ಕುಶಾಲನಗರ: ಕುಶಾಲನಗರ ನಾಡಪ್ರಭು ಪತ್ತಿನ ಸಹಕಾರ ಸಂಘ 2025- 26 ನೇ ಸಾಲಿನಲ್ಲಿ ಒಟ್ಟು ವಾರ್ಷಿಕ ವಹಿವಾಟು 30, 98, 33, 000 ಕೋಟಿ ರು. ನಡೆಸಿದ್ದು ಒಟ್ಟು 27. 4 ಲಕ್ಷ ರು. ಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ ಕೆ ದಿನೇಶ್ ತಿಳಿಸಿದ್ದಾರೆ.
ಸಂಘದ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸಂಘದ ಕಾರ್ಯ ವ್ಯಾಪ್ತಿಯಲ್ಲಿರುವ ಎಲ್ಲಾ ಸದಸ್ಯರಿಗೆ ಆರ್ಥಿಕ ಸೌಲಭ್ಯವನ್ನು ಒದಗಿಸುವ ಮೂಲ ಉದ್ದೇಶ ಸಂಘ ಹೊಂದಿದೆ. ಸಂಘದಲ್ಲಿ ಸದಸ್ಯರಿಗೆ ಅನುಕೂಲಕರವಾಗುವ ರೀತಿಯಲ್ಲಿ ಜಾಮೀನು ಸಾಲ ಕಂತಿನ ಜಾಮೀನು ಸಾಲ ಆಭರಣ ಸಾಲ ಸ್ಥಿರಾಸ್ತಿ ಅಡಮಾನ ಸಾಲ ಸೇರಿದಂತೆ ಸಂಘದಿಂದ ಓರ್ವ ಸದಸ್ಯನಿಗೆ ಗರಿಷ್ಠ 25 ಲಕ್ಷದಷ್ಟು ಸಾಲ ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಾಲಿನ ಮಾರ್ಚ್ ಅಂತ್ಯಕ್ಕೆ 3. 70 ಕೋಟಿ ಸಾಲವನ್ನು ವಿತರಿಸಲಾಗಿದ್ದು ಸದಸ್ಯರ ವ್ಯಾಪಾರ ಅಭಿವೃದ್ಧಿ ದೃಷ್ಟಿಯಿಂದ 10 ಲಕ್ಷ ರು. ಗಳ ವರೆಗೆ ವ್ಯಾಪಾರ ಸಾಲ ವಿತರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ಒದಗಿಸಿದರು. ಈಗಾಗಲೇ ಎಲ್ಲಾ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತ ಕಟ್ಟಡವನ್ನು ಸಂಘಕ್ಕೆ ದಾನಿಗಳು ನೀಡಿದ ಉಚಿತ ನಿವೇಶನದಲ್ಲಿ ನಿರ್ಮಿಸಲಾಗಿದೆ. ಆರಂಭದಿಂದ ಸದಸ್ಯರು ತಮ್ಮ ಪಾಲಿನ ಲಾಭಾಂಶವನ್ನು ಸಂಘದ ಕಟ್ಟಡ ನಿಧಿಗೆ ಬಿಟ್ಟುಕೊಟ್ಟ ಕಾರಣ ಸಂಘ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಅವರು ತಿಳಿಸಿದರು. 2016ರಲ್ಲಿ ಸ್ಥಾಪನೆಗೊಂಡು ಇದೀಗ 11ನೇ ವರ್ಷದತ್ತ ಸಾಗುತ್ತಿರುವ ಸಂಘದಲ್ಲಿ ಒಟ್ಟು 893 ಸದಸ್ಯರುಗಳು ಇದ್ದು ಅಭಿವೃದ್ಧಿ ಕಾಣುತ್ತಿದೆ ಎಂದು ದಿನೇಶ್ ತಿಳಿಸಿದರು.ಸಂಘದ 2025- 26ನೇ ಸಾಲಿನ 11ನೇ ವಾರ್ಷಿಕ ಮಹಾಸಭೆ ಈ ತಿಂಗಳ 5 ರಂದು ಬೆಳಗ್ಗೆ 11 ಗಂಟೆಗೆ ಕುಶಾಲನಗರ ರೈತ ಸಹಕಾರ ಭವನದಲ್ಲಿ ನಡೆಯಲಿದೆ ಎಂದು ದಿನೇಶ್ ತಿಳಿಸಿದರು.
ಉಪಾಧ್ಯಕ್ಷರಾದ ಜಿ ಬಿ ಜಗದೀಶ್, ಎಸ್ ಸಿ ಪ್ರಕಾಶ್, ಕೆ ಆರ್ ಕಸ್ತೂರಿ, ಎಂ ಡಿ ರಮೇಶ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ ಕೆ ಸುನಿತಾ ಇದ್ದರು.