ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮೂರು ಬಾರಿ ತೊಡೆ ಮುರಿಸಿಕೊಂಡು ಮೂಲೆಯಲ್ಲಿ ಕುಳಿತಿರುವ ನಿಖಿಲ್ ಕುಮಾರಸ್ವಾಮಿ ಯಾರ ತೊಡೆ ಮುರಿಯುತ್ತಾನೆ ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಲೇವಡಿ ಮಾಡಿದರು.ತಾಲೂಕಿನ ಮರಕಾಡುದೊಡ್ಡಿ, ಗೊರವನಹಳ್ಳಿ, ಉಪ್ಪಾರದೊಡ್ಡಿ, ಅಜ್ಜಹಳ್ಳಿ ಹಾಗೂ ಕಳ್ಳಿಮೇಳದೊಡ್ಡಿ ಗ್ರಾಮಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ರೈತರು ಡಿಸಿಎಂ ಡಿ.ಕೆ.ಶಿವಕುಮಾರ ಅವರ ತೊಡೆ ಮುರಿಯುತ್ತಾರೆ ಎಂದು ನಿಖಿಲ್ ಹೇಳಿಕೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಈಗಾಗಲೇ ತೊಡೆ ಮುರಿಸಿಕೊಂಡಿರುವ ನಿಖಿಲ್ ಮೊದಲು ತಮ್ಮ ತೊಡೆ ಸರಿಪಡಿಸಿಕೊಳ್ಳಲಿ. ಆನಂತರ ಇನ್ನೊಬ್ಬರ ತೊಡೆ ಮುರಿಯೋ ಬಗ್ಗೆ ಮಾತನಾಡಲಿ ಎಂದು ಕಿಡಿಕಾರಿದರು.ನಿವೃತ್ತ ಯೋಧ ಹಾಗೂ ಓರ್ವ ವ್ಯಕ್ತಿ ಭೂಮಿ ಲಪಟಾಯಿಸಿ ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರ ಆರೋಪ ಹಳೇ ಛಾಳಿಯ ಮಾತುಗಳು. ಯಾವುದು ಸಾಬೀತಾಗಿಲ್ಲ ಎಂದು ಕಿಡಿಕಾರಿದರು.
ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ಎರಡು ವರ್ಷಗಳಾಗಿವೆ. ಐದು ನಿಮಿಷದೊಳಗೆ ಮೇಕೆದಾಟು ಯೋಜನೆಗೆ ಅನುಮೋದನೆ ಕೊಡಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು.ಮದ್ದೂರು ಗಲಭೆ ಕುರಿತಂತೆ ಬಿಜೆಪಿ ಸತ್ಯಶೋಧನಾ ಸಮಿತಿ ಪೊಲೀಸ್ ಗುಪ್ತಚಾರ ಇಲಾಖೆ ಕಾರಣ ಎಂದು ನೀಡಿರುವ ವರದಿಗೆ ಪ್ರತಿಕ್ರಿಯಿಸಿದ ಶಾಸಕರು, ಬಿಜೆಪಿ ನಾಯಕರೇ ಪೊಲೀಸ್ ಇಲಾಖೆ ಜವಾಬ್ದಾರಿ ವಹಿಸಿಕೊಂಡು ತನಿಖೆ ನಡೆಸಲಿ ಎಂದು ಟಾಂಗ್ ನೀಡಿದರು.
ಪೊಲೀಸರು ದಸರಾ ಬಂದೋಬಸ್ತ್ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಅವರು ಬಂದ ನಂತರ ಗಲಭೆ ವರದಿ ಸಿದ್ಧವಾಗಲಿದೆ ಎಂದು ಹೇಳಿದರು. ಬಿಜೆಪಿ ನಾಯಕರು ಅಧಿಕಾರವಿಲ್ಲದೆ ನಿರುದ್ಯೋಗಿಗಳಾಗಿದ್ದಾರೆ. ಸರ್ಕಾರದ ಯಾವುದೇ ಅಭಿವೃದ್ಧಿ ವಿಚಾರದಲ್ಲಿ ಕಡ್ಡಿ ಆಡಿಸುವುದು ಅವರ ಜಾಯಮಾನವಾಗಿದೆ ಎಂದು ಟೀಕಿಸಿದರು.ಕೇಂದ್ರ ಸರ್ಕಾರ ಜಾತಿಗಣತಿಗೂ ಮಾಹಿತಿ ಕೊಡಲ್ವಾ?;
ರಾಜ್ಯ ಸರ್ಕಾರದಿಂದ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಮಾಡಲು ಬರುವ ಅಧಿಕಾರಿಗಳಿಗೆ ನಾವು ಮಾಹಿತಿ ನೀಡಲ್ಲ ಎಂದು ಬಿಜೆಪಿ ನಾಯಕರಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಸದ ತೇಜಸ್ವಿ ಸೂರ್ಯ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ವಿವಿಧ ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದು, ಇದು ಅವರ ಉದ್ಧಟತನವನ್ನು ತೋರಿಸುತ್ತಿದೆ ಎಂದು ಕಿಡಿಕಾರಿದರು.ಕೆಲ ದಿನಗಳಲ್ಲಿ ಕೇಂದ್ರ ಸರ್ಕಾರವು ಸಹ ಜಾತಿ ಸಮೀಕ್ಷೆಗೆ ಮುಂದಾಗಿದೆ. ಆಗಲೂ ಸಹ ಬಿಜೆಪಿ ನಾಯಕರು ಮಾಹಿತಿ ನೀಡಲ್ವಾ. ಈ ರೀತಿ ಹೇಳಲು ಅವರಿಗೆ ತಾಕತ್ ಇದ್ದಿಯಾ ಎಂದು ಪ್ರಶ್ನಿಸಿದರು.
ಕೆಆರ್ ಎಸ್ ಬೃಂದಾವನದಲ್ಲಿ ಕಾವೇರಿ ಆರತಿ ನಿರಂತರವಾಗಿ ನಡೆಯಲಿದೆ. ಈ ಯೋಜನೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕನಸಿನ ಕೂಸಾಗಿದೆ. ಸಾಂಸ್ಕೃತಿಕ ನಗರ ಮೈಸೂರಿಗೆ ಬರುವ ಪ್ರವಾಸಿಗರಿಗೆ ಮತ್ತೊಂದು ಪ್ರವಾಸಿ ತಾಣವಾಗಿ ರೂಪುಗೊಳ್ಳಲಿದೆ. ಬೇರೆ ಕಡೆ ಈ ಕಾರ್ಯಕ್ರಮ ಆಯೋಜಿಸಿದ್ದರೆ ಅಷ್ಟು ಯಶಸ್ವಿಯಾಗಲ್ಲ. ಹೀಗಾಗಿ ಬೃಂದಾವನದಲ್ಲಿ ನಡೆಸಿದರೆ ಪ್ರವಾಸಿಗರ ವೀಕ್ಷಣೆ, ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರಕುತ್ತವೆ ಎಂಬ ದೃಷ್ಟಿಯಿಂದ ಕಾವೇರಿ ಆರತಿ ಆಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.ಗ್ರಾಪಂ ಮಾಜಿ ಅಧ್ಯಕ್ಷ ಮಧುಕುಮಾರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ರಾಘವ, ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆದೀಶ್, ಎನ್.ಡಿ.ಶಿವಚರಣ್ , ಕಾಂಗ್ರೆಸ್ ಮುಖಂಡ ಹೊಂಬಯ್ಯ ಸೇರಿದಂತೆ ಮತ್ತಿತರರು ಇದ್ದರು.