25 ರಿಂದ 29 ರವರೆಗೆ ರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿ

| Published : Nov 22 2025, 01:45 AM IST

25 ರಿಂದ 29 ರವರೆಗೆ ರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮಾಯಸಂದ್ರ ಟಿಬಿ ಕ್ರಾಸ್ ನಲ್ಲಿರುವ ಬಿಜಿಎಸ್ ಕ್ರೀಡಾಂಗಣದಲ್ಲಿ 14ರಿಂದ 17 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ಕ್ರೀಡಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ರಾಜ್ಯ ಹ್ಯಾಂಡ್ ಬಾಲ್ ಅಸೋಷಿಯೇಷನ್ ನ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿಯ ಸಂಚಾಲಕ ಪ್ರೊ.ಪುಟ್ಟರಂಗಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ಮಾಯಸಂದ್ರ ಟಿಬಿ ಕ್ರಾಸ್ ನಲ್ಲಿರುವ ಬಿಜಿಎಸ್ ಕ್ರೀಡಾಂಗಣದಲ್ಲಿ 14ರಿಂದ 17 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಮಟ್ಟದ ಹ್ಯಾಂಡ್ ಬಾಲ್ ಕ್ರೀಡಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ರಾಜ್ಯ ಹ್ಯಾಂಡ್ ಬಾಲ್ ಅಸೋಷಿಯೇಷನ್ ನ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿಯ ಸಂಚಾಲಕ ಪ್ರೊ.ಪುಟ್ಟರಂಗಪ್ಪ ತಿಳಿಸಿದರು.

ಪಟ್ಟಣದ ಮಯೂರ ಕಾನ್ವೆಂಟ್ ನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 43 ಬಾಲಕರ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಸುಮಾರು 850 ಬಾಲಕರು, ನೂರಕ್ಕೂ ಹೆಚ್ಚು ತರಬೇತುದಾರರು, ಕ್ರೀಡಾ ಇಲಾಖಾ ಅಧಿಕಾರಿಗಳು ಸೇರಿದಂತೆ ವಿವಿಧ ಸ್ಥರದ ಕ್ರೀಡಾಪಟುಗಳು ಈ ಪಂದ್ಯಾವಳಿಗೆ ಆಗಮಿಸುವರು. ಇದು 69 ವರ್ಷದ ಪಂದ್ಯಾವಳಿಯಾಗಿದೆ. ಜಿಲ್ಲೆಯಲ್ಲಿ ಆಯೋಜಿಸುತ್ತಿರುವ ಮೊದಲ ರಾಷ್ಟ್ರಮಟ್ಟದ ಕ್ರೀಡೆಯೂ ಆಗಿದೆ. 5 ದಿನಗಳ ಕಾಲ ನಡೆಯುವ ಈ ಪಂದ್ಯಾವಳಿಯಲ್ಲಿ 100 ಕ್ಕೂ ಹೆಚ್ಚು ಪಂದ್ಯಗಳು ನಡೆಯಲಿವೆ. ನಾಲ್ಕು ಅಂಕಣಗಳನ್ನು ನಿರ್ಮಿಸಲಾಗಿದೆ. ದೇಶದ ವಿವಿದೆಡೆಯಿಂದ ಬರುವ ಕ್ರೀಡಾಪಟುಗಳ ಆಹಾರದ ಪದ್ದತಿಯಂತೆಯೇ ಅವರಿಗೆ ಊಟ, ಉಪಹಾರದ ಏರ್ಪಾಟು ಮಾಡಲಾಗಿದೆ. ಆದಿಚುಂಚನಗಿರಿಯಲ್ಲಿರುವ ಸುಸಜ್ಜಿತವಾದ ವಸತಿ ಮಂದಿರದಲ್ಲಿ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀಗಳಾದ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಈ 5 ದಿನಗಳ ಪಂದ್ಯಾವಳಿ ನಡೆಯಲಿದೆ. ಇದರ ಮೇಲುಸ್ತುವಾರಿಯನ್ನು ಮಠದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ವಹಿಸುವರು. ಇಬ್ಬರೂ ಸ್ವಾಮೀಜಿಗಳು ತಮ್ಮ ಪೂರ್ವಾಶ್ರಮದಲ್ಲಿ ಉತ್ತಮ ಕ್ರೀಡಾಪಟುಗಳಾಗಿರುವುದರಿಂದ ಅವರು ಕ್ರೀಡೆಗೆ ಹೆಚ್ಚು ಮಹತ್ವ ನೀಡುತ್ತಿದ್ದಾರೆ. ಅತ್ಯಂತ ವೇಗದ ಕ್ರೀಡೆಯಾಗಿರುವ ಈ ಹ್ಯಾಂಡ್ ಬಾಲ್ ಕ್ರೀಡೆಗೆ ತಮ್ಮ ಶ್ರೀ ಆದಿಚುಂಚನಗಿರಿ ಮಠ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ. ತಮ್ಮ ಬಿಜಿಎಸ್ ನ ವಿದ್ಯಾರ್ಥಿಗಳು ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ರಾಜ್ಯಮಟ್ಟದಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದೂ ಸಹ ವಿಶೇಷವಾಗಿದೆ. ಈ ತಂಡ ತಮ್ಮ ನೆಲದಲ್ಲೇ ಆಟ ಪ್ರದರ್ಶಿಸಲಿದೆ ಎಂದು ಪ್ರೊ.ಪುಟ್ಟರಂಗಪ್ಪ ತಿಳಿಸಿದರು. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ರಿಜಿಸ್ಟಾರ್ ರಾಮೇಗೌಡ, ಪ್ರಾಚಾರ್ಯ ಚಂದ್ರಶೇಖರ್, ಹ್ಯಾಂಡ್ ಬಾಲ್ ತರಬೇತುದಾರ ಉದಯ್, ಅಧೀಕ್ಷಕ ಸುಚೇತ್, ಮಯೂರ ಶಾಲೆಯ ಮುಖ್ಯೋಪಧ್ಯಾಯ ಗಿರೀಶ್ ಉಪಸ್ಥಿತರಿದ್ದರು.