ನರಸಿಂಹರಾಜಪುರಧರ್ಮಸ್ಥಳದ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಕಳೆದ 31 ವರ್ಷದಿಂದ ನೈತಿಕ ಮೌಲ್ಯ ಇರುವ 22 ಲಕ್ಷ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದ್ದೇವೆ ಎಂದು ಧರ್ಮಸ್ಥಳದ ಶಾಂತಿ ವನ ಟ್ರಸ್ಟ್ ನಿರ್ದೇಶಕ ಡಾ.ಶಶಿಕಾಂತ್ ಜೈನ್ ತಿಳಿಸಿದರು.
- ಬಸ್ತಿಮಠದಲ್ಲಿ ಶಾಲಾ ಮಕ್ಕಳಿಗೆ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಧರ್ಮಸ್ಥಳದ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಕಳೆದ 31 ವರ್ಷದಿಂದ ನೈತಿಕ ಮೌಲ್ಯ ಇರುವ 22 ಲಕ್ಷ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದ್ದೇವೆ ಎಂದು ಧರ್ಮಸ್ಥಳದ ಶಾಂತಿ ವನ ಟ್ರಸ್ಟ್ ನಿರ್ದೇಶಕ ಡಾ.ಶಶಿಕಾಂತ್ ಜೈನ್ ತಿಳಿಸಿದರು.
ಮಂಗಳವಾರ ಸಿಂಹನ ಗದ್ದೆ ಬಸ್ತಿಮಠದಲ್ಲಿ ಧರ್ಮಸ್ಥಳದ ಶಾಂತಿ ವನದ ಟ್ರಸ್ಟ್ ಹಾಗೂ ಬಸ್ತಿಮಠದ ಶ್ರೀ 1008 ಚಂದ್ರ ಪ್ರಭ ಸ್ವಾಮಿ ಚಾರಿಟಬಲ್ ಟ್ರಸ್ಟ್ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ತಾಲೂಕಿನ ಪ್ರಾಥಮಿಕ-ಪ್ರೌಢ ಶಾಲೆಗಳ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ, ಶ್ಲೋಕ ಕಂಠ ಪಾಠ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಈ ವರ್ಷ ಪ್ರೌಢ ಶಾಲೆ ಮಕ್ಕಳಿಗೆ ಜ್ಞಾನ ಪಥ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಜ್ಞಾನ ರಥ ಎಂಬ ಪುಸ್ತಕಗಳನ್ನು ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸುಮಾರು 1 ಲಕ್ಷ ಮಕ್ಕಳಿಗೆ ನೀಡಲಾಗಿದೆ ಎಂದರು.ಅಲ್ಲದೆ 4500 ಶಿಕ್ಷಕರಿಗೆ ಯೋಗ ಮತ್ತು ಮೌಲ್ಯ ಶಿಕ್ಷಣದ ಬಗ್ಗೆ ತರಬೇತಿ, ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂಬ ಉದ್ದೇಶ ದಿಂದ ಪ್ರತಿ ವರ್ಷ ಉತ್ತಮ ಲೇಖಕರು ಬರೆದ ಮೌಲ್ಯಯುತ ಪುಸ್ತಕಗಳನ್ನು ಮೊದಲೇ ಶಾಲೆಗಳಿಗೆ ಕಳಿಸ ಲಾಗುತ್ತದೆ. ಮಕ್ಕಳು ಪುಸ್ತಕಗಳನ್ನು ಓದಬೇಕು. ಪ್ರತಿ ತಾಲೂಕಿನಲ್ಲೂ ಪ್ರಾಥಮಿಕ- ಪ್ರೌಢ ಶಾಲೆ ಮಕ್ಕಳಿಗೆ ಸ್ಪರ್ಧೆ ನಡೆಸುತ್ತೇವೆ. ಈ ನಾಲ್ಕು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುತ್ತದೆ. ಗೆದ್ದ ಮಕ್ಕಳನ್ನು ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ಸ್ಪರ್ಧೆಗೆ ಕಳಿಸುತ್ತೇವೆ. ಡಿ.10 ರ ಬುಧವಾರ ಚಿಕ್ಕಮಗಳೂರಿನ ವಿಶ್ವ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳು ನಡೆಯಲಿದೆ ಎಂದರು.
ಅನೇಕ ಊರುಗಳಲ್ಲಿ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಅವರಿಗೆ ನೈತಿಕ ಮೌಲ್ಯದ ಶಿಕ್ಷಣ ನೀಡಬೇಕು ಎಂಬುದೇ ನಮ್ಮ ಉದ್ದೇಶ. ಚಿಕ್ಕಂದಿನಲ್ಲೇ ಮಕ್ಕಳಲ್ಲಿ ಬದಲಾವಣೆ ತಂದರೆ ಮುಂದೆ ಸಮಾಜದಲ್ಲೂ ಬದಲಾವಣೆಯಾಗಲಿದೆ. ಪ್ರತಿ ವರ್ಷ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಮಕ್ಕಳಿಗೆ ಬೇರೆ, ಬೇರೆ ಲೇಖಕರು ಬರೆದ ಮೌಲ್ಯಯುತ ಪುಸ್ತಕಗಳನ್ನು ಶಾಲೆಗೆ, ಮಕ್ಕಳಿಗೆ ನೀಡಿದ್ದೇವೆ ಎಂದರು.ಅತಿಥಿಯಾಗಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಂಜಪ್ಪ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯವರು ಈಗಾಗಲೇ ಶಾಲೆಗಳಿಗೆ ಜ್ಞಾನ ರಥ ಹಾಗೂ ಜ್ಞಾನ ಪಥ ಎಂಬ ಪುಸ್ತಕ ಕಳಿಸಿದ್ದು ಮಕ್ಕಳನ್ನು ಓದಿದ್ದಾರೆ. ಇಂತಹ ಮೌಲ್ಯಯುತ ಪುಸ್ತಕಗಳನ್ನು ಮಕ್ಕಳು ಓದಿದರೆ ಮುಂದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬಹುದು ಎಂದರು.
