ಸಾರಾಂಶ
ಶರಾವತಿ ಮುಳುಗಡೆ ಸಂತ್ರಸ್ತರ ಗೋಳು, ಕಣ್ಣೀರ ಕಥೆಗಳು ಒಂದೆರಡಲ್ಲ. ಹೆಜ್ಜೆ ಹೆಜ್ಜೆಗೂ ಅವರು ಅನುಭವಿಸುತ್ತಿರುವ ಬವಣೆ ಅವರಿಗಲ್ಲದೇ, ಇನ್ಯಾರಿಗೂ ತಿಳಿದಿರಲು ಸಾಧ್ಯವೂ ಇಲ್ಲ. ಪ್ರಸ್ತುತ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದು, ಹಿನ್ನೀರು ಗ್ರಾಮಗಳ ನಿವಾಸಿಗಳು ನೆಚ್ಚಿಕೊಂಡಿರುವ ಲಾಂಚ್ ಸಂಚಾರಕ್ಕೆ ಈಗ ಸಂಚಕಾರ ಬಂದಿದೆ. ಮಳೆ ಕೊರತೆ ದುಷ್ಪರಿಣಾಮ ಹೇಗಿದೆಯೆಂದರೆ, ಇಡೀ ರಾಜ್ಯಕ್ಕೆ ವಿದ್ಯುತ್ ಉತ್ಪಾದಿಸುವ ಶರಾವತಿ ನೀರು ಬಳಸಬೇಡಿ, ಮಳೆಗಾಲದವರೆಗೆ ಲಾಂಚ್ ಸಂಚಾರಕ್ಕೆ ಅವಕಾಶ ನೀಡಿ. ಈ ಅವಕಾಶ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಗಮನಹರಿಸಬೇಕು ಎಂದು ಕರೂರು ಭಾರಂಗಿ ಹೋಬಳಿ ಜನಧ್ವನಿ ಹೋರಾಟ ವೇದಿಕೆ ಅಧ್ಯಕ್ಷ ಪ್ರಸನ್ನ ಕೆರೆಕೈ ಒತ್ತಾಯಿಸುವುದಕ್ಕೂ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಸಾಗರ ಪ್ರಸ್ತುತ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ 1774 ಅಡಿಗಳಿವೆ. ನಿರಂತರ ವಿದ್ಯುತ್ ಉತ್ಪಾದನೆ ಮಾಡಿದರೆ ನೀರಿನಮಟ್ಟ 1761 ಅಡಿಗೆ ತಲುಪಿದಲ್ಲಿ ಶರಾವತಿ ಹಿನ್ನೀರಿನ ಸಂತ್ರಸ್ತರಿಗೆ ಲಾಂಚ್ ಸಂಚಾರ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ. ನಾಡಿಗೆ ಬೆಳಕು ನೀಡಲು ಸರ್ವಸ್ವವನ್ನೇ ತ್ಯಾಗ ಮಾಡಿರುವ ಹಿನ್ನೀರಿನ ಜನರ ಸಾರಿಗೆ ಸಂಪರ್ಕವನ್ನು ಉಳಿಸಿಕೊಡಲು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಗಮನಹರಿಸಬೇಕು ಎಂದು ಕರೂರು ಭಾರಂಗಿ ಹೋಬಳಿ ಜನಧ್ವನಿ ಹೋರಾಟ ವೇದಿಕೆ ಅಧ್ಯಕ್ಷ ಪ್ರಸನ್ನ ಕೆರೆಕೈ ಒತ್ತಾಯಿಸಿದರು.
ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮಳೆ ಪ್ರಮಾಣ ತೀರಾ ಕಡಿಮೆ ಸಂಭವಿಸಿದೆ. ಇದರಿಂದ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟವೂ ತೀರಾ ಕಡಿಮೆ ಇದೆ. ಲಿಂಗನಮಕ್ಕಿ ಡ್ಯಾಂ ನೀರು ಬಳಸಿ ಬೇರೆ ಬೇರೆ ವಿದ್ಯುದಾಗಾರಗಳಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ ಎಂದರು.ವಿದ್ಯುತ್ ಉತ್ಪಾದನೆ ನಿಲ್ಲಿಸಿ:
ಇದೇ ರೀತಿ ವಿದ್ಯುತ್ ಉತ್ಪಾದನೆಗೆ ನೀರು ಬಳಕೆ ಮಾಡಿದರೆ ಡ್ಯಾಂ ಬರಿದಾಗುವ ಜೊತೆಗೆ ಶರಾವತಿ ನದಿಪಾತ್ರದಲ್ಲಿ ಹಿನ್ನೀರು ಕಡಿಮೆ ಆಗುತ್ತದೆ. ಆಗ ಲಾಂಚ್ ಓಡಾಡಲು ಸಾಧ್ಯ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಮೇ ತಿಂಗಳವರೆಗೆ ಶರಾವತಿ ನದಿಪಾತ್ರದ ವಿದ್ಯುದಾಗಾರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು ನಿಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಇಂಧನ ಸಚಿವರಿಗೆ ಮತ್ತು ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಆಗ್ರಹಿಸಿದರು.ಹೋರಾಟ ಅನಿವಾರ್ಯ:
ಈಗಾಗಲೇ ಹಿನ್ನೀರು ಕಡಿಮೆ ಆಗಿರುವುದರಿಂದ ಲಾಂಚ್ ನಿಲ್ಲಿಸಲು ರ್ಯಾಂಪ್‌ಗಳ ಸಮಸ್ಯೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ರ್ಯಾಂಪ್‌ಗಳಿದ್ದರೂ ಅದು ನೀರಿನಮಟ್ಟ ಕಡಿಮೆ ಇದ್ದಾಗ ಉಪಯೋಗಕ್ಕೆ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಳಸವಳ್ಳಿ ದಡ ಮತ್ತು ಅಂಬಾರಗೋಡ್ಲು ದಡದಲ್ಲಿ ಹೆಚ್ಚುವರಿ ರ್ಯಾಂಪ್ ನಿರ್ಮಿಸಲು ಶಾಸಕರು ಗಮನಹರಿಸಬೇಕು. ಮಳೆಗಾಲ ಪ್ರಾರಂಭವಾಗುವ ತನಕ ಹಿನ್ನೀರಿನ ಜನರಿಗೆ ಲಾಂಚ್ ಸೌಲಭ್ಯ ಸುಗಮವಾಗಿ ಸಿಗುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ವಿದ್ಯುತ್ ಉತ್ಪಾದನೆ ಇನ್ನಿತರೆ ಕಾರಣಕ್ಕೆ ಹಿನ್ನೀರನ್ನು ಬಳಸಿ ಸಂತ್ರಸ್ತರಿಗೆ ಲಾಂಚ್ ಸೌಲಭ್ಯಕ್ಕೆ ಅಡ್ಡಿಪಡಿಸಿದರೆ ವೇದಿಕೆ ವತಿಯಿಂದ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಅನಿಲಕುಮಾರ್, ಜಿ.ಪಿ.ಶ್ರೀನಿವಾಸ್ ಗದ್ದೆಮನೆ, ಶ್ರೀಧರ ಚುಟ್ಟಿಕೆರೆ, ಮಂಜಯ್ಯ ಜೈನ್ ಸಂಸೆ, ಸಚಿನ್, ರಾಘವೇಂದ್ರ, ಗಣಪತಿ ಹಿನ್ಸೋಡಿ ಇನ್ನಿತರರು ಹಾಜರಿದ್ದರು.
- - -