ಪಾನಮತ್ತ ಮಫ್ತಿ ಪೊಲೀಸ್ ಕಾರು ಗುದ್ದಿ, ಹೊಸ ಕಾರು ಜಖಂ!

| Published : Nov 22 2025, 01:45 AM IST

ಪಾನಮತ್ತ ಮಫ್ತಿ ಪೊಲೀಸ್ ಕಾರು ಗುದ್ದಿ, ಹೊಸ ಕಾರು ಜಖಂ!
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯ ಶಿಕ್ಷಕರೊಬ್ಬರು ಸಂಜೆಯಷ್ಟೇ ಖರೀದಿಸಿದ್ದ ಕಾರಲ್ಲಿ ಹೆಂಡತಿ, ಮಕ್ಕಳೊಂದಿಗೆ ಸಂಬಂಧಿ ಮನೆಗೆ ಖುಷಿಯಿಂದ ಹೊರಟಿದ್ದ ವೇಳೆ ಹಿಂಬದಿಯಿಂದ ಬಂದ ಪಾನಮತ್ತನಾಗಿದ್ದ ಎನ್ನಲಾದ ಮಫ್ತಿಯಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಕಾರು ಡಿಕ್ಕಿ ಹೊಡೆಸಿದ ಪರಿಣಾಮ ಹೊಸ ಕಾರಿನ ಹಿಂಭಾಗ, ಹಳೆ ಕಾರಿನ ಮುಂಭಾಗ ನುಜ್ಜುಗುಜ್ಜಾದ ಘಟನೆ ಇಲ್ಲಿನ ಎಸ್ಸೆಸ್ ಲೇಔಟ್‌ನ ಆಫೀ ಸರ್ಸ್ ಕ್ಲಬ್‌ ಎದುರು ಶುಕ್ರವಾರ ರಾತ್ರಿ ನಡೆದಿದೆ.

- ಮುಖ್ಯಶಿಕ್ಷಕ, ಪತ್ನಿ, ಮಕ್ಕಳ ಜೊತೆ ಹೊಸ ಕಾರಲ್ಲಿ ಹೋಗುವಾಗ ಹಿಂದಿನಿಂದ ಗುದ್ದಿದ ಪೊಲೀಸಪ್ಪನ ಕಾರು - ಮಫ್ತಿ ಹೆಡ್ ಕಾನ್‌ಸ್ಟೇಬಲ್‌ಗೆ ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದು ಓಡಿಹೋದ ಕಥೆ ಕಟ್ಟಿದ್ರಾ ಪೊಲೀಸರು?

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮುಖ್ಯ ಶಿಕ್ಷಕರೊಬ್ಬರು ಸಂಜೆಯಷ್ಟೇ ಖರೀದಿಸಿದ್ದ ಕಾರಲ್ಲಿ ಹೆಂಡತಿ, ಮಕ್ಕಳೊಂದಿಗೆ ಸಂಬಂಧಿ ಮನೆಗೆ ಖುಷಿಯಿಂದ ಹೊರಟಿದ್ದ ವೇಳೆ ಹಿಂಬದಿಯಿಂದ ಬಂದ ಪಾನಮತ್ತನಾಗಿದ್ದ ಎನ್ನಲಾದ ಮಫ್ತಿಯಲ್ಲಿ ಹೆಡ್‌ ಕಾನ್‌ಸ್ಟೇಬಲ್‌ ಕಾರು ಡಿಕ್ಕಿ ಹೊಡೆಸಿದ ಪರಿಣಾಮ ಹೊಸ ಕಾರಿನ ಹಿಂಭಾಗ, ಹಳೆ ಕಾರಿನ ಮುಂಭಾಗ ನುಜ್ಜುಗುಜ್ಜಾದ ಘಟನೆ ಇಲ್ಲಿನ ಎಸ್ಸೆಸ್ ಲೇಔಟ್‌ನ ಆಫೀ ಸರ್ಸ್ ಕ್ಲಬ್‌ ಎದುರು ಶುಕ್ರವಾರ ರಾತ್ರಿ ನಡೆದಿದೆ.

