ಸಾರಾಂಶ
- ವಡಗೇರಾ ತಾ. ಹಾಲಗೇರಿಯ ಅಲೆಮಾರಿ ಓಣಿಗೆ ಭೇಟಿ, ಅವ್ಯವಸ್ಥೆ ಕಂಡು ತೀವ್ರ ಆಕ್ರೋಶ । ಅಧಿಕಾರಿಗಳ ನಡೆಗೆ ಕೆಂಡಾಮಂಡಲ
ಕನ್ನಡಪ್ರಭ ವಾರ್ತೆ ಯಾದಗಿರಿಜಿಲ್ಲೆಯ ವಡಗೇರಿ ತಾಲೂಕಿನ ಹಾಲಗೇರಿ ಗ್ರಾಮಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿಬಾಯಿ ಚೌಧರಿ ಭೇಟಿ ನೀಡಿ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದರು.
ಬೆಳಿಗ್ಗೆ ಗ್ರಾಮಕ್ಕೆ ಆಗಮಿಸಿದ ಅವರು, ಗ್ರಾಮದಲ್ಲಿ ಅವ್ಯವಸ್ಥೆ ಆಗರವಾಗಿರುವುದನ್ನು ಕಂಡು ಅಸಮಾಧಾನಗೊಂಡು ಅಧಿಕಾರಿಗಳನ್ನು ಸ್ಥಳದಲ್ಲಿಯೇ ತೀವ್ರ ತರಾಟೆಗೆ ತೆಗೆದುಕೊಂಡರು. ಗ್ರಾಮದ ಅಲೆಮಾರಿ ಸಮುದಾಯದವರು ವಾಸಿಸುವ ಓಣಿಗೆ ತೆರಳಿದ ಅವರು ಅಲ್ಲಿಗೆ ಹೋಗಲು ರಸ್ತೆಯೇ ಇಲ್ಲದೇ ರಸ್ತೆ ತುಂಬ ಕೆಸರು ರಾಡಿ ನೀರು ನಿಂತಿದ್ದನ್ನು ಕಂಡು ಸ್ಥಳದಲ್ಲಿಯೇ ಪಿಡಿಒ, ತಾಲೂಕು ಪಂಚಾಯಿತಿ ಅಧಿಕಾರಿ, ಸಿಡಿಪಿಒ, ಸಮಾಜ ಕಲ್ಯಾಣ ಇಲಾಖೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಜೆಜೆ ಎಂಇಇ ಸೇರಿದಂತೆ ಎಲ್ಲ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಪ್ರತಿಯೊಂದು ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಯಾಕಾಗಿದೆ ಎಂದು ಪ್ರಶ್ನಿಸಿದರೆ ಒಂದೇ ಉತ್ತರ ನಾನು ಹೊಸದಾಗಿ ಬಂದಿದ್ದೇನೆ. ನನಗೆ ಮಾಹಿತಿ ಇಲ್ಲ ಎಂದು ಹೇಳುತ್ತಿರುವದು ಸರಿಯಲ್ಲ ಎಂದು ಕೆಂಡಾಮಂಡಲರಾದ ನಾಗಲಕ್ಷ್ಮಿ, ಎಲ್ಲರೂ ಹೊಸಬರೆ ಅಂದರೆ ಹಳಬರು ಏನು ಮಾಡಿದರು? ಅದು ನಿಮಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಆದರೆ, ಅಧಿಕಾರಿಗಳು ಮಾತ್ರ ನಿರುತ್ತರರಾಗಿ ನಿಂತುಕೊಂಡಿದ್ದರು.
ಸರ್ಕಾರದಿಂದ ವೇತನ ಪಡೆಯುತ್ತಿದ್ದೀರಿ, ಕೆಲಸಾನೂ ಮಾಡಬೇಕು ಎಂದು ಖಾರವಾಗಿ ನುಡಿದ ಅವರು, ಈ ಜನತೆಗೆ ಎಲ್ಲ ಮೂಲಸೌಕರ್ಯ ನೀಡಲು ಇನ್ನು ಎಷ್ಟು ದಿನ ಬೇಕಪ್ಪ ನಿಮಗೆ ಎಂದು ಖಾರವಾಗಿ ಪ್ರಶ್ನಿಸಿದರು. ಎಲ್ಲ ವಿವರಗಳನ್ನು ಬುಧವಾರದ ಅಧಿಕಾರಿಗಳ ಸಭೆಯಲ್ಲಿ ನೀಡಬೇಕೆಂದು ತಾಕೀತು ಮಾಡಿ ಅಲ್ಲಿಂದ ತೆರಳಿದರು.ಈ ಸಂದರ್ಭದಲ್ಲಿ ಡಿಎಚ್‌ಒ ಎಂ.ಎಸ್. ಪಾಟೀಲ್ ಸೇರಿದಂತೆ ವೈದ್ಯಾಧಿಕಾರಿಗಳು ಇನ್ನಿತರರು ಇದ್ದರು.
-----21ವೈಡಿಆರ್10 : ಯಾದಗಿರಿ ಜಿಲ್ಲೆಯ ವಡಗೇರಿ ತಾಲ್ಲೂಕಿನ ಹಾಲಗೇರಿ ಗ್ರಾಮಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿಬಾಯಿ ಚೌಧರಿ ಸೋಮವಾರ ಭೇಟಿ ನೀಡಿ ಗ್ರಾಮಸ್ಥರಿಂದ ಸಮಸ್ಯೆ ಆಲಿಸಿದರು.