, ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಕ ಮಟ್ಟದಲ್ಲಿ ನಡೆಯುತ್ತಿರುವ ಈ ನಿಯಮ ಉಲ್ಲಂಘನೆಗಳು ರೋಗಿಗಳ ಜೀವ ಭದ್ರತೆ ಹಾಗೂ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಕಾರ್ಯಾಲಯಕ್ಕೆ ಸಲ್ಲಿಸಲಾದ ಮನವಿಯಲ್ಲಿ, ಕಾನೂನುಬದ್ಧ ಎನ್‌ಒಸಿಗಳಿಲ್ಲದ ಆಸ್ಪತ್ರೆಗಳನ್ನು ಗುರುತಿಸಿ ತಕ್ಷಣವೇ ಪರಿಶೀಲನೆ ನಡೆಸಿ, ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳನ್ನು ಬಂದ್ ಮಾಡಲೇಬೇಕು ಎಂದು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಜಿಲ್ಲೆಯಲ್ಲಿ ಪರವಾನಗಿ ಇಲ್ಲದೆ, ಅಗತ್ಯ ದಾಖಲೆಗಳಿಲ್ಲದೆ ಮತ್ತು ಕಾನೂನುಬದ್ಧ ಅನುಮೋದನೆಗಳನ್ನು (ಎನ್‌ಒಸಿ) ಪಡೆಯದೇ ಅನೇಕ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‌ಗಳು ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲಾಡಳಿತ ಪರಿಶೀಲಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ಆರ್. ಮರಿಜೋಸೆಫ್ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಕ ಮಟ್ಟದಲ್ಲಿ ನಡೆಯುತ್ತಿರುವ ಈ ನಿಯಮ ಉಲ್ಲಂಘನೆಗಳು ರೋಗಿಗಳ ಜೀವ ಭದ್ರತೆ ಹಾಗೂ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಕಾರ್ಯಾಲಯಕ್ಕೆ ಸಲ್ಲಿಸಲಾದ ಮನವಿಯಲ್ಲಿ, ಕಾನೂನುಬದ್ಧ ಎನ್‌ಒಸಿಗಳಿಲ್ಲದ ಆಸ್ಪತ್ರೆಗಳನ್ನು ಗುರುತಿಸಿ ತಕ್ಷಣವೇ ಪರಿಶೀಲನೆ ನಡೆಸಿ, ನಿಯಮ ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳನ್ನು ಬಂದ್ ಮಾಡಲೇಬೇಕು ಎಂದು ಒತ್ತಾಯಿಸಿದರು.
ಪರವಾನಗಿ ಇಲ್ಲದೆ ಆಸ್ಪತ್ರೆಗಳನ್ನು ನಡೆಸುತ್ತಿರುವುದು ಸಾರ್ವಜನಿಕ ಆರೋಗ್ಯಕ್ಕೆ ನೇರ ಬೆದರಿಕೆ, ಅನೇಕ ಆಸ್ಪತ್ರೆಗಳು ಕೆಳಗಿನ ಕಡ್ಡಾಯ ಪರವಾನಗಿಗಳನ್ನು ಪಡೆಯದೇ ಕಾರ್ಯನಿರ್ವಹಿಸುತ್ತಿವೆ. ನೋಂದಣಿ ಮತ್ತು ಪರವಾನಗಿ ನವೀಕರಣ, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (೨೦೦೭) ಯಡಿಯಲ್ಲಿ ಪ್ರತಿಯೊಂದು ಖಾಸಗಿ ಆಸ್ಪತ್ರೆಯೂ ಮಾನ್ಯ ಪರವಾನಗಿ, ವಾರ್ಷಿಕ / ಅವಧಿ ನವೀಕರಣ, ಕಟ್ಟಡ, ಸಿಬ್ಬಂದಿ, ಉಪಕರಣಗಳ ಪರಿಶೀಲನೆ ಇವನ್ನು ಕಡ್ಡಾಯವಾಗಿ ಪೂರೈಸಬೇಕಿದೆ. ಆದರೆ ಜಿಲ್ಲೆಯಲ್ಲಿ ಅನೇಕ ಆಸ್ಪತ್ರೆಗಳು ಪರವಾನಗಿ ಅವಧಿ ಮುಗಿದರೂ ನವೀಕರಿಸದೇ, ಅಥವಾ ನೋಂದಣಿಯೇ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿದೆ ಎಂದರು.