ಸಾರಾಂಶ
ಜನರ ಆಶೀರ್ವಾದದಿಂದ ನಿಖಿಲ್ ಕುಮಾರಸ್ವಾಮಿ ಅವರು ಶಾಸಕರಾಗಿ ಆಯ್ಕೆ ಆಗುವುದು ಖಚಿತ. ಅವರು ವಿಧಾನಸೌಧಕ್ಕೆ ಹೋಗಿಯೇ ಹೋಗ್ತಾರೆ. ವಿಧಾನಸಭೆಯಲ್ಲಿ ಅಭಿವೃದ್ಧಿ ಎಂದರೇನು ಎಂದು ನಿಖಿಲ್ ಅವರೇ ವಿಧಾನ ಕಲಾಪದಲ್ಲಿ ರೂಲ್ 69 ಅಡಿಯಲ್ಲಿ ಚರ್ಚೆ ಮಾಡುತ್ತಾರೆ.
ಚನ್ನಪಟ್ಟಣ : ಜನರ ಆಶೀರ್ವಾದದಿಂದ ನಿಖಿಲ್ ಕುಮಾರಸ್ವಾಮಿ ಅವರು ಶಾಸಕರಾಗಿ ಆಯ್ಕೆ ಆಗುವುದು ಖಚಿತ. ಅವರು ವಿಧಾನಸೌಧಕ್ಕೆ ಹೋಗಿಯೇ ಹೋಗ್ತಾರೆ. ವಿಧಾನಸಭೆಯಲ್ಲಿ ಅಭಿವೃದ್ಧಿ ಎಂದರೇನು ಎಂದು ನಿಖಿಲ್ ಅವರೇ ವಿಧಾನ ಕಲಾಪದಲ್ಲಿ ರೂಲ್ 69 ಅಡಿಯಲ್ಲಿ ಚರ್ಚೆ ಮಾಡುತ್ತಾರೆ. ಇವರ ಎಲ್ಲಾ ಟೀಕೆಗೂ ನಿಖಿಲ್ ವಿಧಾನಸಭೆಗೆ ಪ್ರವೇಶ ಮಾಡಿ ಉತ್ತರ ಕೊಡುತ್ತಾರೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸಿದ ಅವರು, ಚನ್ನಪಟ್ಟಣದ ವಿರೂಪಾಕ್ಷಿಪುರ ಗ್ರಾಮದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಗುರಿ ಅಭಿವೃದ್ಧಿ ಅಲ್ಲ, ಸರ್ಕಾರ ಬೀಳಿಸೋದು ಎಂಬ ಕೃಷ್ಣ ಭೈರೇಗೌಡರ ಹೇಳಿಕೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ಕೃಷ್ಣ ಭೈರೇಗೌಡನ ಕ್ಷೇತ್ರ ಬ್ಯಾಟರಾಯನಪುರದಲ್ಲಿ ಮಳೆಯಿಂದ ಪ್ರವಾಹ ಉಂಟಾಗಿ ಜನ ಬೀದಿಗೆ ಬಂದಿದ್ದಾರೆ. ಅಲ್ಲಿ ಏನಪ್ಪಾ.. ನೀನು ಅಭಿವೃದ್ಧಿ ಮಾಡಿರೋದು? ಅಧಿಕಾರಿಗಳಿಗೆ ಕೈ ಮುಗಿದು ಗೋಗರೆದಿದ್ದೀರಿ. ಚನ್ನಪಟ್ಟಣದಲ್ಲಿ ನಾನು ಮಾಡಿರುವ ಕೆಲಸದ 10 ಪರ್ಸೆಂಟ್ ಮಾಡಿದ್ದೀರಾ ನೀವು? ನಿಮ್ಮಿಂದ ಅಭಿವೃದ್ಧಿ ಮಾಡೋದು ಕಲಿಬೇಕಾ? ಎಂದು ಪ್ರಶ್ನಿಸಿದರು.
ಚನ್ನಪಟ್ಟಣ ಸಿಎಂ ಏನು ಕೊಡುತ್ತಾರೆ?:
ಸಿಎಂ, ಡಿಸಿಎಂ ಸೇರಿ ಹಲವು ಮಂತ್ರಿಗಳು ಚನ್ನಪಟ್ಟಣಕ್ಕೆ ಬಂದು ಭಾಷಣ ಮಾಡಿದ್ದಾರೆ. ಸಿಎಂ ಮಾಡಿದ ಭಾಷಣದಲ್ಲಿ ಚನ್ನಪಟ್ಟಣಕ್ಕೆ ಏನು ಕೊಡ್ತೀವಿ ಅನ್ನೋದೆ ಇಲ್ಲ. ದೇವೇಗೌಡರು, ನಿಖಿಲ್ ಹಾಗೂ ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿದ್ದಾರೆ. ಕೇವಲ ನಮ್ಮನ್ನು ಬೈದುಕೊಂಡು ಹೋದರೆ ವೋಟು ಸಿಗುತ್ತದೆ ಎಂದು ಅವರು ಭಾವನೆ ಇರಿಸಿಕೊಂಡಿದ್ದಾರೆ ಎಂದು ಟೀಕಿಸಿದರು.