ಸಭೆ ಅಧ್ಯಕ್ಷತೆ ವಹಿಸಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ ರಾಜಾ ನಾಯ್ಕ್ ಮಾತನಾಡಿ, ಕಳೆದ 10 ವರ್ಷದಿಂದಲೂ ಎನ್.ಆರ್.ಪುರದಲ್ಲಿ ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಿಂದ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ ಎಲ್ಲಾ ಶಾಲೆಗಳಿಗೂ ಜ್ಞಾನ ರಥ- ಜ್ಞಾನ ಪಥ ಪುಸ್ತಕ ನೀಡಿದ್ದಾರೆ. ಇದರಲ್ಲಿ ಮೌಲ್ಯಯುತ ಲೇಖನ, ಲಾಲ್ ಬಹುದ್ದೂರ್ ಶಾಸ್ತ್ರಿ ಸರಳ ಜೀವನದ ಲೇಖನ, ಸಣ್ಣ ಕಥೆಗಳು, ತರಗತಿಗಳಲ್ಲಿ ಮನವೀಯ ಮೌಲ್ಯಗಳ ಬಗ್ಗೆ ಪಾಠ ಗಳಿದ್ದರೂ ಮೌಲ್ಯಯುತ ಪುಸ್ತಕಗಳನ್ನು ಮಕ್ಕಳು ಓದಿದರೆ ಜ್ಞಾನ ವೃದ್ಧಿಯಾಗಲಿದೆ. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು.ಜಾಹ್ನವಿ ಮತ್ತು ತಂಡದವರು ಪ್ರಾರ್ಥಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಆರ್.ನಾಗರಾಜ್, ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಶಿಕ್ಷಕ ಗುಣಪಾಲ್ ಜೈನ್ , ರಂಗಪ್ಪ ಇದ್ದರು.
-- ಬಾಕ್ಸ್--ವಿವಿಧ ಸ್ಪರ್ಧೆಗಳ ವಿಜೇತರು
ಪ್ರಾಥಮಿಕ ಶಾಲೆ: ಭಾಷಣ ಸ್ಪರ್ಧೆ ಪ್ರಥಮ ಆರ್. ಶ್ರೀದೇವಿ, ದ್ವಿತೀಯ ಎಂ.ಸಿ.ರೀಯಾ, ತೃತೀಯ ಎಸ್.ಆರ್.ಇಂಚರ. ಪ್ರಬಂಧ ಸ್ಪರ್ಧೆ ಪ್ರಥಮ ಎಸ್.ಆರ್ ಸೃಜನ್, ದ್ವಿತೀಯ ಅಮೂಲ್ಯ, ತೃತೀಯ ಮಾನ್ಯ ನಾಯಕ್.ಚಿತ್ರಕಲಾ ಸ್ಪರ್ಧೆ- ಪ್ರಥಮ ತೇಜಸ್ ಆಚಾರ್ಯ, ದ್ವಿತೀಯ ಎಚ್.ಜಿ.ನಿಧಿ, ತೃತೀಯ ದಾತ್ರಿಕ್ ಎನ್.ಶ್ಲೋಕ ಕಂಠ ಪಾಠ: ಪ್ರಥಮ ಪ್ರಿಯಾಂಕ, ದ್ವಿತೀಯ ನಾಗಶ್ರೀ, ತೃತೀಯ ವರ್ಷಿತ.
ಪ್ರೌಢ ಶಾಲೆ: ಭಾಷಣ ಸ್ಪರ್ಧೆ ಪ್ರಥಮ ಫಾತಿಮ ,ದ್ವಿತೀಯ ಶಿವಕುಮಾರ, ತೃತೀಯ ನವ್ಯಶ್ರೀ, ಪ್ರಬಂಧ ಸ್ಪರ್ಧೆ- ಪ್ರಥಮ ಕೀರ್ತನ , ದ್ವಿತೀಯ ಸಾನಿಕ, ತೃತೀಯ ಅನುಷ . ಚಿತ್ರಕಲಾ ಸ್ಪರ್ಧೆ -ಪ್ರಥಮ ರಶ್ಮಿ, ದ್ವಿತೀಯ ಸುಮೇಧ, ತೃತೀಯ ನಾಗಶ್ರೀ. ಶ್ಲೋಕ ಕಂಠ ಪಾಠ ಸ್ಪರ್ಧೆ- ಪ್ರಥಮ ಪ್ರಗತಿ, ದ್ವಿತೀಯ ಭವ್ಯ, ತೃತೀಯ ಭಾಗ್ಯ ಆರ್.