ಸಾರಾಂಶ
ಚಿತ್ರದುರ್ಗ : 1962ರಲ್ಲಿ ನಡೆದ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಲಿಂಗೈಕ್ಯ ಶ್ರೀ ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳು ತಾವು ಧರಿಸುತ್ತಿದ್ದ ಚಿನ್ನದ ಕಿರೀಟ, ಆಭರಣ ಹಾಗೂ ಧನವನ್ನು ರಾಷ್ಟ್ರ ರಕ್ಷಣಾ ನಿಧಿಗೆ ಸರ್ಮಪಿಸಿ ದೇಶಭಕ್ತಿ ಮೆರೆದಿದ್ದರು ಎಂದು ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿಯ ಸದಸ್ಯ ಡಾ.ಬಸವಕುಮಾರ ಮಹಾಸ್ವಾಮೀಜಿ ಸ್ಮರಿಸಿದರು.
ಶ್ರೀ ಜಯವಿಭವ ಮುರುಘರಾಜೇಂದ್ರ ಶ್ರೀಗಳ ಲೀಲಾ ವಿಶ್ರಾಂತಿ ತಾಣದಲ್ಲಿ ಬುಧವಾರ ನಡೆದ 61ನೇ ಸ್ಮರಣೋತ್ಸವದಲ್ಲಿ ಶ್ರೀಗಳ ಗದ್ದುಗೆಗೆ ಪುಷ್ಪವೃಷ್ಟಿ ಮತ್ತು ವಚನಾಭಿಷೇಕದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುರುಘಾಮಠ ಪರಂಪರೆಯಲ್ಲಿ ಆಗಿಹೋಗಿರುವ ಎಲ್ಲಾ ಜಗದ್ಗುರುಗಳು ದೂರದೃಷ್ಟಿಯುಳ್ಳವರಾಗಿದ್ದರು. ನಮ್ಮ ದೇಶ ಉಳಿದರೆ ನಾವು ಉಳಿವೆವು ಎಂಬುದು ಶ್ರೀಗಳ ವಾಣಿಯಾಗಿತ್ತು. ಜಯವಿಭವ ಶ್ರೀಗಳು ಯುದ್ಧದ ಸಂದರ್ಭದಲ್ಲಿ ದೇಶಕ್ಕಾಗಿ ಏನಾದರೂ ನೀಡಬೇಕು ಎಂಬ ಚಿಂತನೆಯೊಂದಿಗೆ ಚಿನ್ನಾಭರಣ ಮತ್ತು ಧನವನ್ನು ದೇಶದ ರಕ್ಷಣಾನಿಧಿಗೆ ಅರ್ಪಿಸಿ ಶ್ರೀಮಠದ ಗೌರವ-ಘನತೆಯನ್ನು ಹೆಚ್ಚಿಸಿದ್ದರು ಎಂದರು.
ತಮ್ಮ ಗುರುಗಳಾದ ಜಯದೇವ ಶ್ರೀ ಹಾಗೂ ಕಿರಿಯರಾದ ಮಲ್ಲಿಕಾರ್ಜುನ ಶ್ರೀಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಜಯವಿಭರು ಬಹುಬಾಷಾ ಪಂಡಿತರಾಗಿದ್ದರು. ಕೃಷಿಯ ಕಡೆ ಹೆಚ್ಚಿನ ಒಲವು ಹೊಂದಿ ಶ್ರೀಮಠದ ಪಕ್ಕದ ತೋಟವನ್ನು ಮಾಡಿದ್ದಾರೆ. ತಮ್ಮ ಅಲ್ಪ ಕಾಲಾವಧಿಯಲ್ಲಿ ಶ್ರೀಮಠವನ್ನು ಅಭಿವೃದ್ಧಿಪಡಿಸಿದರು. ಬೆಂಗಳೂರಿನಲ್ಲಿ ಸರ್ಪಭೂಷಣ ಮಠ ಸ್ಥಾಪನೆ ಮಾಡಿದರು. ಹಾಸನ, ಚಿಕ್ಕಜಾಜೂರಿನಲ್ಲಿ ವಿದ್ಯಾರ್ಥಿ ನಿಲಯಕ್ಕಾಗಿ ಜಾಗಗಳನ್ನು ಖರೀದಿ ಮಾಡಿದ್ದರು ಎಂದು ಹೇಳಿದರು.