ತುಮಕೂರು ಜಿಲ್ಲೆ ಮಧುಗಿರಿಯ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕರಾದ ರಾಘವೇಂದ್ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಮಹೀಂದ್ರ ಎಕ್ಸ್‌ಯುವಿ 3 ಎಕ್ಸ್‌ಓ ಕಾರು (ಕೆಎ 64- ಎಂ 3022) ಖರೀದಿಸಿ, ನೋಂದಣಿ ಮಾಡಿಸಿದ್ದರು. ಪತ್ನಿ, ಮಕ್ಕಳು, ಕುಟುಂಬ ಸಮೇತ ಹೊಸ ಕಾರು ಡೆಲಿವರಿ ಪಡೆದು, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಮಾಡಿಸಿಕೊಂಡು ಮನೆಗೆ ಮರಳಿದ್ದರು. ಸಂಜೆ ಖುಷಿಯಿಂದಲೇ ತಮ್ಮ ಸಂಬಂಧಿ ಮನೆಗೆ ಹೋಗಲೆಂದು ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಎದುರಿನಿಂದ ಆಫೀಸರ್ಸ್ ಕ್ಲಬ್ ಎದುರು ಹೋಗುವಾಗ ಘಟನೆ ಸಂಭವಿಸಿದೆ.

ರಾಘವೇಂದ್ರ, ಪತ್ನಿ ಆಶಾ, ಮಕ್ಕಳಾದ ಸುನೈನಾ, ಸುಮುಖ್ ಹಾಗೂ ಪ್ರೀತಿ ಜೊತೆಗೆ ಕಾರಿನಲ್ಲಿ ರಾಘವೇಂದ್ರ ಆಫೀಸರ್ಸ್ ಕ್ಲಬ್ ಕಡೆ ತಮ್ಮ ಹೊಸ ಕಾರಿನಲ್ಲಿ ಬಸವೇಶ್ವರ ಬಡಾವಣೆ ಕಡೆಗೆ ಹೊರಟಿದ್ದರು. ಅದೇ ರಸ್ತೆಯಲ್ಲಿ ಹಿಂದಿನಿಂದ ಚಾಲಕನ ಅತೀವೇಗ, ಅಜಾಗರೂಕತೆಯ ಚಾಲನೆಯಿಂದ ನುಗ್ಗಿ ಬಂದ ಮಾರುತಿ ಸ್ವಿಫ್ಟ್ ಡಿಸೈರ್ ಕಾರು (ಕೆಎ 50, ಪಿ 4547) ಹಿಂದಿನಿಂದ ರಾಘವೇಂದ್ರರ ಹೊಸ ಕಾರಿಗೆ ಗುದ್ದಿದೆ. ಪಾನಮತ್ತನಾಗಿದ್ದ ಹಿಂದಿನ ಕಾರಿನ ಚಾಲಕ ಇಳಿದು ಬಂದವನೇ ಏಕಾಏಕಿ ರಾಘವೇಂದ್ರ ಜೊತೆಗೆ ವಾಗ್ವಾದಕ್ಕಿಳಿದಿದ್ದಾನೆ ಎಂದು ದೂರಲಾಗಿದೆ.

ತಾನು ವಿದ್ಯಾನಗರ ಪೊಲೀಸ್ ಠಾಣೆ ಹೆಡ್ ಕಾನ್ಸಟೇಬಲ್‌ ಅಂತಾ ಮಫ್ತಿಯಲ್ಲಿದ್ದ ವ್ಯಕ್ತಿ ಹೇಳಿಕೊಂಡು, ಮುಖ್ಯ ಶಿಕ್ಷಕ ರಾಘವೇಂದ್ರ ಮತ್ತು ಕುಟುಂಬದ ಮೇಲೆ ಗಲಾಟೆ ಮಾಡಲು ಮುಂದಾಗಿದ್ದಾನೆ. ಸ್ಥಳದಲ್ಲೇ ಜನರು, ದಾರಿ ಹೋಕರು ಮಫ್ತಿಯಲ್ಲಿದ್ದ ಪೊಲೀಸಪ್ಪನ ಆರ್ಭಟ ಹಾಗೂ ಹೊಸ ಕಾರಿನಲ್ಲಿದ್ದ ಕುಟುಂಬದ ಜಗಳ ನೋಡಿ, ಸ್ಥಳಕ್ಕೆ ಧಾವಿಸಿದ್ದಾರೆ.

