ರೈತರ ಹೋರಾಟಕ್ಕೆ ಅಯ್ಯಪ್ಪ ಮಾಲಾಧಾರಿಗಳಿಂದ ಬೆಂಬಲ

| Published : Jan 10 2025, 12:46 AM IST

ಸಾರಾಂಶ

ರೈತರಿಂದ ಕೋಟ್ಯಂತರ ಮೊತ್ತದ ಕಡಲೆ ಖರೀದಿ ಮಾಡಿ ರೈತರಿಗೆ ಮೋಸ ಮಾಡಿ ಎಸ್ಕೆಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ.

ಗದಗ: ಕಡಲೆ ಖರೀದಿಸಿ ಹಲವಾರು ತಿಂಗಳು ಗತಿಸಿದ್ದರೂ ಬಾಕಿ ಹಣ ನೀಡದೇ ಸತಾಯಿಸುತ್ತಿದ್ದು, ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಗದಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ನಡೆಸುತ್ತಿರುವ ಅಹೋ ರಾತ್ರಿ ಧರಣಿ ಗುರುವಾರ 4 ನೇ ದಿನಕ್ಕೆ ಕಾಲಿಟ್ಟಿದ್ದು, ರೈತರು ಸರ್ಕಾರ ಮತ್ತು ಜಿಲ್ಲಾಡಳಿತ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ ಮುಂದುವರಿಸಿದರು. ಬೆಳಗ್ಗೆ ಕೆಲಕಾಲ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹಾಕಿದರು. ನಂತರ ಹೋರಾಟದ ವೇದಿಕೆಗೆ ಅಯ್ಯಪ್ಪ ಮಾಲಾಧಿಕಾರಿಗಳು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತ ಪಡಿಸಿದ್ದಲ್ಲದೇ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು, ಇಲ್ಲವಾದರೆ ರೈತ ಕುಟುಂಬಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದರು.

ಇಬ್ಬರು ಅರೆಸ್ಟ್: ರೈತರಿಂದ ಕೋಟ್ಯಂತರ ಮೊತ್ತದ ಕಡಲೆ ಖರೀದಿ ಮಾಡಿ ರೈತರಿಗೆ ಮೋಸ ಮಾಡಿ ಎಸ್ಕೆಪ್ ಆಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ಮಾರುತಿಗೌಡ ಹಾಗೂ ಶ್ರೀನಿವಾಸ್ ಬಂಧಿತ ಆರೋಪಿಗಳು.ಗದಗ ಎಸ್ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಗ್ರಾಮೀಣ ಸಿಪಿಐ ಸಿದ್ದರಾಮೇಶ್ವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಖಚಿತ ಮಾಹಿತಿ ಮೇರೆಗೆ ದಾವಣಗೆರೆಯಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಜಿಲ್ಲೆಯ 450 ರೈತರು ತಾವು ಕಷ್ಟಪಟ್ಟು ಬೆಳೆದಿದ್ದ 370ಟನ್ ಕಡಲೆ ಮಾರಾಟ ಮಾಡಿದ್ದರು. ದಾವಣಗೆರೆ ಮೂಲದ ಮಾರುತಿಗೌಡ ಹಾಗೂ ಶ್ರೀನಿವಾಸ್ ಎಂಬ ಆರೋಪಿಗಳು ರೈತರಿಂದ ಕಡಲೆ ಖರೀದಿಸಿ ಬಳಿಕ ಹಣ ಕೊಡದೆ ಸತಾಯಿಸುತ್ತಿದ್ದರು. ರೈತರಿಗೆ ಕೊಡಬೇಕಿದ್ದ ₹6 ಕೋಟಿ 50 ಲಕ್ಷ ಕೊಡದೆ ವಂಚನೆ ಮಾಡಿದ್ದರು.

ಮೊದಲು ರೈತರಿಗೆ ₹27 ಕೋಟಿಗಳ ಪೈಕಿ ₹ 20 ಕೋಟಿ 50 ಲಕ್ಷ ಆರೋಪಿಗಳು ಪಾವತಿ ಮಾಡಿದ್ದರು. ಇನ್ನುಳಿದ ₹ 6 ಕೋಟಿ 50 ಲಕ್ಷ ಕೊಡದೆ ಮಾರುತಿಗೌಡ ರೈತರನ್ನು ಕಾಡಿಸುತ್ತಿದ್ದ ಇದರಿಂದ ಬರೋಬ್ಬರಿ ಒಂದು ವರ್ಷದಿಂದ ಹಣಕ್ಕಾಗಿ ಅಲೆದು ರೈತರು ಆಕ್ರೋಶಗೊಂಡು ಬಾಕಿ ಹಣಕ್ಕಾಗಿ ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ ಭವನದ ಎದುರು ರೈತರು ಅಹೋರಾತ್ರಿ ಧರಣಿ ಕೈಗೊಂಡಿದ್ದರು. ರೈತರ ಹೋರಾಟಕ್ಕೆ ಸ್ಪಂದನೆ ಸಿಗದ ಕಾರಣ ಗೀತಾ ಹಾಗೂ ಸರಸ್ವತಿ ಎಂಬ ಇಬ್ಬರು ರೈತ ಮಹಿಳೆಯರು ಆತ್ಮಹತ್ಯೆಗೂ ಯತ್ನಿಸಿದರು. ಇದೀಗ ರೈತರಿಗೆ ವಂಚನೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಇನ್ನಾದರೂ ರೈತರಿಗೆ ಬರಬೇಕಾದ ಹಣ ಸಿಗುತ್ತಾ ಕಾಯ್ದು ನೋಡಬೇಕು.