ಅರಸಿ ಉದ್ಯಾನ ನಿರ್ವಹಣೆ ಮರೆತ ನಗರಸಭೆ: ನಾಗರಿಕರ ಹಿಡಿಶಾಪ

| Published : May 27 2024, 01:05 AM IST

ಸಾರಾಂಶ

ಅರಸೀಕೆರೆಯ ‘ಅರಸಿ ಉದ್ಯಾನ’ ನಿರ್ಮಾಣದ ಜತೆಗೆ ಸುಮಾರು ಎರಡು ಕಿಲೋ ಮೀಟರ್ ಉದ್ದನೆಯ ವಾಕಿಂಗ್ ರಸ್ತೆಯನ್ನು ನಿರ್ಮಿಸಿ ಕೊಟ್ಟಿದೆ. ಇದರ ನಿರ್ವಹಣೆಯ ಜವಾಬ್ದಾರಿಯನ್ನು ನಗರಸಭೆ ಹೊತ್ತಿದೆ. ಆದರೆ ಈಗ ಅರಸಿ ಉದ್ಯಾನ ನಿರ್ವಹಣೆಯಿಲ್ಲದೆ ಸೊರಗುತ್ತಿದೆ.

ಎರಡು ಕಿಲೋ ಮೀಟರ್ ಉದ್ದನೆಯ ವಾಕಿಂಗ್ ರಸ್ತೆ । ಬೆಳಿಗ್ಗೆ, ಸಂಜೆ ನಾಗರಿಕರ ವಿಹಾರ

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರಕ್ಕೆ ಹೊಂದಿಕೊಂಡಿರುವ ಕಂತೆನಹಳ್ಳಿ ಕೆರೆಗೂ ನಗರದಲ್ಲಿ ಉದ್ಯಾನಕ್ಕೆ ಜನರು ಹೊಂದಿಕೊಂಡಿದ್ದಾರೆ. ಶಾಸಕ ಶಿವಲಿಂಗೇಗೌಡ ಹಾಗೂ ಸಣ್ಣ ನೀರಾವರಿ ಇಲಾಖೆ ಕೆರೆಯ ಅಂಗಳದಲ್ಲಿ ‘ಅರಸಿ ಉದ್ಯಾನ’ ನಿರ್ಮಾಣದ ಜತೆಗೆ ಸುಮಾರು ಎರಡು ಕಿಲೋ ಮೀಟರ್ ಉದ್ದನೆಯ ವಾಕಿಂಗ್ ರಸ್ತೆಯನ್ನು ನಿರ್ಮಿಸಿ ಕೊಟ್ಟಿದೆ. ಇದರ ನಿರ್ವಹಣೆಯ ಜವಾಬ್ದಾರಿಯನ್ನು ನಗರಸಭೆ ಹೊತ್ತಿದೆ. ಆದರೆ ಈಗ ಅರಸಿ ಉದ್ಯಾನ ನಿರ್ವಹಣೆಯಿಲ್ಲದೆ ಸೊರಗುತ್ತಿದೆ.

ಆರಂಭದ ದಿನಗಳಲ್ಲಿ ಅರಸಿ ಉದ್ಯಾನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡುತ್ತಿದ್ದ ನಗರಸಭೆ ಇತ್ತೀಚಿನ ದಿನಗಳಲ್ಲಿ ಇತ್ತ ತಿರುಗಿ ನೋಡದ ಹಿನ್ನೆಲೆಯಲ್ಲಿ ಕಂತೆನಹಳ್ಳಿ, ಮಾರುತಿ ನಗರ ಸೇರಿದಂತೆ ನಗರದ ಜನತೆ ನೂರಾರು ಸಂಖ್ಯೆಯಲ್ಲಿ ಇಲ್ಲಿ ನಿತ್ಯ ವಾಕಿಂಗ್ ಮತ್ತು ವಾಯು ವಿಹಾರಕ್ಕೆ ಬರುವವರಿಗೆ ಹಿಂಡಾಗಿ ಕಾಣಿಸಿಕೊಳ್ಳುವ ಬೀದಿ ನಾಯಿಗಳು ಸ್ವಾಗತ ಕೋರುತ್ತಿವೆ. ವಾಕಿಂಗ್ ರಸ್ತೆಯ ಉದ್ದಕ್ಕೂ ಎರಡು ಬದಿ ಬೆಳೆದಿರುವ ಮರ, ಗಿಡಗಳ ಕೊಂಬೆ ಹಾಗೂ ಬಳ್ಳಿಗಳು ವಾಕಿಂಗ್ ಮಾಡುವವರಿಗೆ ಅಡಿ ಅಡಿಗೂ ಅಡ್ಡಿಪಡಿಸುತ್ತಿವೆ. ವಾಕಿಂಗ್ ಹಾಗೂ ವಾಯು ವಿವಾಹಾರಕ್ಕೆ ಬರುವವರು ತುಸು ಎಚ್ಚರ ತಪ್ಪಿದರೂ ಮುಖ ಹಾಗೂ ತಲೆಗೆ ಗಾಯ ಮಾಡಿಕೊಳ್ಳುವುದು ನಿಶ್ಚಿತ.

