ಸಮಾಜ ಪರಿವರ್ತನೆಯಲ್ಲಿ ಸಂಗೀತ ಮುಖ್ಯ ಪಾತ್ರ

| Published : May 27 2024, 01:05 AM IST

ಸಾರಾಂಶ

ನಾಡಿನ ವಚನಕಾರರು, ದಾಸಶ್ರೇಷ್ಠರು, ಸಂತರು ಸಂಗೀತವನ್ನು ಪರಿಣಾಮಕಾರಿ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾರೆ.

ಬಳ್ಳಾರಿ; ಸಮಾಜದ ಸ್ವಾಸ್ಥ್ಯ ಕಾಪಾಡಲು ಹಾಗೂ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಸಂಗೀತ, ನಾಟಕ, ನೃತ್ಯ ಹಾಡುಗಾರಿಕೆ ಪರಿಣಾಮಕಾರಿ ಮಾಧ್ಯಮವಾಗಿ ಕೆಲಸ ಮಾಡಿದೆ ಎಂದು ಕರ್ನಾಟಕ ಜನಪದ ಅಕಾಡೆಮಿ ಸದಸ್ಯ ಕೆ.ಕೆ. ದೇವಾನಂದ ವರಪ್ರಸಾದ್ ಅಭಿಪ್ರಾಯಪಟ್ಟರು.

ಯುವಜನ ಸಂಘಟನೆ ಎಐಡಿವೈಒ ಹಾಗೂ ಯುವಜನ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ನಗರದ ಗಾಂಧಿಭವನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ರಾಜ್ಯಮಟ್ಟದ ಸಂಗೀತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಡಿನ ವಚನಕಾರರು, ದಾಸಶ್ರೇಷ್ಠರು, ಸಂತರು ಸಂಗೀತವನ್ನು ಪರಿಣಾಮಕಾರಿ ಮಾಧ್ಯಮವನ್ನಾಗಿ ಬಳಸಿಕೊಂಡಿದ್ದಾರೆ. ಸಮಾಜದ ಪರಿವರ್ತನೆಯಲ್ಲಿ ಸಂಗೀತ ಬಹು ಮುಖ್ಯ ಪಾತ್ರ ವಹಿಸುತ್ತದೆ ಎಂಬುದು ಅವರಿಗೆ ತಿಳಿದಿತ್ತು. ಮಾತುಗಳಲ್ಲಿ ತಲುಪಿಸಲಾಗದ ಅನೇಕ ವಿಚಾರಗಳನ್ನು ಹಾಡಿನ ಮೂಲಕ ಕೇಳುಗರ ಮನ ಮುಟ್ಟಿಸಬಹುದಾಗಿದೆ. ಹೀಗಾಗಿಯೇ ಸಂಗೀತವನ್ನು ಪ್ರಭಾವಿ ಮಾಧ್ಯಮ ಎಂದೇ ನಂಬಲಾಗಿದೆ ಎಂದು ಹೇಳಿದರು.

ಎಐಡಿವೈಒ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ, ಮೊಬೈಲ್‌ನ ಗೀಳಿಗೆ ಸಿಲುಕಿ ಯುವ ಸಮುದಾಯ ಸಾಂಸ್ಕೃತಿಕವಾಗಿ ಅಧಃಪತನಗೊಳ್ಳುತ್ತಿದೆ. ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರ ತರಲು ಪೋಷಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವ ಸಮುದಾಯವನ್ನು ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಯುವ ಸಂಘಟನೆಗಳ ಪ್ರಮುಖ ಜವಾಬ್ದಾರಿಯಾಗಿದೆ. ಸಾಮಾಜಿಕ ಬದಲಾವಣೆಗೆ ಹೋರಾಟದ ಮನೋಭಾವ ಮೂಡಿಸುವ ಕೆಲಸವೂ ಆಗಬೇಕಾಗಿದೆ ಎಂದು ಹೇಳಿದರು.

ಸಮಾಜದ ಅನ್ಯಾಯಗಳ ವಿರುದ್ಧ ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಿರುವ ನಮ್ಮ ಯುವ ಸಂಘಟನೆಯು ತನ್ನ ಕಾರ್ಯಕರ್ತರಲ್ಲಿರುವ ಹಾಡುಗಾರರನ್ನು ಒಂದೆಡೆ ಸೇರಿಸಿ ಜನಜಾಗೃತಿ ಹಾಡುಗಳನ್ನು ಕಲಿಸುವ ಮತ್ತು ಇಲ್ಲಿಂದ ತಮ್ಮ ಸ್ಥಳಗಳಿಗೆ ಮರಳಿದ ನಂತರ ಅಲ್ಲಿಯೂ ಗಾಯನ ತಂಡಗಳನ್ನು ಕಟ್ಟುವ ಉತ್ಸಾಹದೊಂದಿಗೆ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವಜನ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೃಷ್ಣ ಹೇಳಿದರು.

ಎಐಡಿವೈಒ ಸಂಘಟನೆಯ ಜಿಲ್ಲಾ ಪ್ರಮುಖರು ಶಿಬಿರ ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಐವತ್ತಕ್ಕೂ ಹೆಚ್ಚು ಪ್ರತಿನಿಧಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.