ಸಾರಾಂಶ
ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದ ಜಾಗವನ್ನು ಒತ್ತುವರಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತಹಸೀಲ್ದಾರ್ ನೀಡಿದ ಭರವಸೆಯ ಮೇರೆಗೆ ಸೋಮವಾರದಿಂದ ಪಟ್ಟಣ ಪಂಚಾಯ್ತಿಯ ಆವರಣದಲ್ಲಿ ಆರಂಭಗೊಂಡಿದ್ದ ಅಹೋರಾತ್ರಿ ಧರಣಿ ಅಂತ್ಯವಾಯಿತು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದ ಜಾಗವನ್ನು ಒತ್ತುವರಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೇ ಒತ್ತುವರಿಯನ್ನು ತೆರವುಗೊಳಿಸುವುದಾಗಿ ತಹಸೀಲ್ದಾರ್ ನೀಡಿದ ಭರವಸೆಯ ಮೇರೆಗೆ ಸೋಮವಾರದಿಂದ ಪಟ್ಟಣ ಪಂಚಾಯ್ತಿಯ ಆವರಣದಲ್ಲಿ ಆರಂಭಗೊಂಡಿದ್ದ ಅಹೋರಾತ್ರಿ ಧರಣಿ ಅಂತ್ಯವಾಯಿತು. ಅಂಬೇಡ್ಕರ್ ಭವನದ ಜಾಗವನ್ನು ದೇವರಾಜ್ ಎಂಬುವವರು ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಾರೆಂದು ಆರೋಪಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತಾಲೂಕು ಸಂಚಾಲಕ ಬಾಣಸಂದ್ರ ಕೃಷ್ಣ ಮಾದಿಗ, ಜಿಲ್ಲಾ ಸಂಘಟಕ ಮುರುಳಿ ಕುಂದೂರು, ಬಡಾವಣೆ ಶಿವಣ್ಣ, ಸುನಿಲ್ ಸೇರಿದಂತೆ ಹಲವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೂಡಲೇ ಅಕ್ರಮವಾಗಿ ಕಟ್ಟಲಾಗಿರುವ ಕಟ್ಟಡವನ್ನು ತೆರವುಗೊಳಿಸುವಂತೆ ಆಗ್ರಹಿಸಿದರು. ಆದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕೆಲ ಕಾರಣಗಳಿಂದಾಗಿ ಕಟ್ಟಡ ತೆರವುಗೊಳಿಸಲು ಸಾಧ್ಯವಿಲ್ಲ. ಕಾಲಾವಕಾಶ ನೀಡಿ ಎಂದು ಮನವಿ ಮಾಡಿಕೊಂಡರು. ಆದರೆ ಪ್ರತಿಭಟನಾಕಾರರು ಅಕ್ರಮ ಕಟ್ಟಡವನ್ನು ಒಡೆಯುವ ತನಕ ತಮ್ಮ ಪ್ರತಿಭಟನೆ ನಡೆಸುವುದಾಗಿ ಘೋಷಿಸಿ ಅಹೋರಾತ್ರಿ ಧರಣಿ ನಡೆಸಿದರು. ರಾತ್ರಿಯೇ ತಹಸೀಲ್ದಾರ್ ಕುಂಇ ಅಹಮದ್ ರವರು ಧರಣಿ ನಿರತರೊಂದಿಗೆ ಮಾತನಾಡಿ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರಯೋಜನವಾಗಲಿಲ್ಲ. ಭರವಸೆ: ಮಂಗಳವಾರ ಪ್ರತಿಭಟನೆಯ ರೂಪ ಬದಲಾಗತೊಡಗಿತು. ಜಿಲ್ಲಾ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಸಂಚಾಲಕ ಕುಂದೂರು ತಿಮ್ಮಯ್ಯ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಹಾಗೂ ಜಿಲ್ಲೆಯ ಕೆಲವು ತಾಲೂಕಿನಿಂದಲೂ ದಲಿತ ಮುಖಂಡರು ಆಗಮಿಸಿ ಪ್ರತಿಭಟನೆಯ ಕಿಚ್ಚನ್ನು