ಸಾರಾಂಶ
ಹುಬ್ಬಳ್ಳಿ:
ದೇಶದಲ್ಲಿ ಗೋವುಗಳು ಹೆಚ್ಚಿನ ಸಂಖ್ಯೆಯಲ್ಲಿ ಬದುಕುಳಿದಿದ್ದರೆ ಅದಕ್ಕೆ ಜೈನ ಧರ್ಮದ ಅಹಿಂಸಾ ಉಪದೇಶವೇ ಕಾರಣ ಎಂದು ಮೂರುಸಾವಿರಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಶ್ರೀ ಹೇಳಿದರು.ತಾಲೂಕಿನ ವರೂರಿನ ನವಗ್ರಹ ಕ್ಷೇತ್ರದಲ್ಲಿ ನಡೆದಿರುವ ತೀರ್ಥಂಕರರ ಮಹಾಮಸ್ತಕಾಭಿಷೇಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೇಹದಿಂದ, ಮಾತಿನಿಂದ ಅಲ್ಲದೇ ಮನಸ್ಸಿನಿಂದಲೂ ಕೂಡ ಸರ್ವ ಜೀವಿಗಳಿಗೆ ಹಿಂಸೆ ಕೊಡದೇ ಇರುವುದು ಈ ಧರ್ಮದ ಧ್ಯೇಯವಾಗಿದ್ದು, ಅದೇ ದೇಶದ ಜಾನುವಾರುಗಳ ರಕ್ಷಣೆಗೆ ಕಾರಣವಾಗಿದೆ ಎಂದರು.ಒಬ್ಬ ಜೈನ ಮುನಿಯ ಎದುರು ಹುಲಿ ಮತ್ತು ಆಕಳು ಮುಖಾಮುಖಿಯಾದರೆ, ಹಾವು ಹಾಗೂ ಮುಂಗುಸಿ ಎದುರು ಬದುರಾದರೆ ಅವು ತಮ್ಮ ವೈರತ್ವ ಮರೆಯುತ್ತವೆ. ಇದು ಜೈನ ಧರ್ಮದ ಶಕ್ತಿ. ವರೂರನ್ನು ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರವನ್ನಾಗಿ ಪರಿವರ್ತಿಸಿದ ಆಚಾರ್ಯ ಗುಣಧರ ನಂದಿ ಮಹಾರಾಜರು ಸದ್ಗುಣಗಳನ್ನು ಧರಿಸಿ ಗುಣಧರ ಆಗಿದ್ದಾರೆ. ಸೈನ್ಯ, ಚತುರಂಗ ಬಲ, ಸಂಪತ್ತು ಇಲ್ಲದಿದ್ದರೂ ಮಹಾರಾಜರು ಎನಿಸಿದ್ದಾರೆ. ಇವುಗಳನ್ನೆಲ್ಲ ತ್ಯಾಗ ಮಾಡಿದವರೇ ಮಹಾರಾಜರು ಎಂಬುದಕ್ಕೆ ಅವರೇ ಸಾಕ್ಷಿ ಎಂದರು.
ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ವರೂರು ಕ್ಷೇತ್ರವನ್ನು ದೇಶದ ಒಂದು ಪ್ರಸಿದ್ಧ ಜೈನ ಧಾರ್ಮಿಕ ಕ್ಷೇತ್ರವನ್ನಾಗಿ ಪರಿವರ್ತಿಸಿದ ಗುಣಧರ ನಂದಿ ಮಹಾರಾಜರು ಎಲ್ಲರಿಗೂ ಆದರ್ಶರಾಗಿದ್ದಾರೆ. ಆಧುನಿಕ ಕಾಲದಲ್ಲಿ ಪರಕೀಯ ವಿಚಾರ ಹಾಗೂ ಭೌತಿಕ ವಸ್ತುಗಳ ಆಕರ್ಷಣೆಗೆ ಒಳಗಾಗಿ ಭಾರತೀಯ ಸಂಸ್ಕೃತಿಗೆ ಪೆಟ್ಟು ಬಿದ್ದಿದೆ. ವರೂರು ಕ್ಷೇತ್ರವು ಮತ್ತೆ ಜನರಲ್ಲಿ ಸ್ವದೇಶಿ ಪ್ರೇಮ ಬೆಳೆಸಿದೆ ಎಂದು ಹೇಳಿದರು.ವಿದ್ವಾಂಸ ಡಾ. ಶ್ರೇಯಾಂಸ ಕುಮಾರ ಜೈನ ಅವರು ಕರ್ನಾಟಕದಲ್ಲಿ ಜೈನ ಸಾಹಿತ್ಯ ಮತ್ತು ಸಂಸ್ಕೃತಿ ವಿಷಯ ಕುರಿತು ಉಪನ್ಯಾಸ ನೀಡಿದರು. ಶ್ರೀಗಳನ್ನು ಮತ್ತು ಇತರ ಅತಿಥಿಗಳನ್ನು ಪ್ರಚಾರ ಸಮಿತಿ ಅಧ್ಯಕ್ಷ ವಿಮಲ್ ತಾಳಿಕೋಟಿ ಹಾಗೂ ಪ್ರಶಾಂತ ಗೌರವಿಸಿದರು.
ಯಜ್ಞೋಪವೀತ ಧಾರಣೆ: ಬಾಲ ಸಂಸ್ಕಾರವ್ಯಕ್ತಿಯ ಜೀವನದಲ್ಲಿ ಮಹತ್ವದ ಘಟ್ಟವಾದ ಮುಂಜಿ ಕಾರ್ಯಕ್ರಮವನ್ನು ಇಲ್ಲಿ ನವಗ್ರಹತೀರ್ಥದಲ್ಲಿ 94 ಬಾಲಕರಿಗೆ ನೆರವೇರಿಸಲಾಯಿತು. ಮುಂಡನ ಮಾಡಿಸಿ ಶಿಖೆ ಬಿಟ್ಟು ಕೇಸರಿ ಧೋತರ ಧರಿಸಿದ್ದ ನೂತನ ವಟುಗಳಿಗೆ ಪಂಡಿತರು ಜನಿವಾರ ಹಾಕಿದರು. ಆಚಾರ್ಯ ಗುಣಧರ ನಂದಿ ಮಹಾರಾಜರು ತಮ್ಮ ನವಿಲುಗರಿ ಕಟ್ಟು ಪಿಂಛಿಯಿಂದ ಎಲ್ಲ ಬಾಲಕರ ತಲೆ ಸ್ಪರ್ಶಿಸಿ, ಅಕ್ಷತೆ ಹಾಕಿ ಆಶೀರ್ವದಿಸಿದರು. ಇದರೊಂದಿಗೆ 34 ಬಾಲಕ-ಬಾಲಕಿಯರಿಗೆ ಮಂತ್ರ ಸಂಸ್ಕಾರ ನೀಡಲಾಯಿತು.
ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿಹೆಲಿಕ್ಯಾಪ್ಟರ್ ಮೂಲಕ ನವಗ್ರಹ ತೀರ್ಥಕ್ಷೇತ್ರದ ಮೇಲೆ ಪುಷ್ಪವೃಷ್ಟಿಗೈಯಲಾಯಿತು. ಸುಮೇರು ಪರ್ವತ, ನವಗ್ರಹ ತೀರ್ಥಂಕರರು ಹಾಗೂ ಸಭಾ ಮಂಟಪದ ಮೇಲೆ ಹೂವುಗಳ ಮಳೆ ಬಿದ್ದಿತು. ಪ್ರಸಿದ್ಧ ಗಾಯಕ ರೂಪೇಶ ಜೈನ ಮಧುರ ಗೀತೆಗಳನ್ನು ಹಾಡಿದರು.