ರಾಮನಗರ: ಹಾಲು ಶೇಖರಣಾ ವ್ಯವಸ್ಥೆಯಲ್ಲಿ ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಅಳವಡಿಸಿಕೊಂಡು ಗಮನ ಸೆಳೆದಿರುವ ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ಇದೀಗ ರಾಸುಗಳು ವಿಮೆ ಮಾಡಿಸುವಾಗ ರಾಸುಗಳ ಮೂಗಿನ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ.

ರಾಸುಗಳ ವಿಮೆ ಪರಿಹಾರ ಹಣ ತಡವಾಗಿ ಪಾವತಿಯಾಗುತ್ತಿದೆ ಎಂಬ ದೂರುಗಳು ಒಂದೆಡೆಯಾದರೆ, ಮತ್ತೊಂದೆಡೆ ವಿಮೆ ಪಾವತಿಯಲ್ಲಿ ಅಕ್ರಮಗಳೇ ಹೆಚ್ಚಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕುವ ಉದ್ದೇಶದಿಂದ ವಿಮೆ ಮಾಡಿಸಿದ ರಾಸುಗಳ ಮೂಗಿನ ಮೇಲಿರುವ ಗೆರೆಗಳ ಸಂಗ್ರಹಣೆಯ ವಿನೂತನ ಕಾರ್ಯಕ್ಕೆ ಬಮೂಲ್ ಚಾಲನೆ ನೀಡುತ್ತಿದೆ.

ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಎಐ ತಂತ್ರಜ್ಞಾನ ಒಳಗೊಂಡ ಆಟೋಮ್ಯಾಟಿಕ್ ಮಿಲ್ಕ್ ಕಲೆಕ್ಷನ್ ಸಿಸ್ಟಮ್ (ಎಎಂಸಿಎಸ್) ಅಳವಡಿಸಿಕೊಂಡ ಮೊದಲ ಒಕ್ಕೂಟ ಎಂಬ ಖ್ಯಾತಿಗೆ ಪಾತ್ರವಾಗಿರುವ ಬೆಂಗಳೂರು ಹಾಲು ಒಕ್ಕೂಟ, ಈಗ ರಾಸುಗಳ ಮೂಗಿನ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಹೈನುಗಾರಿಕೆ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಮನ್ನುಡಿ ಬರೆಯಲು ಹೊರಟಿದೆ.

ರಾಸುಗಳ ಮೂಗಿನ ಗೆರೆಗಳು, ಮನುಷ್ಯರ ಬೆರಳಚ್ಚುಗಳಂತೆ ವಿಶಿಷ್ಟವಾಗಿದ್ದು, ಪ್ರತಿಯೊಂದು ರಾಸುವಿನ ಮೂಗಿನ ಮೇಲಿನ ಗೆರೆಗಳು ಭಿನ್ನವಾಗಿರುತ್ತವೆ. ಬಯೋಮೆಟ್ರಿಕ್ ನಲ್ಲಿ ಸಂಗ್ರಹಿಸಿದ ಅವುಗಳನ್ನು ರಾಸುಗಳ ಗುರುತಿಸುವಿಕೆ ಮತ್ತು ದಾಖಲೆ ನಿರ್ವಹಣೆಗೆ ಬಳಸಲಾಗುತ್ತದೆ. ಮರಣ ಹೊಂದಿದ ರಾಸುಗೆ ವಿಮೆ ಮಾಡಿಸಲಾಗಿದಿಯೇ ಇಲ್ಲವೊ ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು.

ಸಾಮಾನ್ಯವಾಗಿ ಹಸುಗಳು ಒಂದಕ್ಕೊಂದು ಹೋಲುತ್ತವೆ. ಅವುಗಳ ಕಿವಿಯ ಟ್ಯಾಗ್ ಗಳು ಬಿದ್ದು ಹೋದರೆ ಅಥವಾ ಮಸುಕಾದರೆ ಅವುಗಳನ್ನು ಗುರುತಿಸುವುದು. ಹಸು ಕಳ್ಳತನವಾದರೆ ಮಾಲೀಕತ್ವವನ್ನು ಸಾಬೀತು ಪಡಿಸುವುದು ಕಷ್ಟ. ಅಲ್ಲದೆ, ಹಸುವಿನ ಆರೋಗ್ಯ, ಹಾಲಿನ ಇಳುವರಿ ಅಥವಾ ಲಸಿಕೆ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಳ್ಳುವುದು, ಸಬ್ಸಿಡಿ ಒದಗಿಸುವ ಸರ್ಕಾರಿ ಯೋಜನೆಗಳಿಗೆ, ಸರಿಯಾದ ರಾಸುವನ್ನು ನೋಂದಾಯಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಸವಾಲಿನ ಸಂಗತಿಯಾಗಿದೆ.