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಆಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ನಮ್ಮ ಕುಟುಂಬ ಹಿಂದಿನಿಂದಲೂ ಶ್ರೀಮಠದೊಂದಿಗೆ ಉತ್ತಮ ಭಾಂದವ್ಯ ಹೊಂದಿದೆ. ಶ್ರೀಮಠದಲ್ಲಿ 1962ರಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಮ್ಮ ತಂದೆಯವರ ವಿವಾಹ ನಡೆದು, ಶ್ರೀ ಜಯವಿಭವ ಸ್ವಾಮಿಗಳು ಆಶೀರ್ವಾದ ಮಾಡಿದ್ದರು. ಹಿರಿಯರು ಮಾಡಿದ ಸತ್ಕಾರ್ಯ ಫಲವಾಗಿ ನಾನು ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದೇನೆ ಎಂದು ತಿಳಿಸಿದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ ವೀರೇಶ್ ಮಾತನಾಡಿ, ಡಾ.ಬಸವಕುಮಾರ ಸ್ವಾಮಿಗಳು ಶ್ರೀಮಠದಲ್ಲಿ ಶರಣರ, ಮಹನೀಯರ ಸ್ಮರಣೆ ಮತ್ತು ಜಯಂತಿ ಕಾರ್ಯಕ್ರಮಗಳನ್ನು ಜವಾಬ್ದಾರಿಯುತವಾಗಿ ಅರ್ಥಪೂರ್ಣವಾಗಿ ಆಯೋಜಿಸುತ್ತಾ ಬರುತ್ತಿದ್ದಾರೆ. ಶ್ರೀಮಠವು ನವಕೋಟಿ ನಾರಾಯಣ ಪೀಠವೆಂದು ಪ್ರಸಿದ್ಧಿ ಪಡೆದಿತ್ತು. ಜಯವಿಭವ ಶ್ರೀಗಳು ಮಾನವೀಯತೆ ಗುಣವುಳ್ಳವರಾಗಿದ್ದರು. ಶ್ರೀಗಳ ಕಾರ್ಯಗಳು ಅವಿಸ್ಮರಣೀಯ ಎಂದು ತಿಳಿಸಿದರು.
ಲೇಖಕ ಜಿ.ಎಸ್.ಉಜ್ಜಿನಪ್ಪ ಮಾತನಾಡಿ, ಜಯದೇವ ಶ್ರೀಗಳು ನಿಜವಾದ ಸನ್ಯಾಸಿಗಳು. ಅವರದ್ದು ಸಾತ್ವಿಕ ಗುಣ. 1958 ರಲ್ಲಿ ತಾವು ಪಿಯುಸಿ ಓದುವಾಗ ಕಾರ್ಯಕ್ರಮಕ್ಕೆ ಶ್ರೀಗಳು ಆಗಮಿಸಿ ಆಶೀರ್ವಚನ ನೀಡಿದ್ದ ಶ್ರೀಗಳು ಅಭ್ಯಾಸ, ಕಲಿಕೆಯ ಜೊತೆಗೆ ಅಷ್ಟಾವರಣ, ಪಂಚಚಾರವನ್ನು ಕಲಿಯಬೇಕು ಆ ಮೂಲಕ ನಮ್ಮ ಪ್ರತಿಭೆ ಅನಾವರಣಗೊಳ್ಳಬೇಕು ಎಂದಿದ್ದರು.
ಚಂದ್ರವಳ್ಳಿಯ ಎಸ್‌ಜೆಎಂ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಎಸ್ ಪಂಚಾಕ್ಷರಿ ಮಾತನಾಡಿ, ಜಯದೇವ ಶ್ರೀಗಳು ಜಯವಿಭವ ಶ್ರೀಗಳಿಗೆ ಕಾಶಿಯಲ್ಲಿ ಉನ್ನತ ಅಭ್ಯಾಸ ಮಾಡಿಸಿ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡುತ್ತಾರೆ. ಜಯವಿಭವ ಶ್ರೀಗಳು ಕೃಷಿಗೆ ಹೆಚ್ಚು ಒತ್ತು ನೀಡಿ ಶ್ರೀಮಠದ ಮುಂದೆ ತೋಟದ ನಿರ್ಮಾಣ ಮಾಡಿದರು. ಭಾರತ ಚೀನಾ ಯುದ್ಧದ ಸಂದರ್ಭದಲ್ಲಿ ಕಿರೀಟ ಆಭರಣಗಳನ್ನು ರಕ್ಷಣಾನಿಧಿಗೆ ನೀಡಿದ್ದರು ಎಂದು ತಿಳಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ ನಿರಂಜನಮೂರ್ತಿ, ವೀರಶೈವ ಸಮಾಜದ ನಿರ್ದೇಶಕ ಎಸ್.ಪರಮೇಶ್ ವೇದಿಕೆಯಲ್ಲಿದ್ದರು. ಬಸವರಾಜ ಕಟ್ಟಿ, ಪೈಲ್ವಾನ್ ತಿಪ್ಪೇಸ್ವಾಮಿ, ಹಾಗೂ ಶ್ರೀಮಠದ ಅಭಿಮಾನಿಗಳು ಉಪಸ್ಥಿತರಿದ್ದರು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಡಾ.ಆನಂದ್ ಸ್ವಾಗತಿಸಿ, ಡಾ.ರೇವಣ್ಣ ನಿರೂಪಿಸಿ, ಶ್ರೀ ನವೀನ್ ಮಸ್ಕಲ್ ಶರಣು ಸಮರ್ಪಣೆ ಮಾಡಿದರು.