ಶಿವಾನಂದ ಗೊಂಬಿ

ಹುಬ್ಬಳ್ಳಿ:

ಮುಂಗಾರು ಪೂರ್ವ ಮಳೆ ಉತ್ತಮವಾದ ಹಿನ್ನೆಲೆ ಸಾಲ ಮಾಡಿ ರೈತರು ಬಿತ್ತನೆ ಮಾಡಿದ್ದರು. ಬಳಿಕ ವರುಣ ಕೃಪೆ ತೋರದ್ದರಿಂದ ಬಿತ್ತಿದ್ದ ಬೆಳೆ ನೆಲ ಬಿಟ್ಟು ಏಳುತ್ತಿಲ್ಲ. ಸಮಸ್ಯೆ ಹೇಳಿಕೊಳ್ಳಬೇಕೆಂದರೆ ರಾಜ್ಯದಲ್ಲಿ ಕೃಷಿ ಸಚಿವರೇ ಇಲ್ಲ..!

ಇದು ಅನ್ನದಾತರ ಅಳಲು. ಪ್ರತಿ ವರ್ಷವೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಇರುವ ರೈತರಿಗೆ ಈ ಬಾರಿ ಬಿತ್ತನೆ ಮಾಡುತ್ತಿದ್ದಂತೆ ಮಳೆಯ ಅಗ್ನಿಪರೀಕ್ಷೆ ಎದುರಾಗಿದೆ. ಮಳೆ ಇಲ್ಲದೆ ಕೆಲವೆಡೆ ಬೆಳೆ ಕಮರುತ್ತಿದ್ದರೆ, ಮತ್ತೊಂದೆಡೆ ಭೂಮಿಯಲ್ಲಿ ತೇವಾಂಶವಿಲ್ಲದೆ ಮೊಳಕೆಯೂ ಒಡೆದಿಲ್ಲ. ನಮ್ಮ ಸಮಸ್ಯೆ ಹೇಳಿಕೊಳ್ಳಲು ರಾಜ್ಯದಲ್ಲಿ ಕೃಷಿ ಸಚಿವರೇ ಇಲ್ಲ. ಹೀಗಾಗಿ ಅಧಿಕಾರಿಗಳು ಸಹ ಕ್ಯಾರೇ ಎನ್ನುತ್ತಿಲ್ಲ. ತಕ್ಷಣ ಕೃಷಿ ಸಚಿವರನ್ನು ನೇಮಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಅನ್ನದಾತರು ಆಗ್ರಹಿಸಿದ್ದಾರೆ.

ಮಳೆ ಮಾಯ:


ಮಾರ್ಚ್‌-ಏಪ್ರಿಲ್‌ನಲ್ಲಿ ಮುಂಗಾರು ಪೂರ್ವ ಮಳೆ ಉತ್ತಮವಾಗಿತ್ತು. ಬಳಿಕ ಮುಂಗಾರು ಆರಂಭದಲ್ಲಿ ಸುರಿದು ಮರೆಯಾಯಿತು. ಧಾರವಾಡ ಜಿಲ್ಲೆಯ 2.82 ಲಕ್ಷ ಹೆಕ್ಟೇರ್‌ ಪ್ರದೇಶದ ಪೈಕಿ 2.55 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ (ಶೇ.90) ಬಿತ್ತನೆಯಾಗಿದ್ದರೂ ಬೆಳೆ ಮಾತ್ರ ಭೂಮಿ ಬಿಟ್ಟು ಮೇಲೆಳುತ್ತಿಲ್ಲ. ಆಗಾಗ ತುಂತುರು ಮಳೆ ಸುರಿಯುತ್ತಿದೆಯಾದರೂ ಭೂಮಿಯ ದಾಹ ತೀರಿಲ್ಲ. ಒಂದೆಡೆ ಮಳೆ ಕೈಕೊಟ್ಟರೆ ಮತ್ತೊಂದೆಡೆ ಕೆರೆಯ ಅಂಗಳ ಬರದಾಗಿ ಬಿರುಕು ಬೀಡುತ್ತಿದೆ. ವರುಣನ ಕೃಪೆಗೆ ಜನರು ಕಪ್ಪೆ ಮದುವೆ, ಕತ್ತೆ ಮದುವೆ, ಪಂಚಾಕ್ಷರಿ ಜಪ ಮಾಡಿದರೂ ಕರುಣೆ ತೋರಿಲ್ಲ. ಒಂದು ವಾರದಲ್ಲಿ ಉತ್ತಮ ಮಳೆಯಾಗದೆ ಇದ್ದರೆ ರೈತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ.

