ಸೋಲೂರು ವಿಚಾರದಲ್ಲಿ ದಿಕ್ಕು ತಪ್ಪಿಸುತ್ತಿರುವ ನೆಲಮಂಗಲ ಶಾಸಕರು

| Published : Sep 27 2025, 12:00 AM IST

ಸೋಲೂರು ವಿಚಾರದಲ್ಲಿ ದಿಕ್ಕು ತಪ್ಪಿಸುತ್ತಿರುವ ನೆಲಮಂಗಲ ಶಾಸಕರು
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಸೋಲೂರು ಹೋಬಳಿ, ನೆಲಮಂಗಲ ತಾಲೂಕಿಗೆ ಸೇರುವ ವಿಚಾರದಲ್ಲಿ ಆ ಭಾಗದ ಜನಗಳಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ನೆಲಮಂಗಲ ಶಾಸಕ ಶ್ರೀನಿವಾಸ್ ಮಾಡುತ್ತಿದ್ದಾರೆ ಎಂದು ಪ್ರಗತಿಪರ ರೈತ ಹೋರಾಟಗಾರ ಕನ್ನಡ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮಾಗಡಿ: ಸೋಲೂರು ಹೋಬಳಿ, ನೆಲಮಂಗಲ ತಾಲೂಕಿಗೆ ಸೇರುವ ವಿಚಾರದಲ್ಲಿ ಆ ಭಾಗದ ಜನಗಳಿಗೆ ದಿಕ್ಕು ತಪ್ಪಿಸುವ ಕೆಲಸವನ್ನು ನೆಲಮಂಗಲ ಶಾಸಕ ಶ್ರೀನಿವಾಸ್ ಮಾಡುತ್ತಿದ್ದಾರೆ ಎಂದು ಪ್ರಗತಿಪರ ರೈತ ಹೋರಾಟಗಾರ ಕನ್ನಡ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಕಲ್ಯಾಗೇಟ್ ನಲ್ಲಿ ಶುಕ್ರವಾರ ವಿವಿಧ ಕನ್ನಡಪರ ಸಂಘಟನೆಗಳು, ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ಸೋಲೂರು ಹೋಬಳಿ ಮಾಗಡಿ ತಾಲೂಕಿನಲ್ಲಿ ಉಳಿಯಬೇಕೆಂಬ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೆಲಮಂಗಲ ಶಾಸಕ ಶ್ರೀನಿವಾಸ್ 9ನೇ ತಾರೀಕು ಅಧಿಕೃತವಾಗಿ ಸೋಲೂರು ಹೋಬಳಿ ನೆಲಮಂಗಲಕ್ಕೆ ಸೇರಿದೆ ಎಂಬ ಗೊಂದಲದ ಹೇಳಿಕೆ ನೀಡಿದ್ದಾರೆ. ನಾವು ಕೂಡ ನಮ್ಮ ಹೋಬಳಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡಮಟ್ಟದಲ್ಲಿ ಆಕ್ಷೇಪಣೆ ಸಲ್ಲಿಸುತ್ತಿದ್ದೇವೆ. ನೀವು ಹೇಳಿದಷ್ಟು ಸುಲಭವಾಗಿ 9ನೇ ತಾರೀಕಿನ ಒಳಗೆ ನೆಲಮಂಗಲ ಸೇರುವುದಿಲ್ಲ. ಕಾನೂನು ತಜ್ಞರು ಕೂಡ ನಮಗೆ ಮಾಹಿತಿ ಕೊಟ್ಟಿದ್ದು ಯಾವುದೇ ಕಾರಣಕ್ಕೂ ಸೋಲೂರು ಹೋಬಳಿಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಶಾಸಕ ಶ್ರೀನಿವಾಸ್ ಅಖಂಡ ಮಾಗಡಿಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಮಂಚನಬೆಲೆ ಗ್ರಾಮದ ಶಾಸಕ ಶ್ರೀನಿವಾಸ್‌ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ನಾವು ಕೂಡ ಹೋರಾಟ ಮಾಡುತ್ತಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಶಾಸಕ ಬಾಲಕೃಷ್ಣ ರಾಜೀನಾಮೆ ನೀಡಲಿ: ಶಾಸಕ ಬಾಲಕೃಷ್ಣ ಸೋಲೂರು ವಿಚಾರವಾಗಿ ಮೌನ ವಹಿಸಿರುವುದು ಸರಿಯಲ್ಲ. ಸೋಲೂರು ವಿಚಾರವಾಗಿ ಧ್ವನಿ ಎತ್ತದ ಬಾಲಕೃಷ್ಣ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ಏಕೆ ಈ ರೀತಿ ಮೃದು ಧೋರಣೆ ಸೋಲೂರು ವಿಚಾರವಾಗಿ ತೋರುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ನಾವು ಹೋರಾಟ ಮಾಡುತ್ತಿದ್ದು ಬಾಲಕೃಷ್ಣ ಕೂಡ ಸರ್ಕಾರದ ಅಂಗವಾಗಿರುವುದರಿಂದ ಇದನ್ನು ತಡೆಯಬಹುದು. ಆದರೆ ಏಕೋ ಮಾಡುತ್ತಿಲ್ಲ ಇವರ ವರ್ತನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕನ್ನಡ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಮಂಚನಬೆಲೆ ಜಲಾಶಯಕ್ಕೆ ವಿಷ ಹಾಕುವ ಕೆಲಸ:

