ಇಷ್ಟೊತ್ತಿಗಾಗಲೇ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕಾಗಿತ್ತು. ಆದರೆ ಇನ್ನೂ ಏಕೆ ಆರಂಭಿಸಿಲ್ಲ ಎಂದರೆ ಅದರ ಖಜಾನೆ ಖಾಲಿಯಾಗಿದೆ. ಹೀಗಾಗಿ ಕೇಂದ್ರ ತೆರೆಯಲು ಹಿಂದೇಟು ಹಾಕುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.

ಲಕ್ಷ್ಮೇಶ್ವರ: ರಾಜ್ಯ ಸರ್ಕಾರದ ಚರ್ಮ ದಪ್ಪ ಇದೆ. ಅದಕ್ಕೆ ರೈತರ ಹೋರಾಟದ ಅರಿವಿಲ್ಲ. ಕಾರಣ ಮತ್ತೆ ಅಮರಣಾಂತ ಉಪವಾಸ ಮಾಡಬೇಡಿ ಎಂದು ಮಾಜಿ ಸಿಎಂ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಆಮರಣ ಉಪವಾಸ ಸತ್ಯಾಗ್ರಹ ನಡೆಸಲು ಉದ್ದೇಶಿಸಿರುವ ಆದರಳ್ಳಿಯ ಗವಿಮಠದ ಡಾ. ಕುಮಾರ ಮಹಾರಾಜರಲ್ಲಿ ಮನವಿ ಮಾಡಿದರು.ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕಾಗಿ ಕಳೆದ ಹದಿನಾಲ್ಕು ದಿನಗಳಿಂದ ರೈತರು ಪಟ್ಟಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ವೇದಿಕೆಯಲ್ಲಿ ಶುಕ್ರವಾರ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ ವಿಜಯೋತ್ಸವ ಹಾಗೂ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಂಟ್ಹತ್ತು ದಿನ ಕಳೆದರೂ ಇನ್ನೂ ಕೇಂದ್ರ ಆರಂಭಿಸಿಲ್ಲ. ಇಷ್ಟೊತ್ತಿಗಾಗಲೇ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯಬೇಕಾಗಿತ್ತು. ಆದರೆ ಇನ್ನೂ ಏಕೆ ಆರಂಭಿಸಿಲ್ಲ ಎಂದರೆ ಅದರ ಖಜಾನೆ ಖಾಲಿಯಾಗಿದೆ. ಹೀಗಾಗಿ ಕೇಂದ್ರ ತೆರೆಯಲು ಹಿಂದೇಟು ಹಾಕುತ್ತಿದೆ ಎಂದು ಕುಟುಕಿದರು.ಸಾನ್ನಿಧ್ಯ ವಹಿಸಿದ್ದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿದರು. ಆದರಹಳ್ಳಿಯ ಕುಮಾರ ಮಹಾರಾಜರು, ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ, ಕುಂದಗೋಳ ಕಲ್ಯಾಣಪುರದ ಬಸವಣ್ಣಜ್ಜನವರು ಹಾಗೂ ಗಂಗಯ್ಯ ದೇವರು, ಹತ್ತಿಮತ್ತೂರಿನ ನಿಜಗುಣಾನಂದ ಸ್ವಾಮೀಜಿ, ಶಿವಕುಮಾರಪುರದ ಇಮ್ಮಡಿ ಮಹಾಂತ ಸ್ವಾಮೀಜಿ, ಹೋರಾಟದ ನೇತೃತ್ವ ವಹಿಸಿರುವ ಮಂಜುನಾಥ ಮಾಗಡಿ, ನಾಗರಾಜ ಚಿಂಚಲಿ, ಎಂ.ಎಸ್. ದೊಡ್ಡಗೌಡ್ರ, ರವಿಕಾಂತ ಅಂಗಡಿ, ಮಹೇಶ ಹೊಗೆಸೊಪ್ಪಿನ ಮಾತನಾಡಿದರು.

ಸೋಮನಗೌಡ ಮಾಲಿಪಾಟೀಲ, ಈರಣ್ಣ ಕರಿಬಿಷ್ಠಿ, ಪೂರ್ಣಾಜಿ ಖರಾಟೆ, ಸೋಮಣ್ಣ ಡಾಣಗಲ್ಲ, ಸಣ್ಣವೀರಪ್ಪ ಹಳ್ಳೆಪ್ಪನವರ, ಮಲ್ಲಿಕಾರ್ಜುನ ನೀರಾಲೋಟಿ, ದಾದಾಪೀರ ಮುಚ್ಛಾಲೆ, ಪರಮೇಶ ನಾಯ್ಕ, ಮಂಜುನಾಥ ಮುಳಗುಂದ, ಟಾಕಪ್ಪ ಸಾತಪುತೆ, ಡಿ.ವೈ. ಹುನಗುಂದ, ವಸಂತಾ ಹುಲ್ಲತ್ತಿ, ಮಾಲಾದೇವಿ ದಂಧರಗಿ, ಸುಜಾತಾ ದೊಡ್ಡಮನಿ, ಮಲ್ಲಪ್ಪ ಬಸಾಪೂರ, ನೀಲಪ್ಪ ಶೆರಸೂರಿ, ಶರಣು ಗೋಡಿ, ಹೊನ್ನಪ್ಪ ವಡ್ಡರ, ಮಲ್ಲೇಶಪ್ಪ ವಡ್ಡರ, ಬಸವರಾಜ ಹಿರೇಮನಿ, ಭರಮಪ್ಪ ಶೆರಸೂರಿ ಇದ್ದರು.