ಅಷ್ಟರಲ್ಲಿ ಮಫ್ತಿ ಪೊಲೀಸಪ್ಪನ ವರ್ತನೆ, ಮಾತುಗಳನ್ನು ಕೇಳಿ ಆಕ್ರೋಶಗೊಂಡ ಜನರು ಆತನನ್ನು ಹಿಡಿದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ತಮ್ಮ ವಶಕ್ಕೆ ಪಡೆದು, ವಿದ್ಯಾನಗರ ಠಾಣೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಆತ ತಪ್ಪಿಸಿಕೊಂಡಿದ್ದಾನೆಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಅಪಘಾತ ಸ್ಥಳದಲ್ಲಿ ನೂರಾರು ಜನ ಸೇರಿದರು.

ರಾಘವೇಂದ್ರ, ಪತ್ನಿ ಹಾಗೂ ಸಾರ್ವಜನಿಕರು ಪೊಲೀಸಪ್ಪನ ರಕ್ಷಣೆಗೆಂದೇ ಹೀಗೆ ಪೊಲೀಸರೇ ಆತನಿಗೆ ಓಡಿ ಹೋಗಲು ಅವಕಾಶ ಮಾಡಿಕೊಟ್ದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಮುಖ್ಯ ಶಿಕ್ಷಕ ರಾಘವೇಂದ್ರ ಮತ್ತು ಕುಟುಂಬ ಸದಸ್ಯರ ವಿರುದ್ಧ ದೌರ್ಜನ್ಯ ಎಸಗಿದ ಮಫ್ತಿ ಪೊಲೀಸನನ್ನು ಪತ್ತೆ ಮಾಡಿ, ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ಇಲ್ಲಿ ದೌರ್ಜನ್ಯ ಎಸಗಿದ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂಬುದಾಗಿ ಪಟ್ಟು ಹಿಡಿದರು.

ಡಿವೈಎಸ್ಪಿ ಬಿ.ಶರಣ ಬಸವೇಶ್ವರ, ವಿದ್ಯಾನಗರ ಇನ್‌ಸ್ಪೆಕ್ಟರ್ ಶಿಲ್ಪ, ಸಂಚಾರ ಠಾಣೆ ಎಸ್ಐ ಶೈಲಜಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಮನವೊಲಿಸಲು ಮಾಡಿದ ಪ್ರಯತ್ನಕ್ಕೆ ಜನರೂ ಕಿವಿಗೊಡಲಿಲ್ಲ.

ನೋಡ ನೋಡುತ್ತಿದ್ದಂತೆ ಅಪಘಾತಕ್ಕೆ ಕಾರಣವಾಗಿದ್ದ ಪೊಲೀಸಪ್ಪನ ಕಾರನ್ನು ಠಾಣೆಗೆ ಒಯ್ಯುವುದಾಗಿ ಪೊಲೀಸರು ಕೊಂಡೊಯ್ಯಲು ಮುಂದಾದಾಗ ರಾಘವೇಂದ್ರ, ಕುಟುಂಬ ಹಾಗೂ ಸ್ಥಳದಲ್ಲಿದ್ದ ಜನರು ವಿರೋಧ ವ್ಯಕ್ತಪಡಿಸಿದರು. ಕಡೆಗೂ ಅಪಘಾತ ಎಸಗಿದ ಕಾರನ್ನು ಪೊಲೀಸರು ಅಲ್ಲಿಂದ ಒಯ್ಯಲು ಮುಂದಾದರು. ತಮಗೆ ಆದ ಅನ್ಯಾಯ, ತಮ್ಮ ಮೇಲೆ ದೌರ್ಜನ್ಯ ಎಸಗಿದ ಪೊಲೀಸಪ್ಪನನ್ನು ಪೊಲೀಸರೇ ರಕ್ಷಣೆ ಮಾಡಿದ್ದಾರೆಂಬ ರಾಘವೇಂದ್ರ ತೀವ್ರ ಬೇಸರ ವ್ಯಕ್ತಪಡಿಸಿದರು.

