ಸಾರಾಂಶ
- ಸಣ್ಣಪುಟ್ಟ ಗೊಂದಲ ಬಗೆಹರಿಸಿ ಸಮೀಕ್ಷೆ ನಡೆಸಲು ನಿರ್ಧಾರ- ಸಮೀಕ್ಷೆ ಬಗ್ಗೆ ಅಧಿಕೃತ ಆದೇಶವನ್ನೂ ಹೊರಡಿಸಿದ ಸರ್ಕಾರ
===ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಸಂಪುಟ ಸಚಿವರು ಸೇರಿ ಪ್ರಮುಖ ಜಾತಿಗಳ ವಿರೋಧ, ಕ್ರಿಶ್ಚಿಯನ್ ಹೆಸರಿನ ಹಿಂದೂ ಜಾತಿಗಳ ಸೃಷ್ಟಿಯಿಂದ ಉಂಟಾದ ಗೊಂದಲಗಳ ನಡುವೆಯೂ ಪೂರ್ವ ನಿಗದಿಯಂತೆ ಸೆ.22ರಿಂದ ಅ.7ರವರೆಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ನಡೆಸಲು ಸರ್ಕಾರ ಅಂತಿಮ ನಿರ್ಧಾರ ಮಾಡಿದೆ.ಗುರುವಾರ ನಡೆದ ಸರಣಿ ಸಭೆಗಳಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಈ ವೇಳೆ ಯಾವುದೇ ಕಾರಣಕ್ಕೂ ಸಮೀಕ್ಷೆ ದಿನಾಂಕ ಮುಂದೂಡುವುದು ಬೇಡ. ಸರ್ಕಾರ ಇಟ್ಟ ಹೆಜ್ಜೆ ಹಿಂಪಡೆದರೆ ಗೊಂದಲಗಳು ಮತ್ತಷ್ಟು ಹೆಚ್ಚಾಗಲಿವೆ. ಹೀಗಾಗಿ ಸಣ್ಣಪುಟ್ಟ ಗೊಂದಲ ಬಗೆಹರಿಸಿ ನಿಗದಿತ ದಿನಾಂಕದಿಂದಲೇ ಸಮೀಕ್ಷೆಗೆ ಚಾಲನೆ ನೀಡಬೇಕು ಎಂದು ನಿರ್ಧರಿಸಲಾಯಿತು.
ಬೆನ್ನಲ್ಲೇ ಸಂಜೆಯೇ ಸಮೀಕ್ಷೆ ದಿನಾಂಕದ ಕುರಿತು ಅಧಿಕೃತ ಸರ್ಕಾರ ಆದೇಶವನ್ನೂ ಹೊರಡಿಸುವ ಮೂಲಕ ಸಮೀಕ್ಷೆ ಆರಂಭದ ಕುರಿತ ಎಲ್ಲಾ ಗೊಂದಲಗಳಿಗೆ ಸರ್ಕಾರ ತೆರೆ ಎಳೆಯಿತು.ನಾಡಿದ್ದಿನಿಂದಲೇ ಮನೆಗೆ ಗಣತಿದಾರರ ಭೇಟಿ:
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಂತೆ ರಾಜ್ಯ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಸೆ.22ರಿಂದ ಅ.7ರವರೆಗೆ ಜಾತಿ ಗಣತಿ ನಡೆಸಲಿದೆ. ಹೀಗಾಗಿ ಸೋಮವಾರದಿಂದ ಮನೆ-ಮನೆಗೆ ಗಣತಿದಾರರು ಬರಲಿದ್ದಾರೆ.ಪ್ರತಿಯೊಬ್ಬರು ಈ ಮೊದಲೇ ಕೈಸೇರಿರುವ ಮಾದರಿ ಪ್ರಶ್ನಾವಳಿಗಳ ನೆರವಿನೊಂದಿಗೆ ಗಣತಿದಾರರ ಎಲ್ಲ 50-60 ಪ್ರಶ್ನೆಗಳಿಗೆ ಪೂರಕ ಮಾಹಿತಿ ಒದಗಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೂಚಿಸಿದೆ.
ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಪಂ ಕಾರ್ಯನಿರ್ವಹಣಾಧಿಕಾರಿಗಳು ಈಗಾಗಲೇ ಸಮೀಕ್ಷಾದಾರರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಗತ್ಯ ತರಬೇತಿ ನೀಡಿದ್ದಾರೆ. ಸಾರ್ವಜನಿಕರಿಗೂ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಇದರೊಂದಿಗೆ ಗಣತಿದಾರರು ಏಕ ಕಾಲದಲ್ಲಿ ಮನೆ-ಮನೆ ಭೇಟಿ ನೀಡಲಿದ್ದಾರೆ ಎಂದು ಸರ್ಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ.ಪರ-ವಿರೋಧದ ನಡುವೆಯೂ ಸಿಎಂ ಪಟ್ಟು:
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರೇ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಹಿರಿಯ ಸಚಿವರ ಸಭೆಯಲ್ಲೂ ಭಿನ್ನಾಭಿಪ್ರಾಯ ಮುಂದುವರೆದಿತ್ತು. ಗುರುವಾರ ತಡರಾತ್ರಿವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರೂ ಚರ್ಚೆ ಅಪೂರ್ಣವಾಯಿತು.ಹಲವು ಸಚಿವರು ಸಮೀಕ್ಷೆಯಿಂದ ಸರ್ಕಾರಕ್ಕೆ ಕಂಟಕ ಎಂದು ಹೇಳಲು ಯತ್ನಿಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದು ಕಾಂಗ್ರೆಸ್ ಸರ್ಕಾರದ ವಾಗ್ದಾನ. ಹೈಕಮಾಂಡ್ ಕೂಡ ಇದೇ ಮಾತು ನೀಡಿತ್ತು. ಹೀಗಾಗಿ ಗೊಂದಲ ಬಗೆಹರಿಸಿಕೊಂಡು ಸಮೀಕ್ಷೆ ಮಾಡಲೇಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಬಳಿಕ ಹೈಕಮಾಂಡ್ ಪ್ರತಿನಿಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಂದು ಸುತ್ತಿನ ಮಾತುಕತೆ ನಡೆಸಿದರು. ನಂತರ ಸಂಜೆ ವೇಳೆಗೆ ಅಧಿಕೃತ ಆದೇಶ ಹೊರಡಿಸಲಾಯಿತು.ಮುಂದುವರೆದ ಜಾತಿ, ಧರ್ಮಗಳ ಗೊಂದಲ:
ಧರ್ಮದ ಕಾಲಂನಲ್ಲಿ ಲಿಂಗಾಯತ, ವೀರಶೈವ ಲಿಂಗಾಯತ ಆಯ್ಕೆಯಿಲ್ಲ. ಇದರಿಂದ ಲಿಂಗಾಯತರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂಬ ವಾದಕ್ಕೆ ಸರ್ಕಾರ ಮನ್ನಣೆ ನೀಡಿಲ್ಲ. ಧರ್ಮದ ಕಾಲಂನಲ್ಲಿ ಇತರೆ ಎಂಬ ಆಯ್ಕೆ ನೀಡಲಾಗಿದೆ. ಅಲ್ಲೇ ಅವರು ಅನುಸರಿಸುವ ಧರ್ಮದ ಹೆಸರು ನೀಡಬೇಕು ಎಂದು ಸ್ಪಷ್ಟಪಡಿಸಿದೆ.