ಕನ್ನಡದ ವರನಟ ಡಾ.ರಾಜ್ ಅವರ ಸಮಕಾಲೀನ ನಟರಾಗಿದ್ದ ಧರ್ಮೇಂದ್ರ ಅವರು ಡಾ.ರಾಜ್ ನಟಿಸಿದ ‘ಗಂಧದಗುಡಿ’, ‘ತಾಯಿಗೆ ತಕ್ಕ ಮಗ’, ಶಂಕರ್‌ನಾಗ್ ಅಭಿಯನದ ‘ಹುಲಿ ಹೆಬ್ಬುಲಿ’ ಚಿತ್ರಗಳ ಹಿಂದಿ ರಿಮೇಕ್‌ನಲ್ಲಿ ನಟಿಸಿದ್ದರು, ತಮ್ಮದೇ ನಿರ್ಮಾಣ ಸಂಸ್ಥೆಯನ್ನೂ ಕಟ್ಟಿದ್ದರು. ನಟ ಅಂಬರೀಶ್‌ರವರ ಆಪ್ತ ಒಡನಾಡಿಯಾಗಿದ್ದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಕಲೆಗೆ ಜಾತಿ, ಮತ, ದೇಶ, ಭಾಷೆ, ಗಡಿಗಳ ಹಂಗಿಲ್ಲ. ಬಾಲಿವುಡ್‌ನ ಜನಪ್ರಿಯ ನಟ ಧಮೇಂದ್ರ ಅವರು ಶ್ರೀಸಾಮಾನ್ಯರ ಒಡನಾಡಿಯಾಗಿದ್ದರು ಎಂದು ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜ್ ವಿ.ಭೈರಿ ಅಭಿಪ್ರಾಯಟ್ಟರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯಲ್ಲಿರುವ ಗೋಲ್ಡ್ ಜಿಮ್ ಆಡಿಟೋರಿಯಂನಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ, ಗೋಲ್ಡ್ ಜಿಮ್ ಸಹಯೋಗದಲ್ಲಿ ಆಯೋಜಿಸಿದ್ದ ಧಮೇಂದ್ರ ನೆನಪಿನ ಸಂಗೀತ ಸಂಜೆ-ಅಗಲಿದ ಬಾಲಿವುಡ್ ನಟನಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕನ್ನಡದ ವರನಟ ಡಾ.ರಾಜ್ ಅವರ ಸಮಕಾಲೀನ ನಟರಾಗಿದ್ದ ಧರ್ಮೇಂದ್ರ ಅವರು ಡಾ.ರಾಜ್ ನಟಿಸಿದ ‘ಗಂಧದಗುಡಿ’, ‘ತಾಯಿಗೆ ತಕ್ಕ ಮಗ’, ಶಂಕರ್‌ನಾಗ್ ಅಭಿಯನದ ‘ಹುಲಿ ಹೆಬ್ಬುಲಿ’ ಚಿತ್ರಗಳ ಹಿಂದಿ ರಿಮೇಕ್‌ನಲ್ಲಿ ನಟಿಸಿದ್ದರು, ತಮ್ಮದೇ ನಿರ್ಮಾಣ ಸಂಸ್ಥೆಯನ್ನೂ ಕಟ್ಟಿದ್ದರು. ನಟ ಅಂಬರೀಶ್‌ರವರ ಆಪ್ತ ಒಡನಾಡಿಯಾಗಿದ್ದರು ಎಂದು ಸ್ಮರಿಸಿದರು.ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ಹಲವು ವರ್ಷಗಳ ಕಾಲ ಬಾಲಿವುಡ್ ಚಿತ್ರರಂಗವನ್ನು ಆಳಿದ ಧರ್ಮೇಂದ್ರ ಅವರು ೧೯೩೫ರ ಡಿ.೮ರಂದು ಪಂಜಾಬ್ ಬಲುಧಿಯಾನದ ಸಣ್ಣ ಹಳ್ಳಿಯಲ್ಲಿ ಜನಿಸಿದ್ರು. ಕಿರಿಯ ವಯಸ್ಸಿನಲ್ಲೇ ಪ್ರಕಾಶ್ ಕೌರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಎಂದು ಹೇಳಿದರು.
ಚಿಕ್ಕ ವಯಸ್ಸಿನಿಂದಲೇ ಸಿನಿಮಾ ರಂಗದಲ್ಲಿ ಮಿಂಚಬೇಕು, ನಟನಾಗಬೇಕು ಎಂಬ ಹಂಬಲ ಹೊಂದಿದ್ದ ಧರ್ಮೇಂದ್ರ ನಟಿಸುವುದಕ್ಕಾಗಿಯೇ ಮನೆ ಬಿಟ್ಟು ಬಂದರು. ೧೯೬೦ರಲ್ಲಿ ದಿಲ್ ಬಿ ತೇರಾ ಹಮ್ ಬಿ ತೇರೆ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರಲ್ಲದೇ ಶೋಲೆ ಸಿನಿಮಾ ಮೂಲಕ ಕರ್ನಾಟಕದೊಂದಿಗೆ ನಂಟು ಹೊಂದಿದ್ದರು. ಇವರ ಕಲಾ ಸೇವೆಗೆ ೨೦೧೨ರಲ್ಲಿ ಪದ್ಮ ಭೂಷಣ ಪ್ರಶಸ್ತಿಯೂ ಒಲಿದುಬಂದಿತು ಎಂದು ತಿಳಿಸಿದರು.ಮಹಮ್ಮದ್ ರಫಿ, ಕಿಶೋರ್ ಕುಮಾರ್, ಲತಾ ಮಂಗೇಶ್ಕರ್ ಮತ್ತು ಅಶಾ ಬೋಂಸ್ಲೆ ಅವರು ಬಾಲಿವುಡ್ ನಟ ಧರ್ಮೇಂದ್ರ ಅವರ ಸಿನಿಮಾಗಳಿಗೆ ಹಾಡಿದ ಸುಮಧುರ ಗೀತೆಗಳನ್ನು ಕನ್ನಡದ ವಿವರಣೆಯೊಂದಿಗೆ ಕೇಳಿಸುವ ಪ್ರಯತ್ನ ಸಾಗಿದೆ, ಆಪ್ ಕೀ ನಜರೋ ನೆ ಸಮ್ಜಾ, ಪಲ್ ಪಲ್ ದಿಲ್ ಕೇ ಪಾಸ್ ಮುಂತಾದ ಇಂಪಾದ ಹಾಡುಗಳನ್ನು ಗಾಯಕರು ಪ್ರಸ್ತುತ ಪಡಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಗೋಲ್ಡ್ ಜಿಮ್ ಮುಖ್ಯಸ್ಥೆ ಪ್ರಭಾ, ಚಿತ್ರಕೂಟ ಸಂಸ್ಥೆ ಸಂಸ್ಥಾಪಕ ಅರವಿಂದಪ್ರಭು, ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಮಾದೇಗೌಡ, ೨ನೇ ಉಪ ರಾಜ್ಯಪಾಲ ಚಂದ್ರಶೇಖರ್, ಜಿಲ್ಲಾ ಸಂಪುಟ ಕಾರ್ಯದರ್ಶಿ ರಕ್ಷಿತ್‌ರಾಜ್, ಜೈನ್ ಯುವಸಂಸ್ಥೆಯ ಪುಟರ್‌ಮಲ್ ಜೈನ್, ಐಶ್ವರ್ಯ, ಮಂಗಲ ಲಂಕೇಶ್ ಮತ್ತಿತರರಿದ್ದರು.