ಇನ್ನೂ ಕೆಲ ಮಂತ್ರಿಗಳು ಎಚ್ಡಿಕೆ ಚನ್ನಪಟ್ಟಣಕ್ಕೆ ಏನು ಮಾಡಿದ್ದಾರೆ ಎಂದು ಕೇಳುತ್ತಾರೆ. ಅಭಿವೃದ್ಧಿ ಅಂದರೆ ಏನು, ಚನ್ನಪಟ್ಟಣ ಸುತ್ತುತ್ತಾ ಇದ್ದೀರಲ್ಲ. ನಿಮ್ಮ ಕ್ಷೇತ್ರದ ರಸ್ತೆ, ಕ್ಷೇತ್ರದ ಗ್ರಾಮಗಳ ಪರಿಸ್ಥಿತಿ ನೋಡಿದ್ದೀರಾ? ಕಮಿಷನ್ ಹೊಡೆಯೋದೆ ನಿಮ್ಮ ಪ್ರಕಾರ ಅಭಿವೃದ್ಧಿಯಾ? ಇವರ ಹೇಳಿಕೆ ನೋಡ್ತಿದ್ರೆ ಅಭಿವೃದ್ಧಿ ಪದದ ಬಗ್ಗೆ ಗೊಂದಲ ಆಗ್ತಿದೆ ಎಂದು ಕುಟುಕಿದರು.
ರಮೇಶ್ ಕುಮಾರ್ ಭೂ ಒತ್ತುವರಿ ತೆರವು ಮಾಡಿ:
ನಿಮ್ಮ ಪಕ್ಷದ ನಾಯಕ, ಮಾಜಿ ಸ್ಪೀಕರ್ ಅವರು ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿದ್ದಾರೆ. ನಿನಗೆ ದಮ್ಮು ತಾಕತ್ತು ಇದ್ದರೆ ಮೊದಲು ಅದನ್ನು ತೆರವು ಮಾಡಿಸಿ ಎಂದು ಸಚಿವ ಕೃಷ್ಣ ಭೈರೇಗೌಡ ಅವರಿಗೆ ಸವಾಲು ಹಾಕಿದರು.
ನಿಮ್ಮ ಗುರುಗಳು ಎನ್ನುವ ವ್ಯಕ್ತಿ ಅರಣ್ಯ ಇಲಾಖೆಗೆ ಸೇರಿದ 120 ಎಕರೆ ಲಪಟಾಯಿಸಿದ್ದಾರೆ. ಕೇಂದ್ರ ಅರಣ್ಯ ಇಲಾಖೆ ಕೊಟ್ಟಿರುವ ನೋಟೀಸ್ ನೋಡಿದ್ದೀರಾ? ರೈತರನ್ನು ಒಕ್ಕಲೆಬ್ಬಿಸುತ್ತೀರಿ, ಒಂದು ರಸ್ತೆ ಮಾಡಲು ಬಿಡಲ್ಲ ನೀವು. ಇದೇನಾ ಅಭಿವೃದ್ಧಿ? ಎಂದು ಕೃಷ್ಣ ಭೈರೇಗೌಡ ವಿರುದ್ಧ ಕಿಡಿಕಾರಿದರು.
ಡಿಕೆಸು ಯೋಗೇಶ್ವರ್ ನಿಂದಿಸಿದ್ದ ಆಡಿಯೋ ಬಿತ್ತರಿಸಿದ ಎಚ್‌ಡಿಕೆ
ಚನ್ನಪಟ್ಟಣ: ಚುನಾವಣೆಗೆ ಮೊದಲು ಡಿ.ಕೆ.ಸಹೋದರರು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಹಾದಿ ಬೀದಿಯಲ್ಲಿ ಬೈದಾಡಿಕೊಂಡಿದ್ದರು. ಈಗ ಪರಸ್ಪರ ಅಪ್ಪಿಕೊಂಡು ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಕೇಂದ್ರ ಸಚಿವ ಕುಮಾರಸ್ವಾಮಿ, ಡಿ.ಕೆ. ಸುರೇಶ್ ಅವರು ಯೋಗೇಶ್ವರ್ ಅವರಿಗೆ ಬೈದಿರುವ ಆಡಿಯೋ ಬಿಡುಗಡೆ ಮಾಡಿದರು.