ಸೋಲೂರು ಹೋಬಳಿಯನ್ನು ನೆಲಮಂಗಲಕ್ಕೆ ಸೇರಿಸಿ ದೊಡ್ಡ ತಪ್ಪು ಮಾಡುತ್ತಿರುವ ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಮಂಚನಬೆಲೆ ಜಲಾಶಯಕ್ಕೆ ವಿಷ ಕೊಡುವ ಕೆಲಸ ಮಾಡುತ್ತಿದ್ದಾರೆ. ತೀವ್ರ ವಿರೋಧದ ನಡುವೆ ಕೂಡ ನೆಲಮಂಗಲ ಕೆರೆಗಳಿಗೆ ವೃಷಭಾವತಿ ಕಲುಷಿತ ನೀರನ್ನು ಫಿಲ್ಟರ್ ಮಾಡಿಸಿ ಕೆರೆಗೆ ತುಂಬಿಸಲು ಚಾಲನೆ ಕೊಟ್ಟಿದ್ದಾರೆ. ನೆಲಮಂಗಲ ಕೆರೆಗಳು ತುಂಬಿದರೆ ಅರ್ಕಾವತಿ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಕಲುಷಿತ ನೀರು ಸೇರಿ ನಂತರ ಮಂಚನಬೆಲೆ ಜಲಾಶಯಕ್ಕೂ ಈ ನೀರು ಸೇರಿ ವಿಷ ಪ್ರಸನವಾಗಲಿದೆ ಮಾಗಡಿ ತಾಲೂಕಿಗೆ ಕುಡಿಯುವ ನೀರಾಗಿ ಬಳಸುತ್ತಿರುವ ಮಂಚನಬೆಲೆ ಜಲಾಶಯ ಹಾಳಾಗಲು ನೆಲಮಂಗಲ ಶಾಸಕರು ಕಾರಣರಾಗುತ್ತಿದ್ದು ಈ ಬಗ್ಗೆ ನಾವು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುವ ಅನಿವಾರ್ಯ ನಿರ್ಮಾಣವಾಗಿದೆ ಎಂದು ಕನ್ನಡ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಸೋಲೂರು ಹೋಬಳಿಯ ಜನತೆ ಆಕ್ಷೇಪಿಸಿ:

ಸೋಲೂರು ಹೋಬಳಿ ಮಾಗಡಿ ತಾಲೂಕಿನಲ್ಲಿ ಉಳಿಯಬೇಕಾದರೆ ಸೋಲೂರು ಹೋಬಳಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಕ್ಕೆ ಆಕ್ಷೇಪಣೆ ಅರ್ಜಿ ಸಲ್ಲಿಸಿದಾಗ ಮಾತ್ರ ಸರ್ಕಾರ ಒತ್ತಡಕ್ಕೆ ಮಣಿದು ಸೋಲೂರು ಹೋಬಳಿ ಮಾಗಡಿಯಲ್ಲಿ ಉಳಿಸುತ್ತೆ. ಸೋಲೂರು ಹೋಬಳಿ ಜನ ಬೀದಿಗಿಳಿದು ಪ್ರತಿಭಟಿಸಿದಾಗ ಮಾತ್ರ ಈ ಹೋರಾಟಕ್ಕೆ ಫಲ ಸಿಗುತ್ತದೆ ಎಂದು ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುರೇಶ್ ಹೇಳಿದರು.

ಕಲ್ಯಾಗೇಟ್ ವಿನಾಯಕ ದೇವಸ್ಥಾನದಿಂದ ತಾಲ್ಲೂಕು ಕಚೇರಿ ವರೆಗೂ ಪ್ರತಿಭಟನಾ ಮೆರವಣಿಗೆ ಮಾಡಲಾಯಿತು ಉಪಾದ್ ತಹಶೀಲ್ದಾರ್ ಪ್ರಭಾಕರ್‌ಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಗೋವಿಂದರಾಜು, ಜಿಲ್ಲಾ ಇವ ರೈತ ಅಧ್ಯಕ್ಷ ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷ ಬುಡನ್ ಸಾಬ್, ಶ್ರೀಪತಿಹಳ್ಳಿ ರಾಜಣ್ಣ, ಮಹಾಂತೇಶ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಪಾಪಣ್ಣ, ವಕೀಲರ ಸಂಘದ ಕಾರ್ಯದರ್ಶಿ ಅನಿಲ ವಕೀಲಾ ಚೇತನ್, ಗುಡೇಮಾರನಹಳ್ಳಿ ಗ್ರಾ.ಪಂ.ಸದಸ್ಯರಾದ ಗೋವಿಂದರಾಜು, ಚಂದ್ರೇಗೌಡ, ಜುಟ್ಟನಹಳ್ಳಿ ದಿನೇಶ್, ಬಾಳೇನಹಳ್ಳಿ ಶಿವಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.