ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ಪರಿಕಲ್ಪನೆಯಿಂದ ಡಾ. ವಿರೇಂದ್ರ ಹೆಗ್ಗಡೆಯವರು ಇಡೀ ರಾಜ್ಯಾದ್ಯಂತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸೇವೆ ಸಲ್ಲಿಸುವ ಮೂಲಕ ಶಿಕ್ಷಣ, ಆರೋಗ್ಯ, ಆರ್ಥಿಕತೆ ಹಾಗೂ ಕೃಷಿಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಾ ಬರುತ್ತಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ತಿಳಿಸಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ಏರ್ಪಡಿಸಿದ ಸುಜ್ಞಾನ ನಿಧಿ ಶಿಷ್ಯವೇತನ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮಂಜೂರಾತಿ ಪತ್ರಗಳನ್ನ ವಿತರಣೆ ಮಾಡಿ ಮಾತನಾಡಿದ ಅವರು, ಗ್ರಾಮಗಳ ಅಭಿವೃದ್ಧಿ ಮಾಡುವ ಉದ್ದೇಶದಿಂದ ನಮ್ಮ ಸಂಸ್ಥೆ ರಾಜ್ಯದಲ್ಲಿ 458 ಘಟಕಗಳನ್ನ ಸ್ಥಾಪಿಸಿ 6.94 ಸಾವಿರ ಸ್ವ-ಸಹಾಯ ಸಂಘಗಳನ್ನ ರಚಿಸಿದ್ದು, 6 ಲಕ್ಷ ಸದಸ್ಯತ್ವವನ್ನ ಹೊಂದಿರುವ ಬೃಹತ್ ಸಂಸ್ಥೆಯಾಗಿ ಇಂದು ಬೆಳೆದು ನಿಂತಿದೆ. ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಆಶಾಕಿರಣವಾಗಿ ಅವರುಗಳಿಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರೋಗ್ಯದ ಸವಲತ್ತುಗಳನ್ನು ಕಲ್ಪಿಸುತ್ತಿರುವುದಲ್ಲದೆ, ಕೃಷಿಕರಿಗೆ ಸಲಕರಣೆಗಳನ್ನು ಹಾಗೂ ನಿಯಮನುಸಾರ ಕೃಷಿ ಪದ್ಧತಿಯನ್ನ ಮಾಡುವ ಬಗ್ಗೆ ತರಬೇತಿಯನ್ನ ನೀಡುತ್ತಾ ಬರುತ್ತಿದೆ. ರಾಜ್ಯದಲ್ಲಿ 18ಸಾವಿರ ಜನರಿಗೆ ಮಾಸಾಶನ, 29 ಸಾವಿರ ವಿಕಲಚೇತನರಿಗೆ ಸಹಾಯ ಹಸ್ತ, ನಮ್ಮೂರು ನಮ್ಮಕೆರೆ ಯೋಜನೆಯಡಿ 780 ಕೆರೆಗಳ ಅಭಿವೃದ್ಧಿ ಇದಲ್ಲದೆ ರಾಜ್ಯದ ಸರ್ಕಾರಿ ಶಾಲೆಗಳಿಗೆ ಪೀಠೋಪಕರಣ ಶಿಕ್ಷಕರ ನೇಮಕಾತಿಯನ್ನು ಮಾಡುತ್ತಾ ಬರುತ್ತಿದೆ. ನಮ್ಮ ಸಂಸ್ಥೆ ಸಮಾಜದ ಸಮುದಾಯದ ಸರ್ವೋತೋಮುಖ ಅಭಿವೃದ್ಧಿಯನ್ನು ಬಯಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಡಗು ಜಿಲ್ಲೆ ಲೀಲಾವತಿ ಮಾತನಾಡಿ, 1982ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಸಂಘಟನೆಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ ಬರುತ್ತಿದೆ. ಬಡ ಕುಟುಂಬದ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಾ ಬರುತ್ತಿರುವುದಲ್ಲದೆ ಅರಕಲಗೂಡು ತಾಲೂಕಿನಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹಧನವಾಗಿ 31 ಹಾಲು ಉತ್ಪಾದಕರ ಕಟ್ಟಡ ನಿರ್ಮಾಣಕ್ಕೆ 34 ಲಕ್ಷ, 50 ದೇವಸ್ಥಾನಗಳ ಅಭಿವೃದ್ಧಿಗೆ 59 ಲಕ್ಷ, 2 ರುಧ್ರಭೂಮಿಗೆ 4 ಲಕ್ಷ, ಸುಜ್ಞಾನ ನಿಧಿಗೆ 242 ವಿದ್ಯಾರ್ಥಿಗಳಿಗೆ 54 ಲಕ್ಷದ 10 ಸಾವಿರ, ಆರೋಗ್ಯ ಕಾರ್ಯಕ್ರಮಗಳಿಗೆ ಹಾಗೂ 70 ನಿರ್ಗತಿಕರಿಗೆ ತಲಾ ಒಂದು ಸಾವಿರದಂತೆ 70 ಸಾವಿರ ಹೀಗೆ ಇನ್ನು ಹಲವಾರು ಯೋಜನೆಗಳಿಗೆ ಮಂಜೂರಾತಿ ಪತ್ರವನ್ನ ನೀಡಲಾಗಿದೆ. ಇದರ ಸದುಪಯೋಗವನ್ನ ಪಡೆದುಕೊಳ್ಳುವಂತೆ ವಿನಂತಿಸಿದರು.ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ. ನಾರಾಯಣ್, ಪತ್ರಕರ್ತರ ಸಂಘದ ಅಧ್ಯಕ್ಷ ಎ.ಪಿ. ಶಂಕರ್, ಬಿಎಸ್‌ಪಿ ಜಿಲ್ಲಾಧ್ಯಕ್ಷ ಅತ್ನಿ ಹರೀಶ್ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ಸದಸ್ಯ ವಿ.ಎ. ನಂಜಂಡಸ್ವಾಮಿ, ಯೋಜನಾಧಿಕಾರಿ ಚಿನ್ನಪ್ಪ ಉಪಸ್ಥಿತರಿದ್ದರು.