ಮುಡಿಪು ಸಮೀಪ ರಾಜ್ಯದ 10ನೇ ಕಾರಾಗೃಹದ ನಿರ್ಮಾಣ ಒಟ್ಟು 200 ಕೋಟಿ ರು. ಅಂದಾಜು ವೆಚ್ಚದಲ್ಲಿ 6 ವರ್ಷಗಳ ಹಿಂದೆ ಆರಂಭವಾಗಿದ್ದು, ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗುತ್ತಿರುವ ಕಾರಣ ಕಾಮಗಾರಿಯೂ ವಿಳಂಬವಾಗುತ್ತಿದೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಮಂಗಳೂರು

ಕೊಡಿಯಾಲ್‌ಬೈಲ್‌ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್‌ ಜಾಮರ್‌ನಿಂದಾಗಿ ಅಕ್ಕಪಕ್ಕದ ಮನೆ, ವ್ಯಾಪಾರಸ್ಥರಿಗೆ ಅಡಚಣೆ ಮುಂದುವರಿದಿದ್ದು, ಈ ಜಿಲ್ಲಾ ಕಾರಾಗೃಹವನ್ನು ನಗರದ ಹೊರವಲಯದ ಮುಡಿಪು ಸಮೀಪ ನಿರ್ಮಾಣವಾಗುತ್ತಿರುವ ಹೈ ಸೆಕ್ಯುರಿಟಿ ಕಾರಾಗೃಹಕ್ಕೆ ಸ್ಥಳಾಂತರಿಸಬೇಕೆಂಬ ಬೇಡಿಕೆ ಹೆಚ್ಚಿದೆ.

ಪ್ರಸ್ತುತ ಕಾರಾಗೃಹವು ನಗರದ ಹೃದಯ ಭಾಗದಲ್ಲಿದ್ದು, ಪಕ್ಕದಲ್ಲೇ ರಸ್ತೆ, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಕಟ್ಟಡಗಳು, ಮನೆಗಳು ಇರುವುದರಿಂದ ಜೈಲ್‌ ಜ್ಯಾಮರ್‌ನಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಜೈಲನ್ನು ಹೊರವಲಯಕ್ಕೆ ಸ್ಥಳಾಂತರಿಸುವುದೇ ಸದ್ಯಕ್ಕಿರುವ ಏಕೈಕ ಮಾರ್ಗ. ಆದರೆ ಮುಡಿಪುವಿನಲ್ಲಿ ಕಾರಾಗೃಹ ನಿರ್ಮಾಣ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.

ಮುಡಿಪು ಸಮೀಪ ರಾಜ್ಯದ 10ನೇ ಕಾರಾಗೃಹದ ನಿರ್ಮಾಣ ಒಟ್ಟು 200 ಕೋಟಿ ರು. ಅಂದಾಜು ವೆಚ್ಚದಲ್ಲಿ 6 ವರ್ಷಗಳ ಹಿಂದೆ ಆರಂಭವಾಗಿದ್ದು, ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗುತ್ತಿರುವ ಕಾರಣ ಕಾಮಗಾರಿಯೂ ವಿಳಂಬವಾಗುತ್ತಿದೆ.

2008ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾರಾಗೃಹ ನಿರ್ಮಾಣ ಯೋಜನೆಗೆ ಹಸಿರು ನಿಶಾನೆ ದೊರಕಿತ್ತು. 2016-17ರಲ್ಲಿ ವಿವರವಾದ ಯೋಜನಾ ವರದಿ ಸಿದ್ಧಪಡಿಸಲಾಗಿದ್ದು, 2018-19ರಲ್ಲಿ ಅನುಮೋದನೆ ನೀಡಿತು. ಎಲ್ಲ ಪ್ರಕ್ರಿಯೆಗಳು ಮುಗಿದು 2019ರ ಮೇ ತಿಂಗಳಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿ ಬಳಿಕ ಕೆಲಸ ಶುರುವಾಗಿತ್ತು.

ಒಟ್ಟು 1,009 ಕೈದಿಗಳಿಗೆ ಸ್ಥಳಾವಕಾಶವಿರುವ ಈ ಕಾರಾಗೃಹ ನಿರ್ಮಾಣಕ್ಕೆ ಇದುವರೆಗೆ ಒಟ್ಟು 110 ಕೋಟಿ ರು. ಅನುದಾನ ಬಂದಿದೆ. ಆದರೆ ಒಳಾಂಗಣ ಕೆಲಸ, ನೆಲಹಾಸು ಇನ್ನಿತರ ಕೆಲಸಗಳು ಇನ್ನೂ ಪ್ರಾರಂಭವಾಗಿಲ್ಲ. ಕಾಂಪೌಂಡ್ ಗೋಡೆ ಪೂರ್ಣಗೊಂಡಿದ್ದು, ಉಳಿದ ಮೊದಲ ಹಂತದ ನಿರ್ಮಾಣ ಕಾರ್ಯವಷ್ಟೇ ಮುಗಿದಿದೆ.

ಏಕಕಾಲದಲ್ಲಿ 10 ಕೈದಿಗಳೊಂದಿಗೆ ನೇರ ಸಂವಹನ ನಡೆಸಲು ಅವಕಾಶ ನೀಡುವ ಸಂದರ್ಶಕರ ಕೊಠಡಿ, ಪ್ರಾಥಮಿಕ ಚಿಕಿತ್ಸೆಗಾಗಿ ಆಸ್ಪತ್ರೆ, ಕಾರ್ಯಾಗಾರ, ಆಡಳಿತ ಕಚೇರಿ, ವೀಡಿಯೊ ಕಾನ್ಫರೆನ್ಸ್ ಹಾಲ್, ಹೆಲಿಪ್ಯಾಡ್ ಮತ್ತು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವಸತಿ ನಿಲಯಗಳನ್ನು ಸಹ ಒಳಗೊಂಡಿರುತ್ತದೆ. ಜೈಲು ಬ್ಲಾಕ್‌ಗಳು, ಆಡಳಿತ ಕಚೇರಿಗಳು, ಸಂದರ್ಶಕರ ಕೊಠಡಿ, ಆಸ್ಪತ್ರೆ ಮತ್ತು ಇತರ ಸೌಲಭ್ಯಗಳ ರಚನೆಗಳ ನಿರ್ಮಾಣ ಮಾತ್ರ ಪೂರ್ಣಗೊಂಡಿವೆ.

ಮಂಗಳೂರು ಪಿಡಬ್ಲ್ಯೂಡಿ ವಿಭಾಗವು ಎರಡನೇ ಹಂತದ ಕಾಮಗಾರಿಗೆ 195 ಕೋಟಿ ರು. ಅಂದಾಜು ಪಟ್ಟಿ ಸಲ್ಲಿಸಿದೆ. ಅನುದಾನ ಲಭ್ಯತೆಯ ಆಧಾರದ ಮೇಲೆ ಉಳಿದ ಕೆಲಸಗಳು ನಡೆಯಲಿವೆ, ಅದಾದ ಬಳಿಕವಷ್ಟೇ ಜೈಲನ್ನು ನಗರದಿಂದ ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಪಿಡಬ್ಲ್ಯೂಡಿ ಮೂಲಗಳು ತಿಳಿಸಿವೆ.