ಸಾರಾಂಶ
ನನ್ನ ವಿಧಾನ ಪರಿಷತ್ ಸದಸ್ಯ ಸ್ಥಾನದ ಅನುದಾನದಲ್ಲಿ ಯಾವುದೇ ಗುತ್ತಿಗೆದಾರನಿಂದ ಬಿಡಿಗಾಸು ಕೇಳುವುದಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಗುಣಮಟ್ಟದ ಕಾಮಗಾರಿಯಷ್ಟೇ ಮುಖ್ಯ. ನಾನು ನನ್ನ ಅನುದಾನವನ್ನು ಸಮರ್ಪಕವಾಗಿ ಬಳಿಸಿಕೊಂಡು ನಿಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ನನ್ನ ವಿಧಾನ ಪರಿಷತ್ ಸದಸ್ಯ ಸ್ಥಾನದ ಅನುದಾನದಲ್ಲಿ ಯಾವುದೇ ಗುತ್ತಿಗೆದಾರನಿಂದ ಬಿಡಿಗಾಸು ಕೇಳುವುದಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಗುಣಮಟ್ಟದ ಕಾಮಗಾರಿಯಷ್ಟೇ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.ಸಮೀಪದ ಎಚ್.ಹೊಸೂರು ಗ್ರಾಮದ ಶ್ರೀಕಾಳಮ್ಮ ದೇವಾಲಯದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಾನು ಯಾವುದೇ ಕೆಲಸಕ್ಕೂ ಲಂಚ ಪಡೆಯವುದಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ ಎಂದರು.
ನಾನು ನನ್ನ ಅನುದಾನವನ್ನು ಸಮರ್ಪಕವಾಗಿ ಬಳಿಸಿಕೊಂಡು ನಿಮ್ಮ ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರಸ್ತುತ ಈ ವರ್ಷ 5 ಲಕ್ಷ ರು. ಅನುದಾನ ನೀಡಿದ್ದು, ಇನ್ನು 10 ರಿಂದ 15 ಲಕ್ಷ ರು. ಅನುದಾನ ನೀಡುವುದಾಗಿ ಭರವಸೆ ನೀಡಿದರು.ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಜನ ರಾಜಕೀಯ ಪಕ್ಷಗಳನ್ನು ನೋಡುವುದು ಕಡಿಮೆ. ಯಾವ ಜನಪ್ರತಿನಿಧಿ (ರಾಜಕೀಯ ವ್ಯಕ್ತಿ) ತಮ್ಮ ಅಧಿಕಾರವಧಿಯಲ್ಲಿ ಏನನ್ನು ಅಭಿವೃದ್ಧಿಯ ಮಾಡಿದ್ದಾರೆ. ಆತ ಶುದ್ಧ ಹಸ್ತನೇ ಎಂಬುವುದನ್ನು ಗಮನಿಸುತ್ತಾರೆ ಎಂದರು.
ನಾವು ಮಾಡುವ ಕೆಲಸ ಕಾರ್ಯಗಳು ಗ್ರಾಮಗಳಲ್ಲಿ ಸಾಕ್ಷಿ ಗುಡ್ಡೆಯಾಗಿ ರೂಪುಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರೊಂದಿಗೆ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ. ರಾಜಕೀಯ ವಿಚಾರಗಳನ್ನು ಚುನಾವಣಾ ವೇಳೆ ಬಳಸಿಕೊಳ್ಳಬೇಕು. ರಾಜಕೀಯದಲ್ಲಿ ಸ್ಥಾನಮಾನ ಗಳಿಸಲು ಹಣೆಬರಹ ಬೇಕಷ್ಟೆ. ಹಣೆ ಬರಹ ಇದ್ದರೆ ಅಧಿಕಾರ ಸಿಗುತ್ತದೆ ಎಂದರು.ಈ ವೇಳೆ ಗ್ರಾಮದ ಶ್ರೀಕಾಳಮ್ಮ ದೇವಾಲಯ ಅಭಿವೃದ್ಧಿಗೆ ನಿವೇಶನ ನೀಡಿದ ದೇವಮ್ಮ ಮರಿಸ್ವಾಮಿ ದಂಪತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಧು ಜಿ.ಮಾದೇಗೌಡ ಅವರನ್ನು ಅಭಿನಂದಿಸಿ ದೇವಾಲಯ ಅಭಿವೃದ್ಧಿಗೆ ನಿಮ್ಮ ಸಹಕಾರಕ್ಕೆ ನಾನು ನೆರವಾಗುತ್ತೆನೆ ಎಂದು ಭರವಸೆ ನೀಡಿದರು.
ಈ ವೇಳೆ ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ, ತಾಪಂ ಮಾಜಿ ಸದಸ್ಯರಾದ ಬಿ.ಗಿರೀಶ್, ಭರತೇಶ್, ಗ್ರಾಪಂ ಮಾಜಿ ಅಧ್ಯಕ್ಷ ಎಚ್. ಹೊಸುರು ಮಹೇಶ್, ಮುಖಂಡರಾದ ಆರ್. ಸಿದ್ದಪ್ಪ, ಸ್ವರೂಪ್ ಚಂದ್ರ, ಹಾಗಲಹಳ್ಳಿ ಪುಟ್ಟಸ್ವಾಮಿ, ಅನಿಲ್‌ಕುಮಾರ್, ಗ್ರಾಮದ ಯಜಮಾನರಾದ ನಾಡಗೌಡ ಬಸವರಾಜು, ಶಿವರಾಮು, ಸಿದ್ದಸ್ವಾಮಿ, ಶ್ರೀನಿವಾಸ್, ಈರೇಗೌಡ, ಕರೀಗೌಡ, ರಮೇಶ್, ರಾಜೇಂದ್ರ, ಸಿದ್ದರಾಜು ಸೇರಿದಂತೆ ಮತ್ತಿತರಿದ್ದರು.