ಈ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಪ್ರತಿ ಹಸುವಿಗೆ ಶಾಶ್ವತ ಮತ್ತು ಅಮಾನ್ಯ ಐಡಿಯನ್ನು ನೀಡಲಾಗುತ್ತದೆ. ಇದರಿಂದ ರಾಸುಗಳ ಕಳ್ಳತನ ತಡೆಗಟ್ಟಲು ಮತ್ತು ವಿಮೆ ದಾಖಲೆಗಳಿಗೆ ಅನುಕೂಲವಾಗುತ್ತದೆ. ಅಲ್ಲದೆ ರಾಸುವಿನ ವಂಶಾವಳಿ, ವೈದ್ಯಕೀಯ ಇತಿಹಾಸ ಮತ್ತು ಮಾಲೀಕತ್ವವನ್ನು ಸ್ಪಷ್ಟವಾಗಿ ಪತ್ತೆಹಚ್ಚಲು ಸಹಕಾರಿಯಾಗುತ್ತದೆ.

ಹಸು ವಿಮೆಯಲ್ಲಿ ಅಕ್ರಮ :

ವಿಮೆ ಮಾಡಿಸಿದ ರಾಸು ಮರಣ ಹೊಂದಿದರೆ ಅದಕ್ಕೆ ಸಂಬಂಧಿಸಿದ ವೈದ್ಯರ ಪ್ರಮಾಣ ಪತ್ರ ಸೇರಿ ಅಗತ್ಯ ದಾಖಲೆಗಳು ಸಲ್ಲಿಕೆಯಾದ 90 ದಿನಗಳಲ್ಲಿ ವಿಮೆ ಹಣವನ್ನು ರೈತನಿಗೆ ವಿಮೆ ಕಂಪನಿ ಪಾವತಿಸುತ್ತದೆ. ಆದರೆ, ವಿಮೆ ವಿಚಾರದಲ್ಲಿ ಅಕ್ರಮಗಳೇ ಹೆಚ್ಚಾಗಿ ನಡೆಯುತ್ತಿದ್ದು, ಕೆಲವೊಮ್ಮೆ ವಿಮೆ ಮಾಡಿಸಿರುವ ರಾಸುಗಳು ಮರಣ ಹೊಂದಿದಾಗಲು ರೈತರು ಸಕಾಲಕ್ಕೆ ವಿಮಾ ಸೌಲಭ್ಯ ಪಡೆಯಲು ಸಾಧ್ಯವಾಗದೆ ವಿಮಾ ಕಂಪನಿಗಳ ಕಚೇರಿ ಬಾಗಿಲು ಅಲೆಯುವಂತಾಗಿತ್ತು.

ಸತ್ತ ರಾಸುವಿನ ಬದಲಿಗೆ ಬೇರೆ ಹಸುವಿನ ಫೋಟೋಗಳನ್ನು ಬಳಸುವುದು ಅಥವಾ ಬದುಕಿರುವ ರಾಸುವನ್ನು ಸತ್ತಿದೆ ಎಂದು ತೋರಿಸಿ ವಿಮಾ ಹಣ ಪಡೆಯುವುದು. ವಿಮೆ ಮಾಡಿಸಿದ ರಾಸುವಿನ ಕಿವಿಯ ಟ್ಯಾಗ್ ಅನ್ನು ತೆಗೆದು, ಬೇರೆ ರಾಸುವಿಗೆ ಹಾಕಿ ವಿಮೆ ಪಡೆಯುವುದು. ವಿಮಾ ಕಂಪನಿಯ ಏಜೆಂಟರು ಅಥವಾ ಪಶುವೈದ್ಯರೊಂದಿಗೆ ಶಾಮೀಲಾಗಿ, ನಿಯಮಗಳನ್ನು ಗಾಳಿಗೆ ತೂರಿ ವಿಮೆ ಮಾಡಿಸಿ ಪರಿಹಾರ ಪಡೆಯುತ್ತಿದ್ದರು.