ಇನ್ನು ಲಿಂಗಾಯತ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂಬ ಜಾತಿಗಳ ಹೆಸರು ಕಾಂತರಾಜ್ ಅಧ್ಯಕ್ಷತೆಯಲ್ಲಿ ಆಯೋಗ ನಡೆಸಿದ ಸಮೀಕ್ಷೆಯಲ್ಲೂ ಪ್ರಸ್ತಾಪವಾಗಿತ್ತು. ಆಗ ಇಲ್ಲದ ಗೊಂದಲ ಈಗ ಯಾಕೆ? ದುರುದ್ದೇಶಪೂರ್ವಕವಾಗಿ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸುತ್ತಿವೆ. ಹೀಗಾಗಿ ಯಾವುದೇ ಬದಲಾವಣೆ ಬೇಡ ಎಂಬ ತೀರ್ಮಾನಕ್ಕೆ ಸರ್ಕಾರ ಬಂದಿದೆ ಎನ್ನಲಾಗಿದೆ. ಹೀಗಾಗಿ ಈ ಎರಡೂ ಗೊಂದಲಗಳು ಮುಂದುವರೆಯಲಿವೆ. -ಪ್ರತ್ಯೇಕ ಬಾಕ್ಸ್-
ಸಮೀಕ್ಷೆ ಮುಂದೂಡುವುದಿಲ್ಲ,ಸೆ.22 ರಿಂದಲೇ ಶುರು: ಸಿಎಂ
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಿಗದಿಯಂತೆ ಸೆ.22ರಿಂದ ಪ್ರಾರಂಭವಾಗಲಿದೆ. ಸಮೀಕ್ಷೆಯನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ. ಪ್ರತಿಪಕ್ಷಗಳು ಈ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇದನ್ನು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಎಲ್ಲಾ ಸಚಿವರಿಗೆ ಸೂಚಿಸಲಾಗಿದೆ ಎಂದು ಹೇಳಿದರು.---
ಹಿಂದುಳಿದ ವರ್ಗಗಳ ಆಯೋಗ ಶಾಸನಬದ್ಧ ಸಂಸ್ಥೆಯಾಗಿದೆ. ಆಯೋಗಕ್ಕೆ ಯಾವುದೇ ನಿರ್ದೇಶನಗಳನ್ನು ನೀಡಲು ಸಾಧ್ಯವಿಲ್ಲ. ಸಮೀಕ್ಷೆಯ ಬಗ್ಗೆ ಅಭಿಪ್ರಾಯಗಳನ್ನು ಆಯೋಗಕ್ಕೆ ವಿವರಿಸಲಾಗಿದ್ದು, ಅಂತಿಮ ನಿರ್ಧಾರ ಆಯೋಗವೇ ಕೈಗೊಳ್ಳಲಿದೆ.- ಸಿದ್ದರಾಮಯ್ಯ, ಮುಖ್ಯಮಂತ್ರಿ-----
ಜಾತಿಗಳ ಕಾಲಂನಲ್ಲಿರುವಜಾತಿ ಸಂಖ್ಯೆ 1,561ಕ್ಕೇರಿಕೆಈ ಮೊದಲು ಜಾತಿ ಕಾಲಂನಲ್ಲಿ 1,351 ಇದ್ದವು. ಈಗ ಅವುಗಳ ಸಂಖ್ಯೆ 1,561ಕ್ಕೆ ಏರಿಕೆಯಾಗಿದೆ. ಹೆಚ್ಚುವರಿ ಸೇರ್ಪಡೆಯಾಗಿರುವ ಜಾತಿಗಳಲ್ಲಿ ಬಹುತೇಕ ಮತಾಂತರಗೊಂಡ ಕುಟುಂಬ ಅಥವಾ ವ್ಯಕ್ತಿಗಳ ಜಾತಿಗಳನ್ನು ಉಲ್ಲೇಖಿಸಲು ಸೃಷ್ಟಿಸಿದಂತವುಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಹೊಸ ಜಾತಿಗಳ ಸೃಷ್ಟಿ ವಿಚಾರದಲ್ಲಿ ಉಂಟಾದ ಗೊಂದಲ ನಿವಾರಣೆಗೆ ಸಂಬಂಧಿಸಿ ಸಿಎಂ-ಡಿಸಿಎಂ ಮತ್ತೆ ಸಭೆ ನಡೆಸಲಿದ್ದು, ಮುಂದಿನ ಎರಡು ದಿನಗಳಲ್ಲಿ ಸೂಕ್ತ ನಿರ್ಣಯದೊಂದಿಗೆ ತೆರೆಎಳೆಯುವ ಸಾಧ್ಯತೆ ಇದೆ.
-------46 ಜಾತಿ ಜತೆ ಕ್ರಿಶ್ಚಿಯನ್‌ನಂಟು ಈಗಲೂ ಕಗ್ಗಂಟು---- ಕೈಬಿಡಲು ಸಿಎಂ ಸೂಚಿಸಿದರೂ ಒಪ್ಪದ ಆಯೋಗ- ನಾವು ಸೇರಿಸಿಲ್ಲ, ಹಿಂದೆಯೂ ಇತ್ತು ಎಂದು ವಾದ- ಗಣತಿ ನಮೂನೆಯಲ್ಲಿ ಕ್ರಿಶ್ಚಿಯನ್ ಜಾತಿ ಇರುತ್ತಾ?