ಹೆಚ್ಚಿಸಿದರು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಪುನಃ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕುಂ ಇ ಅಹಮದ್ ರವರು ಪಟ್ಟಣ ಪಂಚಾಯ್ತಿಯ ಪ್ರಭಾರ ಅಧ್ಯಕ್ಷೆ ಭಾಗ್ಯರವರ ಅಧ್ಯಕ್ಷತೆಯಲ್ಲಿ ಎಲ್ಲಾ ಸದಸ್ಯರ ತುರ್ತು ಸಭೆ ಕರೆದು ಚರ್ಚಿಸಿದರು. ಈ ವೇಳೆ ಎಲ್ಲರೂ ಸ್ಥಳಕ್ಕೆ ತೆರಳಿ ವಾಸ್ತವಾಂಶ ಅರಿಯುವುದು ಸರಿ ಎಂದು ನಿರ್ಧರಿಸಿದರು. ಈ ವೇಳೆ ಸ್ಥಳಕ್ಕೆ ತೆರಳಿದ ಅಧಿಕಾರಿಗಳಿಗೆ ಕಟ್ಟಡ ಕಟ್ಟುವ ಸಂಬಂಧ ಕಟ್ಟಡದ ಮಾಲೀಕರಾದ ದೇವರಾಜ್ ರವರು ಪಟ್ಟಣ ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂಬುದು ತಿಳಿಯಿತು. ಅಲ್ಲದೇ ಅವರ ನಿವೇಶನದ ಅಳತೆಗಿಂತ ಹೆಚ್ಚಿನ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದು ಗೊತ್ತಾಯಿತು. ಹೀಗಾಗಿ ದೇವರಾಜ್ ರವರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸುವ ನಿರ್ಧಾರಕ್ಕೆ ಬರಲಾಯಿತು. ಅಂತ್ಯ: ಸ್ಥಳ ವೀಕ್ಷಣೆ ಮಾಡಿದ ನಂತರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಸದಸ್ಯರೊಂದಿಗೆ ಮಾತನಾಡಿದ ತಹಸೀಲ್ದಾರ್ ಕುಂಇ ಅಹಮದ್ ರವರು ಈ ಕ್ಷಣದಿಂದಲೇ ಒತ್ತುವರಿ ಮಾಡಿ ಕಟ್ಟಲಾಗಿರುವ ಕಟ್ಟಡವನ್ನು ತೆರವು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ಇದರಿಂದ ಸಮಾಧಾನಗೊಂಡ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧಿಕಾರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಂಬಿಕೆ ಇರುವುದರಿಂದ ಕೂಡಲೇ ಪ್ರತಿಭಟನೆಯನ್ನು ಅಂತ್ಯಗೊಳಿಸಿರುವುದಾಗಿ ಘೋಷಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಬಾಣಸಂದ್ರ ಕೃಷ್ಣ ಮಾದಿಗ, ಮುರುಳಿ ಕುಂದೂರು, ಜಿಲ್ಲಾ ಸಂಘಟನಾ ಸಂಚಾಲಕ ಕೆ.ಎಚ್.ರಂಗನಾಥ್ ಕಂಠಲಗೆರೆ, ಎರೆಕಟ್ಟೆ ರಮೇಶ್, ಇರ್ಫಾನ್, ಬಡಾವಣೆ ಶಿವರಾಜ್, ಕುಣಿಕೇನಹಳ್ಳಿ ಜಗದೀಶ್, ಮಾಯಸಂದ್ರ ಸುಬ್ರಹ್ಮಣ್ಯ, ಡೊಂಕಿಹಳ್ಳಿ ರಾಮಯ್ಯ, ಬೀಚನಹಳ್ಳಿ ರಾಮಣ್ಣ, ಸುನಿಲ್, ಆಕಾಶ್, ಕೀರ್ತಿ, ಅಮ್ಮಸಂದ್ರ ರೋಹಿತ್, ಭೋವಿ ಸಮಾಜದ ಅಧ್ಯಕ್ಷ ಮಹಲಿಂಗಯ್ಯ, ಪ್ರಸಾದ್, ಜಗದೀಶ್ (ರಾಯ), ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.