ಸಾರಾಂಶ
ಜ.23ರಂದು ‘ಪರಾಕ್ರಮ್ ದಿವಸ್’ ಅಂಗವಾಗಿ ಮಡಿಕೇರಿ ನಗರದ ವಾರ್ಡ್ ನಂ.6 ರ ಸ್ಥಳೀಯ ರಾಘವೇಂದ್ರ ದೇವಾಲಯದ ನೇತಾಜಿ ಜಂಕ್ಷನ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ದಿನಾಚರಣೆ ಸಮಾರಂಭ ನೆರವೇರಿತು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕ್ರಾಂತಿಕಾರಿ ಆಲೋಚನೆಗಳ ಮೂಲಕ ಭಾರತದ ಸ್ವಾತಂತ್ರ್ಯ ಚಳವಳಿ ಮುನ್ನಡೆಸಿದ್ದ ಅಪ್ರತಿಮ ದೇಶಪ್ರೇಮಿ, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಇಡೀ ಬದುಕನ್ನೇ ಸವೆಸಿದ ನೇತಾಜಿ ಸುಭಾಷ್ ಚಂದ್ರ ಬೋಸ್‌ರ ದೇಶಪ್ರೇಮ ಮತ್ತು ಸಮರ್ಪಣಾಭಾವವನ್ನು ಅವರ ಜನ್ಮದಿನದಂದು ಸ್ಮರಿಸಬೇಕಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾದ ಕೊಡಗು ಜಿಲ್ಲಾಧ್ಯಕ್ಷ ಪಿ.ಎಂ. ರವಿ ಅಭಿಪ್ರಾಯಪಟ್ಟಿದ್ದಾರೆ.ಜ.23ರಂದು ‘ಪರಾಕ್ರಮ್ ದಿವಸ್’ ಅಂಗವಾಗಿ ಮಡಿಕೇರಿ ನಗರದ ವಾರ್ಡ್ ನಂ.6 ರ ಸ್ಥಳೀಯ ರಾಘವೇಂದ್ರ ದೇವಾಲಯದ ನೇತಾಜಿ ಜಂಕ್ಷನ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 128ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ ಎಂಬ ಸಂದೇಶದ ಮೂಲಕ ಕೋಟಿ ಕೋಟಿ ಭಾರತೀಯರನ್ನು ಒಂದುಗೂಡಿಸಿದ ಮಹಾನ್ ಚೇತನ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನದಂದು ಅವರಿಗೆ ನಮ್ಮೇಲ್ಲರ ನಮನವನ್ನು ಸಲ್ಲಿಸಬೇಕು. ಸ್ವಾತಂತ್ರ ಹೋರಾಟಕ್ಕಾಗಿ ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನದಂದು ಅವರಿಗೆ ಕೃತಜ್ಞತೆಯಿಂದ ಗೌರವ ಸಲ್ಲಿಸುವ ಕಾರ್ಯಕ್ರಮದಲ್ಲಿ ಉದ್ಯಮಿ ಹರೀಶ್ ರೈ, ಜನನಿ ಮಹಿಳಾ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯರು ಹಾಜರಿದ್ದರು.