ಸಾರಾಂಶ
ಶಿವಮೊಗ್ಗ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಸೋಮವಾರ ಬೆಳಗ್ಗೆ ನಗರದ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಅವರಿಗೆ ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆಯ ದರ್ಶನವಾಯ್ತು. ಅಲ್ಲಿನ ಅವ್ಯವಸ್ಥೆಯನ್ನು ಗಮನಿಸಿದ ನಾಗಲಕ್ಷ್ಮೀಯವರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.ಆಸ್ಪತ್ರೆಗೆ ಭೇಟಿ ನೀಡುತ್ತಲೇ ಅಲ್ಲಿನ ಟಾಯ್ಲೆಟ್‌ಗಳನ್ನ ಪರಿಶೀಲನೆ ನಡೆಸಿದ ಅವರು, ಶೌಚಾಲಯ ನಿರ್ವಾಹಕರಿಗೆ ಸ್ವಚ್ಛಗೊಳಿಸಲು ಬೇಕಾದ ಸೌಲಭ್ಯ ಸಿಗುತ್ತಿದೆಯೇ ಎಂದು ಪ್ರಶ್ನಿಸಿದರು. ಈ ವೇಳೆ ನಿರ್ವಾಹಕರು ಹೌದು ಎಂದು ಉತ್ತರಿಸಿದರು. ಇದೇ ವೇಳೆ ಶೌಚಾಲಯಕ್ಕೆ ಹೋಗಲು ಅಡ್ಡವಾಗಿ ಮೆಟ್ಟಿಲು ಇರುವುದರಿಂದ ಹಿರಿಯರು ಹಾಗೂ ರೋಗಿಗಳಿಗೆ ಸಮಸ್ಯೆ ಆಗುತ್ತಿದೆ ಅದನ್ನು ತೆಗೆದು ಸಮಸ್ಯೆಯನ್ನು ಸರಿಮಾಡಿ ತಾಕೀತು ಮಾಡಿದರು.ಇನ್ನೂ ರೋಗಿಯೊಬ್ಬರನ್ನು ಮಾತನಾಡಿಸಿದ ಅಧ್ಯಕ್ಷರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಾಗಿ ಸಿಗುತ್ತಿದೆಯೇ ಎಂದು ಪ್ರಶ್ನಿಸಿದರು. ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದ ರೋಗಿಯು, ಆಸ್ಪತ್ರೆ ಚೀಟಿ ಸೇರಿದಂತೆ ಇನ್ನಿತರೇ ಖರ್ಚು 50 ರು. ಹೆಚ್ಚಾಯ್ತು. ಮೇಲಾಗಿ ಟ್ರೀಟ್ಮೆಂಟ್ ಆದಮೇಲೆ ಏನಾದರೂ ಹಣ ತೆಗೆದುಕೊಳ್ಳುತ್ತಾರೆ ಎಂಬ ಭಯವಿದೆ ಎಂದರು. ಇದಕ್ಕೆ ಸ್ಪಷ್ಟನೆ ನೀಡಿದ ಡಾ.ನಾಗಲಕ್ಷ್ಮೀ ಚೌಧರಿ ಅದು ಸಾಮಾನ್ಯ ಖರ್ಚು, ಆಪರೇಷನ್‌ಗೆ ಏನಾದರೂ ಹಣ ಕೇಳಿದ್ದರೆ ನನಗೆ ಮಾಹಿತಿ ನೀಡಿ ಎಂದರು.ಸೋಲಾರ್ ಪ್ಯಾನೆಲ್‌ಗಳನ್ನು ಪರೀಕ್ಷಿಸಿದ ಅಧ್ಯಕ್ಷರು, ಅಲ್ಲಿನ ನಿರ್ವಾಹಕರನ್ನು ವಿಚಾರಿಸಿ, ಸೋಲಾರ್ ವರ್ಕ್ ಆಗುತ್ತಿದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ನಿರ್ವಾಹಕರು, ಎಲ್ಲಾ ಸೋಲಾರ್ ಪ್ಯಾನೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನೂ ಕೆಲವು ಸೋಲಾರ್‌ಗಳನ್ನು ಹಾಕಿಸಬೇಕಿದೆ ಎಂದು ತಿಳಿಸಿದರು.ಇದೇ ವೇಳೆ ಆಸ್ಪತ್ರೆಯಲ್ಲಿದ್ದ ಮಹಿಳೆಯೊಬ್ಬರು, ಇಲ್ಲಿ ಔಷಧಿ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವುದೇ ದೊಡ್ಡ ಸಮಸ್ಯೆಯಾಗಿದೆ. ಗರ್ಭಿಣಿಯರಿಗೆ ಹಾಗೂ ಇತರರಿಗೆ ಪ್ರತ್ಯೇಕ ಕೌಂಟರ್‌ಗಳನ್ನು ಮಾಡಬೇಕು. ಮಾತ್ರೆ ತೆಗೆದುಕೊಳ್ಳಲು ಕಾದು ಕಾದು ಸುಸ್ತಾಗುತ್ತದೆ. ಈ ಕೌಂಟರ್‌ಗಳಲ್ಲಿ ಕೇಳಿದರೆ ಅಲ್ಲಿ ಕೇಳಿ ಎನ್ನುತ್ತಾರೆ. ಅಲ್ಲಿ ಕೇಳಿದರೆ ಇಲ್ಲಿ ಕೇಳಿ ಎನ್ನುತ್ತಾರೆ. ಇದೊಂದು ದೊಡ್ಡ ಸಮಸ್ಯೆಯಾಗಿದೆ ಎಂದು ತಮ್ಮ ಅಳಲನ್ನು ಅಧ್ಯಕ್ಷರೆದುರು ತೋಡಿಕೊಂಡರು.