ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಪ್ರವಾಸಿಕೇಂದ್ರವಾದ ಯಗಚಿ ಜಲಾಶಯದ ಬಳಿ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷರಾದ ಚಂದ್ರಶೇಖರ್, ವಿ.ಎಸ್ ಭೋಜೇಗೌಡ ಒತ್ತಾಯಿಸಿದರು.ಪಟ್ಟಣದ ಸಮೀಪದ ಯಗಚಿ ಜಲಾಶಯದ ಬಳಿ ಸುದ್ದಿಗಾರರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ತಾಲೂಕಿಗೆ ಉಪಯೋಗವಾಲಿ ಎಂದು ಯಗಚಿ ಜಲಾಶಯ ನಿರ್ಮಿಸಿದ್ದರೂ ಉಪಯೋಗ ಮಾತ್ರ ಬೇರೆ ತಾಲೂಕುಗಳಿಗೆ ಆಗುತ್ತಿದೆ. ಇಲ್ಲಿನ ಇಚ್ಛಾಶಕ್ತಿ ಇಲ್ಲದ ರಾಜಕಾರಣಿಗಳು ಪ್ರವಾಸಿತಾಣ ಅಭಿವೃದ್ಧಿಗೊಳಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಕಳೆದ ಬಾರಿ ಶಾಸಕರಾಗಿದ್ದ ಕೆ.ಎಸ್.ಲಿಂಗೇಶ್ 40 ಕೋಟಿ ವೆಚ್ಚದಲ್ಲಿ ಯಗಚಿ ಜಲಾಶಯದ ಬಳಿ ಕೆಆರ್‌ಎಸ್ ಮಾದರಿಯಲ್ಲಿ ಹೈಟೆಕ್ ಮಾದರಿ ಉದ್ಯಾನವನ, ಕಾರಂಜಿ ನಿರ್ಮಿಸುವ ಭರವಸೆ ನೀಡಿ ಜನರ ಮೂಗಿಗೆ ತುಪ್ಪ ಸವರಿ ನಾಪತ್ತೆಯಾದರು. ಯಗಚಿ ಜಲಾಶಯದ ನೋಡಲು ಬರುವ ಪ್ರವಾಸಿಗರಿಗೆ ಶೌಚಾಲಯ ಇಲ್ಲದೇ ಪರದಾಡುತ್ತಾರೆ. ಇಲ್ಲಿ ರಕ್ಷಣಾ ಕಾರ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿ ಶೌಚಾಲಯವಿಲ್ಲದೇ ಗಿಡ ಮರಗಳ ಪೊದೆಯನ್ನು ಆಶ್ರಯಿಸಬೇಕಾದ ಹೀನಾಯ ಸ್ಥಿತಿ ಇಲ್ಲಿದ್ದು ಇದಕ್ಕೆ ಯಾರು ಹೊಣೆ ಎಂದು ಕಿಡಿಕಾರಿದರು.
