ನೇಹಾ ಹಿರೇಮಠ ಹತ್ಯೆಪ್ರಕರಣ: ಅಜಯ್ ಸಿಂಗ್‌ ಖಂಡನೆ

| Published : Apr 21 2024, 02:19 AM IST

ಸಾರಾಂಶ

ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಹತ್ಯೆಯಾದ ಸಹೋದರಿ ನೇಹಾ ಹಿರೇಮಠ ಕುಟುಂಬಕ್ಕೆ ತಮ್ಮ ತೀವ್ರ ಸಂತಾಪಗಳನ್ನು ತಿಳಿಸಿರುವ ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್‌ ಸಿಂಗ್‌ ಅವರು ಈ ಅಮಾನುಷವಾದಂತಹ ಕೊಲೆ ಘಟನೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಹುಬ್ಬಳ್ಳಿಯಲ್ಲಿ ಬರ್ಬರವಾಗಿ ಹತ್ಯೆಯಾದ ಸಹೋದರಿ ನೇಹಾ ಹಿರೇಮಠ ಕುಟುಂಬಕ್ಕೆ ತಮ್ಮ ತೀವ್ರ ಸಂತಾಪಗಳನ್ನು ತಿಳಿಸಿರುವ ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್‌ ಸಿಂಗ್‌ ಅವರು ಈ ಅಮಾನುಷವಾದಂತಹ ಕೊಲೆ ಘಟನೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಅಪರಾಧಿಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ, ನಿಷ್ಪಕ್ಷಪಾತವಾಗಿ ಸದರಿ ಪ್ರಕರಣದ ತನಿಖೆ ನಡೆಯುತ್ತದೆ, ಕಾನೂನಿನ ಪ್ರಕ್ರಿಯೆ ನಡೆದು ಕೊಲೆಗಡುಕನನ್ನು ಉಗ್ರವಾದ ಶಿಕ್ಷೆಗೆ ಒಳಪಡಿಸಲಾಗುತ್ತದೆ, ನೊಂದ ಕುಟುಂಬಕ್ಕೆ ನ್ಯಾಯ ಸಿಗಲು ಏನೆಲ್ಲಾ ಕ್ರಮ ಕೈಗೊಳ್ಳಬೇಕೋ ಅವನನೆಲ್ಲ ಸರಕಾರ ಕೈಗೊಳ್ಳಲಿದೆ, ಕಾಂಗ್ರೆಸ್‌ ಸರ್ಕಾರ ಇಂತಹ ಘಟನೆಗಳಿಗೆ ಎಂದಿಗೂ ಪುಷ್ಟಿ ಕೊಡೋದಿಲ್ಲವೆಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಈ ಘಟನೆ ಹಾಗೂ ನಂತರದಲ್ಲಿ ನಡೆದಿರುವ ಬೆಳವಣಿಗೆಗಳ ಕುರಿತಂತೆ ಸ್ಪಂದಿಸಿರುವ ಡಾ. ಅಜಯ್‌ ಸಿಂಗ್‌, ಯಾವುದೇ ರಾಜಕೀಯ ಪಕ್ಷಗಳು ಇಂತಹ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು, ಬಿಜೆಪಿಯವರು ಇದನ್ನೇ ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ, ಇದು ಸರಿಯಲ್ಲ.ನೋವಾಗಿರುವ ಕುಟುಂಬದವರ ಕಣ್ಣೀರು ಒರೆಸೋಣ, ಅದನ್ನು ಬಿಟ್ಟು ಘಟನೆಯ ದಿಕ್ಕು ತಪ್ಪಿಸುವುದು ಬೇಡವೆಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.

ಮಾನವೀಯತೆಗೇ ಸವಾಲು ಎಂಬಂತೆ ಸಮಾಜದಲ್ಲಿ ಎದುರಾಗುವ ಇಂತಹ ಘಟನೆಗಳಿಗೆ ಧರ್ಮ ಜಾತಿ, ಪಕ್ಷಗಳ ರಾಜಕಾರಣದ ಬಣ್ಣ ಬಳೆಯದೆ, ಸದರಿ ಘಟನೆಯನ್ನು ಹೀನ ಅಪರಾಧವೆಂದೇ ಪರಿಗಣಿಸಿ ಹಂತಕನಿಗೆ ಕೊಲೆಗಡುಕನಿಗೆ ತಕ್ಷಣವೇ ಉಗ್ರವಾದ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿಯೇ ಇದೆ. ಈ ವಿಚಾರದಲ್ಲಿ ಬಿಜೆಪಿಯವರು ವಿನಾಕಾರಣ ರಾಜಕೀಯ ಬೆರೆಸೋದನ್ನ ಬಿಟ್ಟುಬಿಡಬೇಕು ಎಂದು ಡಾ. ಅಜಯ್‌ ಸಿಂಗ್‌ ಹೇಳಿದ್ದಾರೆ.