ಬಳಿಕ ಸುದ್ದಿ ಮಾದ್ಯಮಗಳ ಜೊತೆ ಮಾತನಾಡಿದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ, ಸಾಕಷ್ಟು ಕಡೆ ಆಸ್ಪತ್ರೆಗಳಲ್ಲಿ ಮಕ್ಕಳು ಹುಟ್ಟಿದಾಗ ದುಡ್ಡು ಕೇಳುವುದು ಸಹಜ ಎಂಬ ಮಾತು ಕೇಳಿ ಬರುತ್ತಿದೆ. ಬೇರೆಡೆ ನನಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಹುಟ್ಟಿದರೆ 2500 ರು., ಹೆಣ್ಣು ಮಗು ಹುಟ್ಟಿದರೆ 2 ಸಾವಿರ ರು. ಕೊಡಬೇಕು ಎಂದು ಹೇಳುತ್ತಿದ್ದಾರೆ ಎಂಬ ದೂರು ಬಂದಿತ್ತು. ಆದರೆ, ಇಲ್ಲಿ ಒಳ ರೋಗಿಗಳನ್ನು ಪ್ರಶ್ನಿಸಿದಾಗ ಅಂತಹ ಯಾವುದೇ ದೂರು ಅವರು ನೀಡಲಿಲ್ಲ ಎಂದರು.ಮೇಲಾಗಿ , ಇಲ್ಲಿರುವುದು ಒಂದೇ ದೊಡ್ಡ ಸಮಸ್ಯೆ, ಅದು ಔಷಧಿ ಕೌಂಟರ್‌ಗಳಲ್ಲಿ ಕ್ಯೂನಲ್ಲಿ ನಿಲ್ಲುವುದು ಎಂದು ಅಸಮಾಧಾನ ಹೊರಹಾಕಿದರು. ಗರ್ಭಿಣಿಯರು ಬೆಳಿಗ್ಗೆಯಿಂದ ಕ್ಯೂನಲ್ಲಿ ನಿಂತಿರುವುದನ್ನ ಗಮನಿಸಿದೆ. ಇದು ದುರಂತ. ತಾಯಿ ಮಗುವಿನ ವಿಭಾಗದಲ್ಲಿ ಕನಿಷ್ಠ ೧೦ ಕೌಂಟರ್‌ಗಳನ್ನಾದರೂ ಮಾಡಬೇಕು. ಇಲ್ಲಿ ಈ ದುಸ್ಥಿತಿ ಬರಬಾರದಾಗಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ರಿವ್ಯೂವ್ ತೆಗೆದುಕೊಳ್ಳುವ ಒಳಗೆ ಕೌಂಟರ್‌ಗಳ ಸಂಖ್ಯೆ ಹೆಚ್ಚಾಗಬೇಕು ಎಂದು ಹೇಳಿದ್ದೇನೆ. ನಾನು ಒಬ್ಬ ತಾಯಿಯಾಗಿ ಇದನ್ನು ಸಹಿಸಿಕೊಳ್ಳುವುದಿಲ್ಲ ಎಂದರು.ಕುಡಿಯುವ ನೀರು ಸೇರಿದಂತೆ ಎಲ್ಲವೂ ಪೂರೈಕೆ ಇದೆ. ಇಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪಿಎಫ್, ಇಎಸ್‌ಐ ಸೇರಿದಂತೆ ಸಂಬಳ ಸರಿಯಾಗಿ ಬರುತ್ತಿಲ್ಲ ಅಂತಾ ದೂರಿದ್ದಾರೆ. ಆ ಏಜೆನ್ಸಿಯನ್ನು ಬ್ಲಾಕ್‌ಲಿಸ್ಟ್‌ಗೆ ಹಾಕುವಂತೆ ಸೂಚಿಸಿದ್ದೇನೆ. ಇನ್ನು, ನಾರ್ಮಲ್ ಮತ್ತು ಸಿಜೇರಿಯನ್ ಡಿಲೆವೆರಿ ಚೆಕ್ ಮಾಡಿದಾಗ, 1000 ಹೆರಿಗೆಗಳಲ್ಲಿ 600 ಕ್ಕಿಂತ ಹೆಚ್ಚು ನಾರ್ಮಲ್ ಡಿಲೆವರಿ ಆಗುತ್ತಿರುವುದು ಒಳ್ಳೆಯ ಅಂಶವಾಗಿದೆ. ಐಸಿಯುಗಳಲ್ಲಿ ನೀರಿನ ಸೌಲಭ್ಯ, ಹಾಗೆಯೇ ಔಷಧಿ ಸೇರಿದಂತೆ ಇನ್ನಿತರೆ ಎಲ್ಲ ರಿಪೋರ್ಟ್‌ಗಳನ್ನು ಕೇಳಿದ್ದೇನೆ. ಸರತಿ ಸಾಲಿನಲ್ಲಿ ನಿಲ್ಲುವುದೇ ಮೊದಲನೇ ಸಮಸ್ಯೆ. ನಾನು ಇದರ ಬಗ್ಗೆ ಕ್ರಮಕ್ಕಾಗಿ ಕಮಿಷನರ್‌ಗೆ ಪತ್ರ ಬರೆಯುತ್ತೇನೆ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))