ಯಗಚಿಗೆ ಸೂಕ್ತ ಭದ್ರತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಇಲ್ಲವಾಗಿದೆ. ಅಲ್ಲದೆ ಯಗಚಿ ಸಮೀಪದ ನೂರಾರು ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಸಾವಿರಾರು ಎಕರೆಯಲ್ಲಿ ಯಗಚಿ ನೀರು ಇದ್ದರೂ ಜಲಾಶಯ ನೋಡಲು ಬರುವ ಪ್ರವಾಸಿಗರಿಗೆ ಒಂದು ಲೋಟ ನೀರು ಕುಡಿಯಲು ಇಲ್ಲಿ ಗತಿ ಇಲ್ಲವಾಗಿದೆ. ಯಗಚಿ ಜಲಾಶಯದ ನೀರು ಮಾತ್ರ ಚಿಕ್ಕಮಗಳೂರು ಮತ್ತು ಹೊಳೆನರಸೀಪುರಕ್ಕೆ ಹರಿಯುತ್ತಿದೆ. ಈ ಬಗ್ಗೆ ಹತ್ತಾರು ಬಾರಿ ಕನ್ನಡ ಪರ ಸಂಘಟನೆಗಳು ಹೋರಾಟ ನಡೆಸಿದರೂ ಯಾವ ಪ್ರಯೋಜವಾಗಿಲ್ಲ, ಜಿಲ್ಲಾ ಮಂತ್ರಿ, ಸ್ಥಳೀಯ ಶಾಸಕರು, ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಕೂಡಲೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ತಾಲೂಕು ಅಧ್ಯಕ್ಷ ವಿ.ಎಸ್.ಭೋಜೇಗೌಡ ಮಾತನಾಡಿ, ಜಿಲ್ಲಾ ಮಂತ್ರಿ ಕೆ.ಎನ್.ರಾಜಣ್ಣ ಹಾಸನಕ್ಕೆ ಮಾತ್ರ ಬಂದು ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಏಳು ತಾಲೂಕುಗಳಿವೆ ಎಂಬುದನ್ನು ಅವರು ಮರೆತಿದ್ದಾರೆ. ಹಾಸನಾಂಬಾ ಜಾತ್ರೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ. ರಾಜಣ್ಣನವರೇ ನಮ್ಮ ಇತಿಹಾಸ ಪ್ರಸಿದ್ಧ ಬೇಲೂರು ಶ್ರೀ ಚೆನ್ನಕೇಶವ ಸ್ವಾಮಿ ಬಗ್ಗೆಯೂ ಸ್ವಲ್ಪ ಗಮನ ಹರಿಸಿ. ಆದಷ್ಟು ಅನುದಾನವನ್ನು ನಮ್ಮ ಪ್ರವಾಸಿ ಕೇಂದ್ರಕ್ಕೆ ನೀಡಿ ಅಭಿವೃದ್ಧಿ ಪಡಿಸಿ ಎಂದು ಮನವಿ ಮಾಡಿದರು.
ಈಗಾಗಲೇ ನಾಲ್ಕು ಬಾರಿ ಯಗಚಿ ಜಲಾಶಯ ಭರ್ತಿಯಾಗಿದೆ. ಜಿಲ್ಲಾ ಮಂತ್ರಿಗಳ ಇಲ್ಲಿಗೆ ಆಗಮಿಸಿ ಬಾಗಿನ ಅರ್ಪಿಸುವುದು ಸಂಪ್ರದಾಯ. ಆದರೆ ಸೌಜನ್ಯಕ್ಕೂ ಇತ್ತ ತಿರುಗಿ ನೋಡಿಲ್ಲ. ಕೆಲ ವರ್ಷಗಳ ಹಿಂದೆ ಜಿಲ್ಲಾ ಮಂತ್ರಿ ಹಾಗೂ ಶಾಸಕರು ಬಾಗೀನ ಬಿಡಲು ಹಿಂದೇಟು ಹಾಕಿದಾಗ ಸಂಘಟನೆಗಳು ಬಾಗಿನ ಅರ್ಪಿಸಲು ಮುಂದಾಗಿ ಕೇಸು ಹಾಕಿಸಿಕೊಂಡು ಹತ್ತಾರು ವರ್ಷ ಕೋರ್ಟಿಗೆ ಅಲೆದಾಡಿದ್ದನ್ನು ತಾಲೂಕಿನ ಜನತೆ ಮರೆತಿಲ್ಲ. ಜಿಲ್ಲೆಯಲ್ಲಿ ನಡೆಯುತ್ತಿದ್ದ ಹೊಯ್ಸಳ ಮಹೋತ್ಸವ ಹಾಗೂ ಕನ್ನಡಕ್ಕೆ ಪ್ರಥಮ ಶಿಲಾ ಶಾಸನ ನೀಡಿದ ಹಲ್ಮಿಡಿಯ ಉತ್ಸವಗಳು ಸ್ಥಗಿತವಾಗಿದೆ. ಯಗಚಿ ಜಲಾಶಯವಿದ್ದರೂ ಪಟ್ಟಣದ ಜನತೆ ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತು ಯಗಚಿ ಜಲಾಶಯದ ಅಭಿವೃದ್ಧಿಗೆ ಮುಂದಾಗಲಿ ಎಂದು ಒತ್ತಾಯಿಸಿದರು.