ಸಾರಾಂಶ
ವಿವಿಧ ಬಡಾವಣೆಗಳಲ್ಲಿ ಬೀದಿದೀಪಗಳನ್ನು ಅಳವಡಿಸುವಂತೆ ಆಗ್ರಹಿಸಿದ ಸಾರ್ವಜನಿಕರು ನಗರಸಭೆಯಿಂದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.
ಜಮಖಂಡಿ: ನಗರಸಭೆಯಲ್ಲಿ ಗುರುವಾರ ನಡೆದ ಬಜೆಟ್ ಸಭೆಯಲ್ಲಿ ಸಮಸ್ಯೆಗಳೇ ಹೆಚ್ಚಾಗಿ ಕೇಳಿಬಂದವು. ನಗರಸಭೆಯ ಸದಸ್ಯರು, ಸಾರ್ವಜನಿಕರು ನಗರದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ರಸ್ತೆ, ಚರಂಡಿ ವ್ಯವಸ್ಥೆ, ಮೂತ್ರಾಲಯ, ಟ್ರಾಫಿಕ್, ಬೀದಿಬದಿ ವ್ಯಾಪಾರಿಗಳ ಸಮಸ್ಯೆ. ಹಳೆಯ ವಿದ್ಯುತ್ ಕಂಬಗಳ ಸ್ಥಳಾಂತರ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಸಭೆಯ ಗಮನಕ್ಕೆ ತಂದ ಸಾರ್ವಜನಿಕರು ಪರಿಹಾರಕ್ಕೆ ಮನವಿ ಮಾಡಿದರು. ನಗರಸಭೆಯಿಂದ ನಿರ್ಮಿಸಲಾದ ರಾಣಿಚೆನ್ನಮ್ಮ ಮಾರುಕಟ್ಟೆಯ ಅಂಗಡಿಗಳ ಬಾಡಿಗೆ ಹಣ ಕಡಿಮೆ ಮಾಡಬೇಕು. ವಿವಿಧ ಬಡಾವಣೆಗಳಲ್ಲಿ ಬೀದಿದೀಪಗಳನ್ನು ಅಳವಡಿಸುವಂತೆ ಆಗ್ರಹಿಸಿದ ಸಾರ್ವಜನಿಕರು ನಗರಸಭೆಯಿಂದ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದರು.ನಗರದ ಮಾರುಕಟ್ಟೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸುವುದು. ಬೀದಿಬದಿ ವ್ಯಾಪಾರಿಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಕಲ್ಪಿಸುವಂತೆ ಸಭೆಯ ಗಮನಕ್ಕೆ ತರಲಾಯಿತು. ನಗರಸಭೆ ಅಧ್ಯಕ್ಷ ಪರಮಾನಂದ ಗೌರೋಜಿ ಮಾತನಾಡಿ, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಕರಿಸಬೇಕು. ನಗರಸಭೆಗೆ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಎಲ್ಲರೂ ಕರತುಂಬಬೇಕು. ನೀರನ್ನು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಬಳಸಿಕೊಂಡು ನಲ್ಲಿಗಳನ್ನು ಬಂದ್‌ಮಾಡಿ, ರಸ್ತೆಗೆ ನೀರು ಹರಿಸಬೇಡಿ ಎಂದು ಅಧ್ಯಕ್ಷರು ಮನವಿ ಮಾಡಿದರು.
ಪೌರಾಯುಕ್ತರಾದ ಜ್ಯೋತಿಗಿರೀಶ ಮಾತನಾಡಿ, ನಗರದ ಎಲ್ಲ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡಿದ್ದಾಗಿದೆ. ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ನೀಲ ನಕ್ಷೆಯನ್ನು ಸಿದ್ಧಪಡಿಸಿಕೊಂಡು ಪರಿಹಾರ ಕಂಡುಕೊಳ್ಳಲಾಗುವುದು. ಸಾರ್ವ ಜನಿಕರು ಹಾಗೂ ಸದಸ್ಯರು ಸೂಕ್ತವಾದ ಸಲಹೆ ಸಹಕಾರ ನೀಡಬೇಕೆಂದರು. ಸದಸ್ಯರಾದ ಸುನೀಲ ಸಿಂಧೇ, ದಾನೇಶ ಘಾಟಗೆ, ನಗರಸಭೆಯ ಸಿಬ್ಬಂದಿ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.