ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ಕೋಲ್ಕತಾದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ಕೊಟ್ಟಿದ್ದ ಆಸ್ಪತ್ರೆಗಳ ಬಂದ್‌ಗೆ ಚನ್ನಗಿರಿ ಸರ್ಕಾರಿ ವೈದ್ಯರು ಮತ್ತು ಸಿಬ್ಬಂದಿ ಬೆಂಬಲ ನೀಡಿ ಆಸ್ಪತ್ರೆ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.ಈ ವೇಳೆ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಪ್ಪ ಮಾತನಾಡಿ, ಕೋಲ್ಕತಾದಲ್ಲಿ ಕರ್ತವ್ಯ ನಿರತ ವೈದ್ಯೆ ಮೇಲೆ ಕೆಲ ಕಿಡಿಗೇಡಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವುದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಕೃತ್ಯವಾಗಿದ್ದು, ಪ್ರಕರಣದ ಆರೋಪಿಗಳಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವೈದ್ಯಕೀಯ ವೃತ್ತಿ ಪವಿತ್ರ ವೃತ್ತಿಯಾಗಿದ್ದು, ವೈದ್ಯರನ್ನು ಕಣ್ಣಿಗೆ ಕಾಣುವ ದೇವರೆಂದು ಕರೆಯುತ್ತಾರೆ. ಜೀವ ಉಳಿಸುವ ವೈದ್ಯರಿಗೆ ಇಂದಿನ ಸಮಾಜದಲ್ಲಿ ರಕ್ಷಣೆ ಇಲ್ಲದಿರುವುದು ದುರಂತವಾಗಿದ್ದು, ಇಂತಹ ಕೃತ್ಯ ನಮ್ಮ ದೇಶದಲ್ಲಿ ಮರುಕಳಿಸದಂತೆ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕಾಗಿದೆ ಎಂದರು.ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ವೈದ್ಯೆ ಮೇಲೆ ನಡೆದ ಅತ್ಯಾಚಾರ ಖಂಡಿಸಿ ದೇಶದಾದ್ಯಂತ ಕರೆ ನೀಡಿದ್ದ ಬಂದ್‌ಗೆ ಚನ್ನಗಿರಿ ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ವೈದ್ಯರು ಬೆಂಬಲ ಸೂಚಿಸಿದ್ದು ಶನಿವಾರ ಬೆಳಗ್ಗೆ 6ರಿಂದ ಭಾನುವಾರ ಬೆಳಗ್ಗೆ 6ರವರೆಗೆ ಹೊರ ರೋಗಿಗಳ ಸೇವೆ ಇರುವುದಿಲ್ಲ, ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದರು.
ಈ ವೇಳೆ ಡಾ.ಅಶೋಕ್, ಡಾ.ರಾಜಪ್ಪ, ಡಾ.ಚಂದ್ರಶೇಖರ್, ಡಾ.ಸತೀಶ್, ಡಾ.ರಾಕೇಶ್, ಆರೋಗ್ಯ ಇಲಾಖೆ ಕಾರ್ಯಕ್ರಮಾಧಿಕಾರಿ ರವಿಕುಮಾರ್ ಸೇರಿ ಆಸ್ಪತ್ರೆ ಸಿಬ್ಬಂದಿ ಇದ್ದರು.ಆಸ್ಪತ್ರೆ ಬಂದ್ ಬಗ್ಗೆ ತಿಳಿಯದ ರೋಗಿಗಳು ಚಿಕಿತ್ಸೆ ದೊರೆಯದೆ ವಾಪಸ್ ಆಗುತ್ತಿದ್ದ ದೃಶ್ಯಗಳು ಕಂಡು ಬಂದವು.
----------------ಕೋಲ್ಕತಾ ವೈದ್ಯೆ ಹತ್ಯೆ ಖಂಡಿಸಿ ಚನ್ನಗಿರಿ ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಬಂದ್‌ಗೆ ಬೆಂಬಲ ನೀಡಿ, ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು.