ಶರಣರ ಮೌಲ್ಯ ಅಳವಡಿಸಿಕೊಂಡರೆ ಜೀವನ ಸಾರ್ಥಕ

| Published : Aug 18 2024, 01:54 AM IST

ಸಾರಾಂಶ

ಶರಣ ಸಾಹಿತ್ಯ ಕನ್ನಡದ ಅತ್ಯಮೂಲ್ಯ ಆಸ್ತಿ. ನುಡಿದಂತೆ ನಡೆದ ಬಸವಾದಿ ಶರಣರ ಜೀವನಾದರ್ಶಗಳು ನಮ್ಮೆಲ್ಲರಿಗೂ ದಾರಿದೀಪ. ಅವರ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಪ್ರೊ. ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.

ಕನ್ನಡಪ್ರಭವಾರ್ತೆ ಚಿತ್ರದುರ್ಗಶರಣ ಸಾಹಿತ್ಯ ಕನ್ನಡದ ಅತ್ಯಮೂಲ್ಯ ಆಸ್ತಿ. ನುಡಿದಂತೆ ನಡೆದ ಬಸವಾದಿ ಶರಣರ ಜೀವನಾದರ್ಶಗಳು ನಮ್ಮೆಲ್ಲರಿಗೂ ದಾರಿದೀಪ. ಅವರ ಜೀವನ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಚಿತ್ರದುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಪ್ರೊ. ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.ತಾಲೂಕಿನ ಜೆ.ಎನ್. ಕೋಟೆಯಲ್ಲಿ ಆಯೋಜಿಸಿದ್ದ ಅನುಭಾವ ಶ್ರಾವಣ ಸರಣಿ ಚಿಂತನ ಮಾಲೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಎಷ್ಟು ವರ್ಷ ಬದುಕಿದ್ದೆವು ಎಂಬುದು ಮುಖ್ಯವಲ್ಲ. ಬದಲಾಗಿ ಹೇಗೆ ಸಮಾಜಮುಖಿಯಾಗಿ ಬದುಕು ಸವೆಸಿದೆವು ಎಂಬುದು ಪ್ರಧಾನವಾಗುತ್ತದೆ. ಇಂತಹ ಸಾರ್ಥಕ ಬದುಕನ್ನು ಬದುಕಿದವರು ಯಡಿಯೂರು ಸಿದ್ದಲಿಂಗೇಶ್ವರರು ಎಂದರು.ಸಾನಿಧ್ಯ ವಹಿಸಿದ್ದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಶ್ರೀಗಳು ಮಾತನಾಡಿ, ಎಲ್ಲರೊಂದಿಗೆ ಬೆರೆತು ಹೋಗುವ ಮನಸ್ಸಿನಿಂದ, ಅನುಭಾವ ಶ್ರಾವಣ ಎಂಬ ಕಾರ್ಯಕ್ರಮವನ್ನು ಹೊತ್ತು ಮುರುಘಾಮಠ ನಿಮ್ಮ ಊರುಗಳಿಗೆ ಬರುತ್ತಿದೆ ಎಂದರು.

ಬರುವ ಅಕ್ಟೋಬರ್ ತಿಂಗಳಲ್ಲಿ ಒಂಭತ್ತು ದಿನಗಳ ಕಾಲ ನಡೆಯುವ ಶರಣ ಸಂಸ್ಕೃತಿ ಉತ್ಸವದಲ್ಲಿ ಈ ಬಾರಿ ಜಯದೇವ ಜಗದ್ಗುರುಗಳವರ 150ನೇ ಜಯಂತ್ಯುತ್ಸವದ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಶ್ರೀಗಳು ತಿಳಿಸಿದರು.

ಈ ವೇಳೆ ಹೆಗ್ಗುಂದದ ವನಕಲ್ಲು ಮಲ್ಲೇಶ್ವರ ಮಠದ ಬಸವ ರಮಾನಂದ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಬಸವರಾಜ ಕಟ್ಟಿ, ಗ್ರಾಮದ ಟಿ.ಐ. ಚನ್ನಬಸಪ್ಪ, ಯು.ಮಂಜುನಾಥ್, ಎಲ್.ಟಿ. ಏಕಾಂತಪ್ಪ ಮತ್ತಿತರರು ಉಪಸ್ಥಿತರಿದ್ದರು. ಮುಖಂಡ ಟಿ.ಎಲ್. ಬಸವರಾಜಪ್ಪ ಅವರು ಸ್ವಾಗತಿಸಿದರು. ಜಾಗತಿಕ ಲಿಂಗಾಯತ ಮಹಾಸಭಾದ ಚಿತ್ರದುರ್ಗದ ಗೀತಾರುದ್ರೇಶ್ ವಂದಿಸಿದರು.