---ಕನ್ನಡಪ್ರಭ ವಾರ್ತೆ ಬೆಂಗಳೂರುಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಹೀಗೆ 46 ಜಾತಿಗಳನ್ನು ಕ್ರಿಶ್ಚಿಯನ್ ಜತೆ ತಳಕುಹಾಕಿ ಸಿದ್ಧಪಡಿಸಿದ್ದ ಜಾತಿಗಳ ಪಟ್ಟಿಯನ್ನು ಕೈಬಿಡಬೇಕೇ ಅಥವಾ ಮುಂದುವರೆಸಬೇಕೇ ಎಂಬ ಕುರಿತು ಸರ್ಕಾರ ಹಾಗೂ ಹಿಂದುಳಿದ ವರ್ಗಗಳ ಆಯೋಗದ ನಡುವೆ ಒಮ್ಮತ ಅಭಿಪ್ರಾಯ ಮೂಡಿಲ್ಲ.ಹೀಗಾಗಿ ಸಮೀಕ್ಷೆಯ ವಿವಾದದ ಕೇಂದ್ರಬಿಂದುವಾಗಿರುವ ಕ್ರಿಶ್ಚಿಯನ್ ಹೆಸರಿನ ಜಾತಿಗಳ ಪಟ್ಟಿ ಸಮೀಕ್ಷೆ ನಮೂನೆಯಲ್ಲಿ ಮುಂದುವರೆಯಲಿದೆ.
ಸಮೀಕ್ಷಾ ನಮೂನೆಯಿಂದ 46 ಜಾತಿಗಳನ್ನೂ ಕೈಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸೂಚಿಸಿದರೂ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರು ಒಪ್ಪುತ್ತಿಲ್ಲ. ಈ ಪಟ್ಟಿ ಹಿಂದಿನ ಕಾಂತರಾಜ ಆಯೋಗದಲ್ಲೂ ಇತ್ತು. ಇದು ನಾವು ಸೇರಿಸಿದ್ದಲ್ಲ. ಹೀಗಾಗಿ ನಾವು ಕೈಬಿಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.ಹೀಗಾಗಿ ಸಮೀಕ್ಷೆ ನಮೂನೆಯಲ್ಲಿ 46 ಕ್ರಿಶ್ಚಿಯನ್ ಜಾತಿಗಳ ಪಟ್ಟಿ ಇರಲಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಗೊಂದಲ ಮುಂದುವರೆದಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಅಂಶದ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.ಈ ವೇಳೆ 46 ಕ್ರಿಶ್ಚಿಯನ್ ಹೆಸರಿನ ಜಾತಿಗಳನ್ನು ಸಮೀಕ್ಷೆ ನಮೂನೆಯಿಂದ ಕೈಬಿಡಿ. ಒಂದು ವೇಳೆ ಮತಾಂತರಗೊಂಡಿರುವವರು ಮೂಲ ಜಾತಿ ಹೆಸರು ನಮೂದಿಸಬೇಕಿದ್ದರೆ ಇತರೆ ಕಾಲಂನಲ್ಲಿ ತಮ್ಮ ಜಾತಿ ನಮೂದಿಸಲಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು. ಆದರೆ ಕಾನೂನಿನ ಕಾರಣ ನೀಡಿ ಆಯೋಗದ ಅಧ್ಯಕ್ಷರು ಒಪ್ಪಿಗೆ ನೀಡಿಲ್ಲ. ಆಯೋಗವು ಸ್ವಾಯತ್ತ ಸಂಸ್ಥೆಯಾಗಿರುವುದರಿಂದ ಸರ್ಕಾರ ತನ್ನ ನಿಲುವನ್ನು ಹೇರಲು ಸಾಧ್ಯವಿಲ್ಲ. ಹೀಗಾಗಿ ಗೊಂದಲ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.ಏನಿದು ವಿವಾದ?:
