ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರಪಡಿಸಲು ಪ್ರತಿಯೊಬ್ಬರು ಮತ ಚಲಾಯಿಸಬೇಕು. ಮತದಾನ ನಮ್ಮ ಹಕ್ಕು, ಕಡ್ಡಾಯವಾಗಿ ಮತದಾನ ಮಾಡಿ, ಯಾರೊಬ್ಬರೂ ಮತಚಲಾಯಿಸದೆ ಹೊರಗುಳಿಯಬಾರದು ಎಂದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ ಹೇಳಿದರು.ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಮೇ 7ರಂದು ನಡೆಯುವ ಮತದಾನದ ಹಿನ್ನೆಲೆ ನರೇಗಾ ಕೂಲಿಕಾರರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲು ಸ್ವೀಪ್ ಚಟುವಟಿಕೆಗಳಡಿ ತಾಲೂಕಿನ ಬಂದಳ್ಳಿ ಗ್ರಾಪಂ ವ್ಯಾಪ್ತಿಯ ಯಡ್ಡಳ್ಳಿ ಗ್ರಾಮದಲ್ಲಿ ನರೇಗಾದಡಿ ಪ್ರಗತಿಯಲ್ಲಿದ್ದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನಡೆದ ಕೂಲಿಕಾರರ ಮತದಾನ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಜಾಪ್ರಭುತ್ವದ ಯಶಸ್ಸು ಪ್ರತಿಯೊಬ್ಬ ಮತದಾರರ ಕೈಯಲ್ಲಿದೆ, ಹೀಗಾಗಿ ಯಾರೊಬ್ಬರು ಮತದಾನದಿಂದ ಹೊರಗುಳಿಯಬಾರದು ಮತದಾನಕ್ಕಿಂತ ದೊಡ್ಡದು ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡುವ ಮೂಲಕ ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.ಮತದಾನ ಪ್ರತಿಯೊಬ್ಬರ ಸಂವಿಧಾನಾತ್ಮಕ ಹಕ್ಕು, ಕರ್ತವ್ಯ. ಯಾವುದೇ ಆಮಿಷಕ್ಕೆ ಮರುಳಾಗದೆ, ವಿವೇಚನೆಯಿಂದ ಮತ ಹಾಕಿ, ಸದೃಢ ಅಭ್ಯರ್ಥಿ ಆಯ್ಕೆ ಮಾಡಿಕೊಳ್ಳುವ ಸುವರ್ಣಾವಕಾಶವಿದೆ. ಒಂದು ಮತ ದೇಶದ ಭದ್ರತೆ ಜತೆಗೆ ಪ್ರಜಾಪ್ರಭುತ್ವದ ಸದೃಢತೆಗೆ ಪೂರಕವಾಗುತ್ತದೆ. ನಮ್ಮ ಮತ ಹಾಗೂ ಮಕ್ಕಳ ಭವಿಷ್ಯ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ತಪ್ಪದೇ ಮತ ಚಲಾಯಿಸಿ, ನಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಮತದಾನದ ಮಹತ್ವ ಕುರಿತು ಮಾಹಿತಿ ನೀಡಿದರು.
ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರಿಂದ ಸ್ಪೀಪ್ ಚಟುವಟಿಕೆಗಳಡಿ ನಿಂಬೆ ಚೆಮಚ, ರನ್ನಿಂಗ್, ಬಯಲಾಟ, ಮಕ್ಕಳಿಂದ ವಿಶೇಷ ಚಟುವಟಿಕೆಗಳ ಕಾರ್ಯಕ್ರಮಗಳ ಹಮ್ಮಿಕೊಳ್ಳಲಾಯಿತು.ಜಿಪಂ ಯೋಜನಾ ನಿರ್ದೇಶಕ ಬಿ.ಎಸ್. ರಾಠೋಡ್, ಸಹಾಯಕ ನಿರ್ದೇಶಕ ಮಲ್ಲಣ್ಣ ಸಂಕನೂರ, ಸಿಇಓ ಆಪ್ತ ಸಹಾಯಕ ಮಂಜು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ, ಬನ್ನಪ್ಪ, ಜಿಲ್ಲಾ ಸಂಯೋಜಕ ಪರಶುರಾಮ್, ತಾಂತ್ರಿಕ ಸಂಯೋಜಕ ಉಮೇಶ್, ಸಂಯೋಜಕ ಭೀಮರೆಡ್ಡಿ ವಡಗೇರಾ, ತಾಂತ್ರಿಕ ಸಹಾಯಕ ವೆಂಕಟೇಶ್, ರಾಜೇಶ್ವರಿ, ಮುದುಕಪ್ಪ, ಅಕ್ಕಮಹಾದೇವಿ ಹಾಗೂ 286 ಜನ ನರೇಗಾ ಕೂಲಿಕಾರರು ಇದ್ದರು.