ಕನ್ನಡಪ್ರಭ ವಾರ್ತೆ ಅಥಣಿ

ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಗ್ಗಿಲ್ಲದೆ ಮಾರಾಟ ಮಾಡಲಾಗುತ್ತಿದ್ದು, ಇದು ಹಾದಿಬೀದಿಗಳಲ್ಲಿ ಕಸದ ರಾಶಿಯೊಂದಿಗೆ ಸೇರಿಕೊಂಡು ಚರಂಡಿಗಳಲ್ಲಿ, ನಾಲಾಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದಂತೆ ತಡೆದು ಅನೇಕ ರೋಗ ರುಜಿನಗಳಿಗೆ ಕಾರಣವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛತೆ ಮಾಡುವಲ್ಲಿ ಪೌರಕಾರ್ಮಿಕರು ನಿರತರಾಗಿದ್ದಾರೆ.

ಪುರಸಭೆಯ ಅಧ್ಯಕ್ಷ ಶಿವಲೀಲಾ ಬುಟಾಳಿ ಕನ್ನಡಪ್ರಭದೊಂದಿಗೆ ಮಾತನಾಡಿ, ಪಟ್ಟಣದ ಸ್ವಚ್ಛತೆಗಾಗಿ ಮತ್ತು ಸುಂದರಿಕರಣಕ್ಕಾಗಿ ನಮ್ಮ ಪೌರಕಾರ್ಮಿಕರು ಪ್ರತಿನಿತ್ಯ ಶ್ರಮಿಸುತ್ತಿದ್ದಾರೆ. ಕಸದ ನಿರ್ವಹಣೆ ಜೊತೆಗೆ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟ ನಿಯಂತ್ರಣವನ್ನು ತಡೆಗಟ್ಟುವುದು ಸವಾಲಿನ ಕೆಲಸವಾಗಿದೆ. ಪುರಸಭೆ ಆಡಳಿತದ ಜೊತೆಗೆ ಸಾರ್ವಜನಿಕ ಸಹಕಾರವು ಕೂಡ ಅಗತ್ಯವಾಗಿದೆ. ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದೇ ಬಟ್ಟೆ ಚೀಲಗಳನ್ನು ಬಳಕೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸಹಕಾರ ನೀಡಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಬಾಕ್ಸ್‌

ಇದು ಕನ್ನಡಪ್ರಭದ ಫಲಶೃತಿ "ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಪುರಸಭೆ ವಿಫಲ..! ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ವರದಿಂದ ಎಚ್ಚೆತ್ತುಕೊಂಡ ಪುರಸಭೆ ಅಧಿಕಾರಿಗಳು ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ, ಚರಂಡಿಗಳಲ್ಲಿ, ಖಾಲಿ ನಿವೇಶನಗಳಲ್ಲಿ ಸಾರ್ವಜನಿಕರು ಹಾಕುವ ಕಸ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವಲ್ಲಿ ನಿರತರಾಗಿದ್ದಾರೆ.ಚರಂಡಿಗಳಲ್ಲಿ ಸೇರಿಕೊಂಡ ಪ್ಲಾಸ್ಟಿಕ್ ಬಾಟಲ್‌ಗಳು, ಕ್ಯಾರಿ ಬ್ಯಾಗ್ ಮುತ್ತು ಇನ್ನಿತರ ಪ್ಲಾಸ್ಟಿಕ್ ತ್ಯಾಜ್ಯಗಳು ಚರಂಡಿ ನೀರು ಸರಾಗವಾಗಿ ಹರಿಯದೆ ನೀರನ್ನು ತಡೆಯುತ್ತಿರುವುದರಿಂದ ಅಲ್ಲಲ್ಲಿ ಗಬ್ಬು ವಾಸನೆ, ಸೊಳ್ಳೆಗಳ ಕಾಟ ಅಧಿಕವಾಗಿ ಸಾಂಕ್ರಾಮಿಕ ರೋಗಗಳು ಜನರನ್ನು ಬಾಧಿಸುತ್ತಿವೆ. ಕೆಲವು ರಸ್ತೆಗಳಲ್ಲಿ ಚರಂಡಿ ನೀರು ಹರಿಯುವಂತಹ ಸನ್ನಿವೇಶಗಳು ಸಾಮಾನ್ಯವಾಗಿವೆ. ಜನ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಈ ಪ್ಲಾಸ್ಟಿಕ್ ಬಳಕೆ ಮತ್ತು ಅಕ್ರಮ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪುರಸಭೆ ಆಡಳಿತವನ್ನು ಎಚ್ಚರಿಸಿದ ಪತ್ರಿಕೆಯ ಜವಾಬ್ದಾರಿಯುತ ಸುದ್ದಿಗೆ ಮತ್ತು ಪೌರಕಾರ್ಮಿಕರು ಪಟ್ಟಣದ ಪ್ರಮುಖ ಚರಂಡಿಗಳಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನ ಸ್ವಚ್ಛಗೊಳಿಸುತ್ತಿರುವ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

-----------


ಕೋಟ್‌ಕಸದ ರಾಶಿಯೊಂದಿಗೆ ಸಂಗ್ರಹವಾಗುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಲು ಖಾಸಗಿ ಸಂಸ್ಥೆಯೊಂದಕ್ಕೆ ಅವಕಾಶ ನೀಡಲಾಗಿದೆ. ಅವರು ತಮ್ಮದೇ ಆದ ಸಿಬ್ಬಂದಿ ನೇಮಿಸಿ ಪಟ್ಟಣದ ವಿವಿಧ ಬಡಾವಣೆಗಳಲ್ಲಿ, ಕಸದ ರಾಶಿಗಳಲ್ಲಿನ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಸಂಸ್ಕರಣೆ ಮಾಡಲಿದ್ದಾರೆ. ಅವರು ಅಲ್ಲಲ್ಲಿ ನಾಮ ಫಲಕಗಳನ್ನು ಬರೆದ ಡಬ್ಬಿಗಳನ್ನು ಕೂಡ ಅಳವಡಿಸಲಿದ್ದಾರೆ. ಸಾರ್ವಜನಿಕರು ಪ್ಲಾಸ್ಟಿಕ್ ವಸ್ತುಗಳನ್ನು ಅದರಲ್ಲಿ ಹಾಕಿ ಪ್ಲಾಸ್ಟಿಕ್ ನಿರ್ಮೂಲನೆಗೆ ಸಹಕರಿಸಬೇಕು. ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಬೇಕು.

ಅಶೋಕ ಗುಡಿಮನಿ, ಪುರಸಭೆ ಮುಖ್ಯಾಧಿಕಾರಿ, ಅಥಣಿ.