ಕೆಲವೊಮ್ಮೆ ನಿಜವಾಗಿಯೂ ರಾಸು ಸತ್ತಿದ್ದರೂ, ತಾಂತ್ರಿಕ ಕಾರಣಗಳನ್ನು ನೀಡಿ ವಿಮಾ ಕಂಪನಿಗಳು ಪರಿಹಾರ ನೀಡಲು ವಿಳಂಬ ಮಾಡುವುದು ಅಥವಾ ನಿರಾಕರಿಸುವುದು. ಕೆಲವು ಏಜೆಂಟರು ರೈತರಿಂದ ನಿಗದಿಗಿಂತ ಹೆಚ್ಚಿನ ಹಣ ವಸೂಲಿ ಮಾಡುವುದು ಕಂಡು ಬರುತ್ತಿತ್ತು. ಈ ಎಲ್ಲ ಅಕ್ರಮಗಳಿಗೆ ರಾಸುಗಳ ಮೂಗಿನ ಬಯೋಮೆಟ್ರಿಕ್ ವ್ಯವಸ್ಥೆಯಿಂದ ಕಡಿವಾಣ ಬೀಳಲಿದೆ.

ಕೋಟ್ .................

ರಾಸುಗಳ ವಿಮೆ ಪರಿಹಾರದಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಲು ವಿಮೆ ಮಾಡಿಸುವಾಗಲೇ ರಾಸುಗಳ ಮೂಗಿನ ರೇಖೆ ಸಂಗ್ರಹ ಮಾಡಲಾಗುತ್ತಿದೆ. ಈಗ ರಾಸುಗಳ ವಿಮೆ ಹಣವನ್ನು 80-1.20 ಲಕ್ಷ ರುಪಾಯಿಗಳಿಗೆ ಹೆಚ್ಚಳ ಮಾಡಲಾಗಿದೆ. ರಾಸುಗಳು ಮರಣ ಹೊಂದಿದರೆ ರಾಸು ಮರಣ ಪರಿಹಾರ ಯೋಜನೆಯಡಿ 15 ದಿನದೊಳಗೆ ಪರಿಹಾರ ಹಣ ಸಿಗಲಿದೆ.

-ಡಿ.ಕೆ.ಸುರೇಶ್, ಅಧ್ಯಕ್ಷರು, ಬಮೂಲ್

ಬಾಕ್ಸ್ ................

ಹಸು ಮೂಗಿನ ಗೆರೆ ಸಂಗ್ರಹಿಸುವ ವಿಧಾನ:

ಹಸು ಮೂಗಿನ ಬಯೋಮೆಟ್ರಿಕ್ ಸರಳವಾಗಿದೆ. ಮೊದಲು ಹಸುವಿನ ಮೂಗನ್ನು ಸ್ವಚ್ಛಗೊಳಿಸಿ ಒಣಗಿಸಲಾಗುತ್ತದೆ. ಸ್ಮಾರ್ಟ್ ಫೋನ್ ಬಳಸಿ ಕ್ಲೋಸ್ ಆಪ್ ಫೋಟೋ ತೆಗೆಯುತ್ತಾರೆ. ಅದರಲ್ಲಿರುವ ವಿಶೇಷ ಸಾಫ್ಟ್ ವೇರ್ ಮೂಗಿನ ಮೇಲಿನ ಗೆರೆಗಳನ್ನು ಸಂಗ್ರಹಿಸಿ ಡಿಜಿಟಲ್ ಕೋಡ್ ಆಗಿ ಪರಿವರ್ತಿಸುತ್ತದೆ. ಈ ಕೋಡ್ ಅನ್ನು ಡೇಟಾ ಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ.

ಬಾಕ್ಸ್ ..............

ರಾಸು ಮರಣ ಪರಿಹಾರ ಯೋಜನೆ ಜಾರಿ?

