ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ವಜನರ ಆರ್ಥಿಕ ಪ್ರಗತಿಗೆ ಚಿಂತಿಸಿ ಪೇಟೆಗಳನ್ನು ನಿರ್ಮಿಸಿದ್ದ ಸರ್ವಧರ್ಮ ಸಮನ್ವಯಾಚಾರ್ಯರಾದ ನಾಡಪ್ರಭು ಕೆಂಪೇಗೌಡರ ಚಿಂತನೆಗಳನ್ನು ಆಡಳಿತಗಾರರು, ಜನಸಾಮಾನ್ಯರು ಅಳವಡಿಸಿಕೊಳ್ಳಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಡಾ.ನಿರ್ಮಲಾನಂದನಾಥ ಶ್ರೀಗಳು ಸಲಹೆ ನೀಡಿದರು.

ಪಟ್ಟಣದ ಟಿಎಪಿಸಿಎಂಎಸ್ ಸಮುದಾಯ ಭವನದ ಆವರಣದಲ್ಲಿ ತಾಲೂಕು ಒಕ್ಕಲಿಗರ ವೇದಿಕೆ ವತಿಯಿಂದ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 517 ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಒಂದು ದೇಶದ ನಿಜವಾದ ಸಂಪತ್ತು ಅಲ್ಲಿನ ಜನ ಸಮುದಾಯ. ಜನರ ಕೌಶ್ಯಲ್ಯವನ್ನು ವೃದ್ಧಿಸಿ ಅದನ್ನು ಸದ್ಬಳಕೆ ಮಾಡಿಕೊಂಡು ದೇಶ ಕಟ್ಟುವವನು ನಿಜವಾದ ಜನನಾಯಕ ಎಂದರು.

500 ವರ್ಷಗಳ ಹಿಂದೆಯೇ ಕೆಂಪೇಗೌಡರು ಬೆಂಗಳೂರು ನಗರವನ್ನು ನಿರ್ಮಿಸಿ ತಮ್ಮ ರಾಜ್ಯದ ಜನರ ಕೌಶಲ್ಯಕ್ಕೆ ತಕ್ಕಂತೆ ಪೇಟೆಗಳನ್ನು ನಿರ್ಮಿಸಿ ಅವರ ಆರ್ಥಿಕ ಸುಸ್ಥಿರತೆಗೆ ಶ್ರಮಿಸಿದರು. ಕೆಂಪೇಗೌಡರು ಜಾತಿಗಾಗಿ ಪೇಟೆಗಳನ್ನು ಕಟ್ಟಲಿಲ್ಲ, ಬದಲಾಗಿ ಜನರ ಆರ್ಥಿಕ ಅಭಿವೃದ್ದಿಗಾಗಿ ಪೇಟೆಗಳನ್ನು ಕಟ್ಟಿದರು. ಕೆಂಪೇಗೌಡರ ಜಯಂತಿ ಕೇವಲ ಕುಣಿತಕ್ಕೆ ಸೀಮಿತವಾಗಬಾರದು ಎಂದರು.

ಕೆಂಗೇರಿ ವಿಶ್ವಒಕ್ಕಲಿಗರ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಎಲ್ಲ ಸಮುದಾಯಗಳನ್ನು ಪ್ರೀತಿಯಿಂದ ಅಪ್ಪಿಕೊಂಡು ಸಹಬಾಳ್ವೆ ನಡೆಸುತ್ತಿರುವ ಸಮುದಾಯ ಒಕ್ಕಲಿಗರು. ಒಕ್ಕಲಿಗರದು ಕಟ್ಟುವ ಸಂಸ್ಕೃತಿ ಎಂದರು.


ಶಾಸಕ ಎಚ್.ಟಿ.ಮಂಜು ಮಾತನಾಡಿ, ಸರ್ವ ಜಾತಿ ಜನಾಂಗಗಳ ಅಭಿವೃದ್ಧಿಗೆ ಅಗತ್ಯ ಪೇಟೆಗಳನ್ನು ಬೆಂಗಳೂರು ನಗರದಲ್ಲಿ ನಿರ್ಮಿಸುವ ಮೂಲಕ ಕೆಂಪೇಗೌಡರು ರಾಜಕೀಯ ಆದರ್ಶಗಳನ್ನು ನಮ್ಮ ಮುಂದೆ ಬಿಟ್ಟು ಹೋಗಿದ್ದಾರೆ ಎಂದರು.

ಜಲ ಸಂಪನ್ಮೂಲವೇ ಇಲ್ಲದ ಬರದ ನಾಡಿನಲ್ಲಿ ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರು ಬೆಂಗಳೂರು ಸುತ್ತ ಮುತ್ತ ಹರಿಯುತ್ತಿದ್ದ ಪುಟ್ಟ ಪುಟ್ಟ ನದಿಗಳ ನೀರನ್ನು ಸದ್ಬಳಕೆ ಮಾಡಿಕೊಂಡು ನೂರಾರು ಕೆರೆಗಳನ್ನು ನಿರ್ಮಿಸಿ ಕೃಷಿ ಮತ್ತು ಕೃಷಿಕರಿಗೆ ಪೂರಕ ಕಸುಬುಗಳನ್ನು ಉತ್ತೇಜಿಸಿದರು. ಕೆಂಪೇಗೌಡರ ಕಾರ್ಯದಕ್ಷತೆ ಮತ್ತು ವಿಸಾಲ ಮನೋಭಾವ ನಮ್ಮೆಲ್ಲರಿಗೂ ಮಾದರಿ ಎಂದರು.