- - - ದಾವಣಗೆರೆಯಲ್ಲಿ ಇಂದು ಮಧ್ಯಾಹ್ನ ಹೊಸ ಕಾರು ಖರೀದಿಸಿದ್ದೆವು. ಹಿಂದಿನಿಂದ ಬಂದ ಕಾರಿನ ಚಾಲಕ ಡಿಕ್ಕಿ ಹೊಡೆಸಿ, ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾನೆ. ತಾನು ವಿದ್ಯಾನಗರ ಹೆಡ್ ಕಾನ್ಸಟೇಬಲ್ ಅಂತಾ ಆತ ಹೇಳಿಕೊಂಡಿದ್ದು, ಸಂಪೂರ್ಣ ಪಾನಮತ್ತನಾಗಿದ್ದ. ಆತನನ್ನು ತಮ್ಮ ವಶಕ್ಕೆ ಪಡೆಯಲು ಪೊಲೀಸರು ಬಂದವರು ಆತನನ್ನು ಕರೆದೊಯ್ದು, ಈಗ ಓಡಿ ಹೋದ ಅಂತಾ ಕಥೆ ಹೇಳುತ್ತಿದ್ದಾರೆ. ಆತನಿಗೆ ವಶಕ್ಕೆ ಪಡೆಯಲು ಬಂದಿದ್ದ ಎಸ್ಐ ನನ್ನ ಮೇಲೆ ನಂಬಿಕೆ ಇಲ್ಲವೇ ಅಂದಿದ್ದರು. ಆದರೆ, ವೈದ್ಯಕೀಯ ತಪಾಸಣೆ ಮಾಡಿಸುವಂತೆ ನಾವು ಕೇಳಿದಾಗಸ್ಟೇಷನ್ ಬಳಿ ಕರೆದೊಯ್ದು ತಪ್ಪಿಸಿಕೊಂಡ ಅನ್ನುತ್ತಿದ್ದಾರೆ. ಪೊಲೀಸರಿಗೆ ಮಫ್ತಿ ಪೊಲೀಸನೊಬ್ಬನನ್ನು ಹಿಡಿದುಕೊಳ್ಳಲಾಗಲಿಲ್ಲವೆಂದರೇ ಏನರ್ಥ? 15-20 ಪೊಲೀಸರಿದ್ದರೂ ಓರ್ವ ಪಾನಮತ್ತ ವ್ಯಕ್ತಿಯನ್ನು ಹಿಡಿಯಲಾಗಲಿಲ್ಲವೆಂದರೆ ಪೊಲೀಸರ ಬಗ್ಗೆಯೇ ಬೇಸರವಾಗುತ್ತದೆ. ಅಪಘಾತಕ್ಕೆ ಕಾರಣವಾಗಿದ್ದ ಮಫ್ತಿ ಪೊಲೀಸ್ ವಾಹನವನ್ನು ಪೊಲೀಸರು ಇಲ್ಲಿಂದ ಒಯ್ದಿದ್ದಾರೆ. ನಾವು ಯಾರ ಬಳಿ ಆದ ಅನ್ಯಾಯ ಹೇಳಿಕೊಳ್ಳಬೇಕು. ರಾಘವೇಂದ್ರ, ಮುಖ್ಯ ಶಿಕ್ಷಕ, ದಾವಣಗೆರೆ ವಾಸಿ

- - -

-21ಕೆಡಿವಿಜಿ6: ದಾವಣಗೆರೆಯಲ್ಲಿ ಶುಕ್ರವಾರ ಮಧ್ಯಾಹ್ನವಷ್ಟೇ ಮುಖ್ಯ ಶಿಕ್ಷಕ ರಾಘವೇಂದ್ರ ಅವರಿಗೆ ಡೆಲವರಿ ಆಗಿದ್ದ ಕಾರು ತನ್ನದಲ್ಲದ ತಪ್ಪಿಗೆ ಕೆಲವೇ ಗಂಟೆಗಳಲ್ಲಿ ಹಿಂಭಾಗ ನುಜ್ಜು ಗುಜ್ಜಾಗಿರುವುದು. -21ಕೆಡಿವಿಜಿ7: ದಾವಣಗೆರೆಯಲ್ಲಿ ಶುಕ್ರವಾರ ಮಧ್ಯಾಹ್ನವಷ್ಟೇ ಮುಖ್ಯ ಶಿಕ್ಷಕ ರಾಘವೇಂದ್ರ ಅವರಿಗೆ ಡೆಲವರಿ ಆಗಿದ್ದ ಕಾರಿಗೆ ಹಿಂದಿನಿಂದ ಅತೀವೇಗ, ಚಾಲಕನ ಅಜಾಗರೂಕತೆಯಿಂದ ಬಂದು ಗುದ್ದಿದ್ದ ವಿದ್ಯಾನಗರ ಹೆಡ್‌ ಕಾನ್ಸಟೇಬಲ್‌ಗೆ ಸೇರಿದ್ದು ಎನ್ನಲಾದ ಕಾರು.