ನೂರಾರು ರೋಗಿಗಳು ಮತ್ತು ಸಿಬ್ಬಂದಿಯ ಪ್ರಾಣ ಭದ್ರತೆ ಅವಲಂಬಿಸಿರುವ ಈ ಮೂಲಸೌಕರ್ಯವನ್ನೇ ಅನೇಕ ಆಸ್ಪತ್ರೆಗಳು ಹೊಂದಿಲ್ಲ ಎಂದು ಹೇಳಲಾಗಿದೆ. ವಿದ್ಯುತ್ ಪರಿವೀಕ್ಷಣೆ ಇಲಾಖೆ ಕಡ್ಡಾಯ. ಎಲ್ಲಾ ವಿದ್ಯುತ್ ಅಳವಡಿಕೆಗಳಿಗೆ ಕೆ.ಎಸ್.ಇ.ಐ. ಅನುಮೋದನೆ ಕಡ್ಡಾಯ, ಆಸ್ಪತ್ರೆಯಲ್ಲಿ ವಿದ್ಯುತ್ ದೋಷವು ಉಂಟಾದರೆ ಆಮ್ಲಜನಕ ಸಿಲಿಂಡರ್ ಸ್ಫೋಟ, ಐಸಿಯು ಉಪಕರಣ ದೋಷ, ಜೀವ ರಕ್ಷಣಾ ಯಂತ್ರಗಳ ಸ್ಥಗಿತ ಹಾಗೂ ದೊಡ್ಡ ಪ್ರಮಾಣದ ಜೀವಹಾನಿ ಸಂಭವಿಸುವ ಸಾಧ್ಯತೆ ಇದೆ. ವಿದ್ಯುತ್ ಸುರಕ್ಷತಾ ಪ್ರಮಾಣಪತ್ರವಿಲ್ಲದೆ ಐಸಿಯು ಮತ್ತು ಓಟಿಗಳನ್ನು ನಡೆಸುತ್ತಿರುವುದು ಕಾನೂನುಬಾಹಿರ ಹಾಗೂ ಅಪಾಯಕಾರಿ ಎಂದು ಆರೋಪಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕಡ್ಡಾಯ ಅನುಮತಿ ಬೇಕು. ಆಸ್ಪತ್ರೆಗಳು ಜೈವಿಕ ವೈದ್ಯಕೀಯ ತ್ಯಾಜ್ಯ ಉತ್ಪಾದಕರಾಗಿರುವುದರಿಂದ, ಜಿಲ್ಲೆಯಲ್ಲಿ ಅನೇಕ ಆಸ್ಪತ್ರೆಗಳು ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡದೆ ಅಪಾಯಕಾರಿ ತ್ಯಾಜ್ಯವನ್ನು ಸಾಮಾನ್ಯ ಕಸದೊಂದಿಗೆ ಹಾಕಲಾಗುತ್ತಿದೆ. ವೈದ್ಯರ ಕೆ.ಎಂ.ಸಿ. ನೋಂದಣಿ, ನರ್ಸಿಂಗ್ ಸ್ಟಾಫ್ ಪರವಾನಗಿ, ಲ್ಯಾಬ್ ತಂತ್ರಜ್ಞರ ಪ್ರಮಾಣಪತ್ರ, ಸಿಬ್ಬಂದಿ ಪಟ್ಟಿ ಇವು ಕಡ್ಡಾಯವಾಗಿದೆ. ಆದರೆ ಅನೇಕ ಆಸ್ಪತ್ರೆಗಳು ಅರ್ಹತೆ ಇಲ್ಲದ ಸಿಬ್ಬಂದಿಯನ್ನು ಕೆಲಸಕ್ಕೆ ಇಡುತ್ತಿರುವುದು ಪತ್ತೆಯಾಗಿದೆ ಎಂದರು.ತಕ್ಷಣವೇ ಸಮಗ್ರ ಶೋಧ ಮತ್ತು ಪರಿಶೀಲನೆಯನ್ನು ಜಿಲ್ಲಾಡಳಿತ ನಡೆಸಬೇಕು. ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಖಾಸಗಿ ಆಸ್ಪತ್ರೆಗೆ ಸಮಗ್ರ ಪರಿಶೀಲನೆ, ಪರವಾನಗಿ ಇಲ್ಲದ ಆಸ್ಪತ್ರೆಗಳನ್ನು ತಕ್ಷಣವೇ ಮುಚ್ಚಬೇಕು. ಅಗ್ನಿಶಾಮಕ, ವಿದ್ಯುತ್, ಮಾಲಿನ್ಯ ಮಂಡಳಿ, ಸಂಯುಕ್ತ ದಾಳಿಗೆ ತಂಡ ರಚಿಸಿ ತಪ್ಪಿತಸ್ಥರಿಗೆ ಕಾನೂನು ಕ್ರಮ, ದಂಡ, ಮತ್ತು ಪರವಾನಗಿ ರದ್ದು ಮಾಡಬೇಕು ಎಂದು ಹೇಳಿದರು. ರೋಗಿಗಳ ಜೀವಕ್ಕಿಂತ ಲಾಭ ಮುಖ್ಯವೆಂದು ಪರವಾನಗಿ ಇಲ್ಲದೇ ಆಸ್ಪತ್ರೆಗಳನ್ನು ನಡೆಸುವುದು ಮಾನವೀಯತೆಯ ವಿರುದ್ಧ. ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್‌ಪಿಐ ಸತೀಶ್, ಆದಿವಾಸಿ ಮುಖಂಡ ನವೀನ್ ಸದಾ, ಜೈ ಭೀಮ್ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷ ಬಿ.ಎನ್. ಬಸವರಾಜು, ಹರೀಶ್ ಉಳುವಾರೆ ಇತರರು ಇದ್ದರು.