ಈವರೆಗೆ ರಾಸುಗಳ ವಿಮೆಗೆ ರೈತರು ಮತ್ತು ಬಮೂಲ್‌ನಿಂದ ವಿಮಾ ಕಂಪನಿ ಮತ್ತು ಬ್ಯಾಂಕಿಗೆ ಪ್ರೀಮಿಯಂ ಭರಿಸುತ್ತಿದ್ದರು. ಆದರೀಗ ಬಮೂಲ್ ಹೈನುಗಾರರ ಹಿತದೃಷ್ಟಿಯಿಂದ ರಾಸು ಮರಣ ಪರಿಹಾರ ಯೋಜನೆಯನ್ನು ಜಾರಿಗೆ ತರಲಿದೆ. ಅದರಡಿಯಲ್ಲಿ ರಾಸು ಮರಣ ಹೊಂದಿದ 15 ದಿನದೊಳಗೆ ಪರಿಹಾರ ಹಣ ವಿತರಿಸಲು ಉದ್ದೇಶಿಸಿದೆ. ಕನಿಷ್ಟ ಪ್ರೀಮಿಯಂನೊಂದಿಗೆ ಒಕ್ಕೂಟದ ಅನುದಾನದಲ್ಲಿ ಈ ಯೋಜನೆ ಕಾರ್ಯಗತಗೊಳಿಸಲಾಗುತ್ತಿದೆ. ಈ ಯೋಜನೆ ರಾಸುಗಳು ಆಕಸ್ಮಿಕ ಮರಣ ಹೊಂದಿದಾಗ ರೈತರಿಗೆ ಆರ್ಥಿಕ ಭದ್ರತೆ ಒದಗಿಸಿ, ಹೈನುಗಾರಿಕೆ ಮುಂದುವರಿಸಲು ನೆರವಾಗಲಿದೆ.

ಬಾಕ್ಸ್ ...............

ಹಸು ಮೂಗಿನ ಬಯೋಮೆಟ್ರಿಕ್ ಪ್ರಯೋಜನಗಳು ?

1.ವಿಮೆ ಮಾಡಿಸಿದ ರಾಸು ಮರಣ ಹೊಂದಿದಾಗ ಅವುಗಳ ಮಾಲೀಕರಿಗೆ ತ್ವರಿತಗತಿಯಲ್ಲಿ ಪರಿಹಾರ ವಿತರಿಸಲು ಅನುಕೂಲವಾಗುತ್ತದೆ.

2.ಕಳ್ಳತನವಾದ ರಾಸುಗಳನ್ನು ತಕ್ಷಣವೇ ಗುರುತಿಸಬಹುದು ಮತ್ತು ಮಾಲೀಕತ್ವವನ್ನು ತ್ವರಿತವಾಗಿ ಪರಿಶೀಲಿಸಬಹುದು.

3.ಪಶುವೈದ್ಯರು ಸರಳ ಸ್ಕ್ಯಾನ್ ಮೂಲಕ ರಾಸುವಿನ ಸಂಪೂರ್ಣ ವೈದ್ಯಕೀಯ ಇತಿಹಾಸವನ್ನು ತಿಳಿಯಬಹುದು. ರೋಗಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

4.ಸರ್ಕಾರದ ಸಬ್ಸಿಡಿಗಳು, ವಿಮೆ ಮತ್ತು ಇತರ ಪ್ರಯೋಜನಗಳು ಹೈನುಗಾರರಿಗೆ ತಲುಪುತ್ತವೆ. ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ.

5.ನಿಖರವಾದ ಡೇಟಾದ ಆಧಾರದ ಮೇಲೆ ರೈತರು ಹಾಲಿನ ಉತ್ಪಾದನೆಯನ್ನು ನೋಡಿ ಉತ್ತಮ ತಳಿಗಳು ಯಾವುದೆಂದು ನಿರ್ಧರಿಸಬಹುದು.

2ಕೆಆರ್ ಎಂಎನ್ 5,6.ಜೆಪಿಜಿ

5.ಡಿ.ಕೆ.ಸುರೇಶ್ , ಅಧ್ಯಕ್ಷರು, ಬಮೂಲ್ .

6.ಸಾಂದರ್ಭಿಕ ಚಿತ್ರ