ಉದ್ಯಾನದಲ್ಲಿ ಬೀದಿ ನಾಯಿಗಳ ದರ್ಬಾರು ಅಡೆತಡೆ ಇಲ್ಲದೆ ಬೆಳೆದಿರುವ ಮರಗಿಡಗಳು ಸಮತಟ್ಟು ಕಳೆದುಕೊಂಡಿರುವ ವಾಕಿಂಗ್ ರಸ್ತೆ ಕೆರೆಯ ಅಂಗಳದಲ್ಲೇ ಉದ್ಯಾನ ಇದ್ದರೂ ಕುಡಿಯುವ ನೀರಿಗೆ ವ್ಯವಸ್ಥೆ ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲು ನಗರಸಭೆ ಮರೆತಿದೆ. ಅರಸಿ ಉದ್ಯಾನದಲ್ಲಿ ಹಲವು ಸಮಸ್ಯೆಗಳು ಜೀವಂತವಾಗಿವೆ.

ಇನ್ನು ಉದ್ಯಾನದಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಆಗಲಿ ಉದ್ಯಾನ ಪಾಲಕರಾಗಲಿ ಅಥವಾ ಕಣ್ಗಾವಲು ಸಿಬ್ಬಂದಿಯಾಗಲಿ ಇಲ್ಲದೆ ಇರುವುದರಿಂದ ಉದ್ಯಾನದ ಮತ್ತೊಂದು ಬದಿ ಅನೈತಿಕ ಚಟುವಟಿಕೆಗೆ ಕಾರಣವಾಗಿದೆ. ಸಮಾಜಬಾಹಿರ ದುಷ್ಕೃತ್ಯಗಳಿಗೆ ನೆಚ್ಚಿನ ತಡವಾಗಿದೆ. ಇತ್ತೀಚೆಗೆ ವಾಯು ವಾಹರಕ್ಕೆ ಬಂದ ಹಿರಿಯ ನಾಗರಿಕರೊಬ್ಬರನ್ನು ಕೊಲೆ ಮಾಡಿ ಅವರ ಮೈ ಮೇಲಿದ್ದ ಚಿನ್ನಾಭರಣಗಳನ್ನು ಕಸಿದು ಪರರಿಯಾಗಿರುವ ದುಷ್ಕರ್ಮಿಗಳ ಕೃತ್ಯದಿಂದಾಗಿ ಉದ್ಯಾನಕ್ಕೆ ಬರುವವರು ಭಯಬೀತರಾಗಿದ್ದಾರೆ.

ಅರಸಿ ಉದ್ಯಾನದ ಪರಿಸ್ಥಿತಿ ಹೇಗಿದ್ದರೂ ಉದ್ಯಾನದ ನಿರ್ವಹಣೆ ನಗರಸಭೆಯದ್ದು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ. ನಗರದ ಗಡಿಯಲ್ಲಿರುವ ಉದ್ಯಾನದತ್ತ ನಗರಸಭೆ ಆಡಳಿತದವರು ಸಹ ತಿರುಗಿ ನೋಡುತ್ತಿಲ್ಲ. ಇದು ಸಹಜವಾಗಿಯೇ ನಗರದ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.

ಪುರಸಭೆಯಾಗಿದ್ದ ಅರಸೀಕೆರೆ ನಗರಸಭೆಯಾಗಿ ಮೇಲ್ದರ್ಜೆಗೆ ಏರಿ ಒಂದು ದಶಕವೇ ಕಳೆದಿದೆ. ಇನ್ನು ನಗರದ ಜನಸಂಖ್ಯೆ 60 ಸಾವಿರ ಗಡಿ ದಾಟಿದೆ. ಜನಸಂಖ್ಯೆಗೆ ಅನುಗುಣವಾಗಿಯಾದರೂ ನಗರ ವ್ಯಾಪ್ತಿಯಲ್ಲಿ ಉದ್ಯಾನ ನಿರ್ಮಿಸುವಲ್ಲಿ ನಗರಸಭೆ ವಿಫಲವಾಗಿದೆ. ನಗರಸಭೆ ಆಡಳಿತದ ಈ ನಿರ್ಲಕ್ಷ್ಯ ಮನೋಭಾವದಿಂದ ಹೇಳಿಕೊಳ್ಳಲು ದೊಡ್ಡ ನಗರವಾಗಿದ್ದರೂ ಉದ್ಯಾನಗಳಿಲ್ಲದೆ ಇರುವ ಅರಸಿ ಉದ್ಯಾನ ಕೂಡ ಸಮರ್ಪಕ ನಿರ್ವಹಣೆ ಇಲ್ಲದೆ ಅನೈತಿಕ ಚಟುವಟಿಕೆಗಳ ಆಶ್ರಯ ತಾಣವಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಮುಂಜಾನೆ, ಸಂಜೆ ವಿಹಾರಕ್ಕೆ ಬರುವ ಹಿರಿಯ ನಾಗರಿಕರಾದ ರಂಗಪ್ಪ.