ಸೆ.22 ರಿಂದ ಶುರುವಾಗಲಿರುವ ಸಮೀಕ್ಷೆಯಲ್ಲಿ ಸಾರ್ವಜನಿಕರು ತಮ್ಮ ಜಾತಿ ನಮೂದಿಸಲು ಅನುವಾಗುವಂತೆ ಜಾತಿ, ಉಪಜಾತಿ ಹಾಗೂ ಧರ್ಮಗಳ ಪಟ್ಟಿಯನ್ನು ಹಿಂದುಳಿದ ವರ್ಗಗಳ ಆಯೋಗ ಬಿಡುಗಡೆ ಮಾಡಿತ್ತು. ಈ ವೇಳೆ ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್ ಸೇರಿ 46 ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಜತೆ ಸೇರಿಸಿ ಪಟ್ಟಿ ಮಾಡಲಾಗಿತ್ತು.ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಕೈಬಿಡುವ ಕುರಿತು ಚರ್ಚೆ ನಡೆಸಲಾಯಿತಾದರೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ.---46 ಜಾತಿಗಳ ಪಟ್ಟಿ ಯಾವುದು?ಲಿಂಗಾಯತ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ವಿಶ್ವಕರ್ಮ ಕ್ರಿಶ್ಚಿಯನ್, ಈಡಿಗ ಕ್ರಿಶ್ಚಿಯನ್, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್, ವಾಲ್ಮೀಕಿ ಕ್ರಿಶ್ಚಿಯನ್, ಆದಿ ಆಂಧ್ರ ಕ್ರಿಶ್ಚಿಯನ್, ಆದಿ ದ್ರಾವಿಡ ಕ್ರಿಶ್ಚಿಯನ್, ಆದಿ ಕರ್ನಾಟಕ ಕ್ರಿಶ್ಚಿಯನ್, ಅಕ್ಕಸಾಲಿಗ ಕ್ರಿಶ್ಚಿಯನ್, ಬಣಜಿಗ ಕ್ರಿಶ್ಚಿಯನ್, ಬಂಜಾರ ಕ್ರಿಶ್ಚಿಯನ್, ಬಾರಿಕಾರ್ ಕ್ರಿಶ್ಚಿಯನ್, ಬೆಸ್ತರು ಕ್ರಿಶ್ಚಿಯನ್, ಬಿಲ್ಲವ ಕ್ರಿಶ್ಚಿಯನ್, ಬುಡುಗ ಜಂಗಮ ಕ್ರಿಶ್ಚಿಯನ್, ಚರೋಡಿ ಕ್ರಿಶ್ಚಿಯನ್, ದೇವಾಂಗ ಕ್ರಿಶ್ಚಿಯನ್, ಗೊಲ್ಲ ಕ್ರಿಶ್ಚಿಯನ್, ಗೌಡಿ ಕ್ರಿಶ್ಚಿಯನ್, ಹೊಲೆಯ ಕ್ರಿಶ್ಚಿಯನ್, ಜಲಗಾರ ಕ್ರಿಶ್ಚಿಯನ್, ಜಾಡರ್ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್, ಕಮ್ಮ ಕ್ರಿಶ್ಚಿಯನ್, ಕಮ್ಮ ನಾಯ್ಡು ಕ್ರಿಶ್ಚಿಯನ್, ಲಮಾಣಿ ಕ್ರಿಶ್ಚಿಯನ್, ಲಂಬಾಣಿ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಮಹಾರ್ ಕ್ರಿಶ್ಚಿಯನ್, ಮಾಲ ಕ್ರಿಶ್ಚಿಯನ್, ಮಾಂಗ ಕ್ರಿಶ್ಚಿಯನ್, ಮೊದಲಿಯಾರ್ ಕ್ರಿಶ್ಚಿಯನ್, ನಾಡರ್ ಕ್ರಿಶ್ಚಿಯನ್, ನೇಕಾರ ಕ್ರಿಶ್ಚಿಯನ್, ಪಡಯಾಚಿ ಕ್ರಿಶ್ಚಿಯನ್, ಪರಯ ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್, ಸೆಟ್ಟಿ ಬಲಿಜ ಕ್ರಿಶ್ಚಿಯನ್, ಸಿದ್ಧಿ ಕ್ರಿಶ್ಚಿಯನ್, ಸುದ್ರಿ ಕ್ರಿಶ್ಚಿಯನ್, ತಿಗಳ/ಥಿಗಳ ಕ್ರಿಶ್ಚಿಯನ್, ತುಳು ಕ್ರಿಶ್ಚಿಯನ್, ವೈಶ್ಯ/ಶೆಟ್ರು ಕ್ರಿಶ್ಚಿಯನ್, ವೊಡ್ಡ ಕ್ರಿಶ್ಚಿಯನ್.