ಕನ್ನಡಪ್ರಭ ವಾರ್ತೆ ಇಳಕಲ್ಲ

ಚಿಕ್ಕ ವಯಸ್ಸಿನಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡು ಹುಟ್ಟು ಕುರುಡಿಯಾಗಿದ್ದ ಯುವತಿಯ ಬಾಳಿಗೆ ಬೆಳಕಾದ ವ್ಯಕ್ತಿಯೊಬ್ಬರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು!! ಇಂತಹ ಅಪರೂಪದ ಘಟನೆಗೆ ಸಾಕ್ಷಿಯಾಗಿರುವುದು ಇಲಕಲ್ಲ ನಗರದ ಅಂಬಾಭವಾನಿ ದೇವಸ್ಥಾನ. ಇಳಕಲ್ಲ ನಗರದ ಅಂಧ ಯುವತಿ ಹುಲಿಗೆಮ್ಮ ತಿಪ್ಪಣಸಾ ರಾಯಬಾಗಿ ಎಂಬ ಯುವತಿ ಕೈಹಿಡಿದು ಆಕೆಯೆ ಬಾಳಿಗೆ ಬೆಳಕಾದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್‌ ಮೂಲದ ನಾಗರಾಜ ಪರಶುರಾಮಸಾ ಖೋಡೆ. ಇತನಿಗೂ ತಂದೆ -ತಾಯಿ ಇಲ್ಲದ ಅನಾಥನಾಗಿದ್ದ. ಅಲ್ಲಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಹಾಗೇ ಆತನ ಸ್ನೇಹಿತರಿಂದ ಹುಲಿಗೆಮ್ಮಳ ಬಗ್ಗೆ ಹೇಳಿದ್ದ ಆಕೆ ಕುರುಡಿಯಾಗಿದ್ದರೂ ಆಕೆಗೆ ಬಾಳು ಕೊಡಯವುದಾಗಿ ಹೇಳಿ ಶುಕ್ರವಾರ ಸಾರ್ವಜನಿಕರ ಸಮ್ಮುಖದಲ್ಲಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾನೆ.

ಮದುವೆಗೆ ಹಣಕಾಸಿನ ತೊಂದರೆ: ಮದುವೆ ಏನೋ ನಿಶ್ಚಿಯವಾಯಿತು. ಆದರೆ, ಅದರ ಖರ್ಚು ವೆಚ್ಚಕ್ಕೆ ಮುಂದೆ ಬಂದವರು ಇಲಕಲ್ಲ ನಗರದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜ ಬಾಂಧವರು. ಎಲ್ಲ ಬಾಂಧವರು ಸೇರಿಕೊಂಡು ಶಾಸ್ತ್ರೋಕ್ತವಾಗಿ ವಿಜೃಂಭಣೆಯಿಂದ ನಡೆಸಿಕೊಟ್ಟರು. ವಧು-ವರರ ಲಗ್ನಕ್ಕೆ ಅಗತ್ಯವಿರುವ ಒಡುವೆ-ವಸ್ತ್ರದ ಸಂಪೂರ್ಣ ಖರ್ಚು ಭರಿಸಿ ಮನೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಪೂರೈಸಿ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ.

ಮುಂದಿನ ಜೀವನೋಪಾಯಕ್ಕೆ ಅನುಕೂಲವಾಗಲೆಂದು ₹ 15,000 ಗಳನ್ನು ನೀಡಿ ಸಹಾಯಹಸ್ತ ಚಾಚಿದ್ದಾರೆ. ನಗರದ ಸಾರ್ವಜನಿಕರು ಮದುವೆ ಬಂದು ನೂತನ ವಧು-ವರನಿಗೆ ಶುಭ ಹಾರೈಸಿದರು. ಮದುವೆಗೆ ಬಂದವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು.