ಸಾರಾಂಶ
ನಮ್ಮ ಮೆಟ್ರೋ 3ನೇ ಹಂತಕ್ಕೆ ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ಅನುಮೋದನೆ ಕೊಡುವ ಸಾಧ್ಯತೆ ಇದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಗೆ ಮಾರ್ಚ್ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡುವ ಸಾಧ್ಯತೆಯಿದೆ ಎಂದು ಬೆಂಗಳೂರು ಮೆಟ್ರೋ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.ಬೆಂಗಳೂರು ಮೆಟ್ರೋ ನಿಗಮ ಹಾಗೂ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯಡಿಯ ಎನ್‌ಪಿಜಿ ತಂಡದ ನಡುವೆ ಶೀಘ್ರದಲ್ಲೇ ಈ ಸಂಬಂಧ ಚರ್ಚೆ ನಡೆಯಲಿದ್ದು, ಬಳಿಕ ಕೇಂದ್ರದ ಸಾರ್ವಜನಿಕ ಹೂಡಿಕೆ ಮಂಡಳಿ (ಪಿಐಬಿ) ಜೊತೆ ಸಭೆ ನಿಗದಿಯಾಗಿದೆ. ಇವೆರಡು ಸಭೆ ಬಳಿಕ ಕೇಂದ್ರ ಸರ್ಕಾರ ಬಹುತೇಕ ಲೋಕಸಭೆ ಚುನಾವಣೆ ವೇಳೆಗೆ ಬೆಂಗಳೂರು ಮೆಟ್ರೋ ಮೂರನೇ ಹಂತದ ಯೋಜನೆಗೆ ಹಸಿರು ನಿಶಾನೆ ತೋರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮೊದಲು ₹16,328 ಕೋಟಿ ಮೊತ್ತದ ಯೋಜನೆ ರೂಪಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಆದರೆ, ಕಡತ ವಾಪಸ್ ಕಳಿಸಿದ ಕೇಂದ್ರ ಯೋಜನೆ ಬಗ್ಗೆ ಇನ್ನಷ್ಟು ಸ್ಪಷ್ಟನೆ, ಕೆಲ ಬದಲಾವಣೆ ಸೂಚಿಸಿತ್ತು. ಹೀಗಾಗಿ ಕಳೆದ ವರ್ಷ ಫೆಬ್ರವರಿಯಲ್ಲಿ ₹15,611 ಕೋಟಿಗೆ ಯೋಜನಾ ಮೊತ್ತ ಇಳಿಸಿ ಡಿಪಿಆರ್ ಕಳಿಸಿಕೊಡಲಾಯಿತು. ಅದಾದ ಬಳಿಕವೂ ಕೇಂದ್ರ ಮತ್ತೆ ಹಲವು ಬಾರಿ ಸ್ಪಷ್ಟೀಕರಣ ಕೋರಿತ್ತು. ಬಳಿಕ ಮಾಗಡಿ ಕಾರಿಡಾರ್‌ನಲ್ಲಿ ಪ್ರಸ್ತಾಪಿಸಲಾದ ಆರು ಬೋಗಿಗಳ ರೈಲುಗಳ ಬದಲಾಗಿ ಮೂರು ಬೋಗಿ ರೈಲು ಸಂಚರಿಸುವಂತೆ ಸೂಚಿಸಿತ್ತು.ನಮ್ಮ ಮೆಟ್ರೋ ಮೂರನೇಯ ಹಂತದಲ್ಲಿ ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರದವರೆಗೆ (12.5 ಕಿಮೀ) ಮತ್ತು ಮಾಗಡಿ ರಸ್ತೆ (32.15 ಕಿಮೀ) ಮೂಲಕ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಸೇರಿ ಒಟ್ಟಾರೆ 44.65 ಕಿಮೀ ಕಾರಿಡಾರ್ ನಿರ್ಮಾಣವಾಗಲಿದೆ.
ಮೂರನೇ ಹಂತದ ಮಾರ್ಗವು ನೀಲಿ ಮಾರ್ಗವನ್ನು ಇಬ್ಬಲೂರು- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ನೇರಳೆ ಮಾರ್ಗವನ್ನು ವಿಧಾನಸೌಧದ ಬಳಿ ಹಾಗೂ ಗುಲಾಬಿ ಮಾರ್ಗವನ್ನು ಡೈರಿ ಸರ್ಕಲ್ ಬಳಿ ಸಂದಿಸಲಿದೆ.