ಯಾರಿಗೆ ಹೇಳೋಣ ಪ್ಲಾಬ್ಲಂ!

ಇನ್ನು ರೈತರ ಸಮಸ್ಯೆ ಕೇಳಲು, ಗೊಬ್ಬರ, ಬಿತ್ತನೆ ಬೀಜದ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಕೃಷಿ ಸಚಿವರದ್ದು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಸಂಪುಟದಲ್ಲಿ 13 ಜನ ಸಚಿವರಿದ್ದರೂ ಕೃಷಿ ಇಲಾಖೆ ಜವಾಬ್ದಾರಿ ಹೊತ್ತಿಲ್ಲ. ಈಗಲೂ ಮುಖ್ಯಮಂತ್ರಿ ಬಳಿಯೇ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಇದೆ. ಪ್ರತ್ಯೇಕ ಸಚಿವರಾದರೆ ರೈತರು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು.

ಸಂಪುಟ ವಿಸ್ತರಿಸಿ:

ತಕ್ಷಣ ಸಚಿವ ಸಂಪುಟ ವಿಸ್ತರಿಸಿ ಅಥವಾ ಈಗಿರುವ ಸಚಿವರಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಜವಾಬ್ದಾರಿ ನೀಡಿ ರಾಜ್ಯಾದ್ಯಂತ ಸಂಚರಿಸಲು ಸೂಚಿಸಿ. ಮಳೆ ಇಲ್ಲದೆ ಒಣಗಿರುವ ಹಾಗೂ ಬರ ಪರಸ್ಥಿತಿ ಪರಿಶೀಲಿಸಬೇಕು. ಬರ ಪರಿಸ್ಥಿತಿ ಅವಲೋಕಿಸಿ ತಕ್ಷಣವೇ ಪರಿಹಾರದ ಕ್ರಮಕೈಗೊಳ್ಳಬೇಕು ಎಂಬುದು ರೈತರ ಆಗ್ರಹ.

ಹೋರಾಟಕ್ಕೆ ಅಣಿ:

ಕೃಷಿ ಸಚಿವರ ನೇಮಕ ಸೇರಿದಂತೆ ರೈತರ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ರೈತ ಸಮುದಾಯ ಹೋರಾಟಕ್ಕೆ ಅಣಿಯಾಗುತ್ತಿದೆ. ಅದಕ್ಕೆ ಅವಕಾಶ ನೀಡದೇ ಸರ್ಕಾರವೇ ಮುತುವರ್ಜಿ ವಹಿಸಿ ಕೃಷಿ ಇಲಾಖೆಯ ಜವಾಬ್ದಾರಿಯನ್ನು ಈಗಿರುವ ಸಚಿವರಿಗೆ ನೀಡುವ ಮೂಲಕ ರೈತರ ಕೂಗಿಗೆ ಸ್ಪಂದಿಸಬೇಕು ಎಂಬುದು ಒಕ್ಕೊರಲಿನ ಆಗ್ರಹ.ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಬಿತ್ತಿರುವ ಬೆಳೆ ನೆಲ ಬಿಟ್ಟು ಮೇಲೇಳುತ್ತಿಲ್ಲ. ಕೆರೆ-ಕಟ್ಟೆಗಳೆಲ್ಲ ಬರಿದಾಗಿದ್ದು ನೀರಿಲ್ಲದಂತಹ ಪರಿಸ್ಥಿತಿ ಇದೆ,. ಆದರೆ ಸರ್ಕಾರದಲ್ಲಿ ಕೃಷಿ ಸಚಿವರೇ ಇಲ್ಲ. ಹೀಗಾದರೆ ನಮ್ಮ ಸಮಸ್ಯೆ ಯಾರಿಗೆ ಹೇಳೋಣ. ತಕ್ಷಣವೇ ಕೃಷಿ ಸಚಿವರನ್ನು ನೇಮಿಸಬೇಕು. ರೈತರ ಕಣ್ಣೀರು ಒರೆಸುವ ಕೆಲಸ ಮಾಡಬೇಕು.

ಪರಶುರಾಮ ಎತ್ತಿನಗುಡ್ಡ, ರೈತ ಮುಖಂಡ