ಕಾಂಗ್ರೆಸ್ ಪ್ರಚಾರ ಸಭೆಗಳಲ್ಲಿ ವಿಧಾನಸಭೆಯಲ್ಲಿ ಚುನಾವಣಾ ವ್ಯವಸ್ಥೆ ಸುಧಾರಣೆ ಬಗ್ಗೆ ನಾನು ಮಾತನಾಡಿರುವ ಆಡಿಯೋವನ್ನು ಎಷ್ಟು ಬೇಕೋ ಅಷ್ಟು ಕತ್ತರಿಸಿ ಜನರಿಗೆ ಕೇಳಿಸುತ್ತಿದ್ದಾರೆ. ನಾನು ಮಾಡಿರುವ ಆಡಿಯೋ ಹತ್ತು ಹದಿನೈದು ನಿಮಿಷ ಇದೆ. ಅಷ್ಟನ್ನೂ ಕೇಳಿಸಲಿ ಎಂದು ಸವಾಲು ಹಾಕಿದರು.
ಆದರೆ, ಈ ಸುರೇಶ್ ಎಂತಹ ವ್ಯಕ್ತಿ ಎನುವುದಕ್ಕೆ ಇಲ್ಲಿದೆ ಆಡಿಯೋ. ದಿನ ಬೆಳಗ್ಗೆ ಯೋಗೇಶ್ವರ್ ಹೆಗಲ ಮೇಲೆ ಕೈ ಹಾಕಿಕೊಂಡು ತಿರುಗಾಡುವ ವ್ಯಕ್ತಿ, ಅವರ ಬಗ್ಗೆ ಹೇಗೆಲ್ಲಾ ಮಾತನಾಡಿದ್ದಾರೆ ಎಂಬುದನ್ನು ನೋಡಿ ಎಂದು ಮಾಧ್ಯಮಗಳ ಮುಂದೆ ಸುರೇಶ್ ಮಾತನಾಡಿರುವ ಆಡಿಯೋವನ್ನು ಹಾಕಿ ಕೇಳಿಸಿದರು.
ಅಡಿಯೋದಲ್ಲಿ ಏನಿದೆ?: ಸಿ.ಪಿ. ಯೋಗೇಶ್ವರ್, ಅವನು ರಿಯಲ್ ಯಾರು ಯಾರಿಗೆ ಟೋಪಿ ಹಾಕವೆ, ಬಿಡದಿನಲ್ಲಿ ಹೋಗಿ ಹೇಳಿದರೆ ಎಲ್ಲಾ ಹೇಳ್ತಾರೆ.. ಹೇಳಿದ್ನಲ್ಲಪ್ಪಾ.. ಬಿಡದಿನಲ್ಲಿ ಎಲ್ಲರಿಗೂನೂ ಮೆಗಾಸಿಟಿ ಮಾಡ್ತಿನಿ ಅಂತ ಟೋಪಿ ಹಾಕಿದ್ನಲ್ಲಾ.. ಮರೆತೋಗಿದ್ದಾನಾ..? ಎನ್ನುವ ಆಡಿಯೋವನ್ನು ಕೇಂದ್ರ ಸಚಿವರು ಬಿಡುಗಡೆ ಮಾಡಿದರು.
ಕುಮಾರಸ್ವಾಮಿಗೆ ಮುಖಂಡರ ಹೆಸರೂ ಗೊತ್ತಿಲ್ಲ. ಅದಕ್ಕೆ ಬ್ರದರ್, ಬ್ರದರ್ ಎನ್ನುತ್ತಾರೆ ಎಂಬ ಡಿ.ಕೆ. ಸುರೇಶ್ ಹೇಳಿಕೆಗೆ ಅಯ್ಯೋ.. ನಾನು ಎಲ್ಲರನ್ನೂ ಬ್ರದರ್ ಅಂತಲೇ ಕರೆಯುತ್ತೇನೆ. ಅದರಲ್ಲೇನಿದೆ? ಎಂದರು.
ಇವರೇನು? ಇವರ ಅಸಲಿ ಬಂಡವಾಳ ಏನು ಎನ್ನುವುದು ಎಲ್ಲರಿಗೂ ಗೊತ್ತಿದೆ. ನಾನು ಹೇಳಬೇಕಿಲ್ಲ, ಚನ್ನಪಟ್ಟಣ ಜನರೇ ಉತ್ತರ ಕೊಡುತ್ತಾರೆ ಎಂದರು.