮಣ ಮಾಡಿ ಮಳಿಗೆಗಳು ನಿರ್ಮಾಣವಾದರೂ ಕೂಡ ಸಂಬಂಧಿತ ಆಧಿಕಾರಿಗಳು ಮಾತ್ರ ಮೌನ ವಹಿಸಿದ್ದಾರೆ. ಈ ಮೌನ ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅಸಮಾಧಾನ ಹೊರಹಾಕಿದರು.

ಲಿಂಗಾಯತ ಸಮಾಜ ಯುವ ಸಂಘದ ಅಧ್ಯಕ್ಷ ವಿರೇಶ ಅಲಮಾಜೆ ಮಾತನಾಡಿ, ಸರ್ಕಾರ ಈ ವಿಷಯ ಗಂಭೀರವಾಗಿ ಪರಿಗಣಿಸಿ ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಯಾವ ಕ್ರಮ ಕೈಗೊಳ್ಳದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸಿ ಜಾರಿಕೊಳ್ಳುತ್ತಿರುವುದು ಖಂಡನೀಯ ಎಂದರು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ನಾಗಯ್ಯ ಹಿರೇಮಠ ಹಾಗೂ ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ ಪ್ರತಿಭಟನಾ ನಿರತರೊಂದಿಗೆ ಮಾತನಾಡಿ, ಸಮಸ್ಯೆ ಬಗೆಹರಿಸುತ್ತೇವೆ ಪ್ರತಿಭಟನೆ ಕೈಬಿಡುವಂತೆ ವಿನಂತಿಸಿದರು. ಇದಕ್ಕೆ ಒಪ್ಪದ ಕಾರ್ಯಕರ್ತರು ಒತ್ತುವರಿ ತೆರವುಗೊಳಿಸುವವರೆಗೂ ನಾವು ಪ್ರತಿಭಟನೆ ಕೈಬಿಡುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಅನೀಲ ಹೇಡೆ, ಶರಣು ಪಾಟೀಲ್, ವಿರೇಶ ಕನಕೆ, ಬಾಲಾಜಿ ದಾಮಾ, ಅಮೀತ ಶಿವಪೂಜೆ, ಪ್ರಶಾಂತ ಚಿದ್ರೆ, ಗುರು ನಿರ್ಮಳೆ, ರಾಜಕುಮಾರ ಮುದಾಳೆ ಸೇರಿದಂತೆ ನೂರಾರು ಜನ ಸರ್ವಶಜನಿಕರು ಪಾಲ್ಗೊಂಡಿದ್ದರು.