ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಮಹಾತ್ಮಗಾಂಧೀಜಿಯವರ ಜನ್ಮದಿನದ ಕಾರಣ ಮಹಾಲಯ ಅಮವಾಸ್ಯೆ ದಿನದಂದು ಮಾಂಸ ಮಾರಾಟ ಮಾಡುವಂತಿಲ್ಲ ಎಂಬ ನಿಯಮವಿದೆ. ಪೂಜ್ಯರ ಗೌರವಾರ್ಥ ಆ ನಿಯಮವನ್ನು ಪಾಲಿಸಬೇಕಾದ್ದು ನಮ್ಮ ಜವಾಬ್ದಾರಿ ಜತೆಗೆ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಅಕ್ಟೋಬರ್ ೨ರಂದು ಪುರಸಭೆ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ, ನಿಯಮ ಉಲಂಘನೆಯಾದಲ್ಲಿ ಕಾನೂನು ರೀತಿ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳುತ್ತಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಎಚ್ಚರಿಸಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಆಯೋಜನೆ ಮಾಡಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಡಜನರ ಮನೆ ನಿರ್ಮಾಣಕ್ಕೆ ನೀಡುವ ೧.೨೦ ಲಕ್ಷ ರು.ಗಳಲ್ಲಿ ಮನೆ ನಿರ್ಮಾಣ ಸಾಧ್ಯವಿಲ್ಲ, ಆದ್ದರಿಂದ ಮಹಾತ್ಮ ಗಾಂಧೀಜಿಯವರ ಜನ್ಮದಿನದಂದು ೫ ಲಕ್ಷ ರು.ಗಳಿಗೆ ಏರಿಕೆ ಮಾಡಿ, ಘೋಷಣೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು.ಪಟ್ಟಣದ ಕನಕ ಭವನ ವೃತ್ತದಿಂದ ಡಾ. ಅಂಬೇಡ್ಕರ್ ವೃತ್ತದ ಮೂಲಕ ರೈಲ್ವೆ ಅಂಡರ್‌ಪಾಸ್ ತನಕ ಸಾಗುವ ರಸ್ತೆಯ ಅಭಿವೃದ್ಧಿಗೆ ಹಣ ಮಂಜೂರಾಗಿದೆ ಮತ್ತು ನಾಗರೀಕರ ಆಸ್ತಿಗೆ ಧಕ್ಕೆ ಮಾಡದೇ ಪುರಸಭೆಯ ಒತ್ತುವರಿ ಜಾಗ ತೆರವುಗೊಳಿಸಿ ರಸ್ತೆ ನಿರ್ಮಾಣ ಕೈಗೊಳ್ಳಲಾಗುತ್ತದೆ ಮತ್ತು ನಾಗರೀಕರಲ್ಲಿ ಆತಂಕ ಬೇಡವೆಂದರು. ಮಹಾತ್ಮಗಾಂಧಿ ವೃತ್ತದಿಂದ ಕೋಟೆಗೆ ತೆರಳುವ ರಸ್ತೆ ಬದಿಯಲ್ಲಿ ಹತ್ತಾರು ತಳ್ಳುಗಾಡಿಗಳ ಅಂಗಡಿಗಳಿಂದ ವಾಹನ ಸಂಚಾರಕ್ಕೆ ಬಹಳ ತೊಂದರೆಯಾಗಿದೆ. ಆದ್ದರಿಂದ ಅವರುಗಳಿಗೆ ಮಾರುಕಟ್ಟೆ ಒಳಗೆ ತೆರಳಿ, ವ್ಯಾಪಾರ ಮಾಡಲು ತಿಳಿಸಿ, ನಂತರ ಕ್ರಮಕೈಗೊಳ್ಳಿ ಎಂದರು.
ಈಗಾಗಲೇ ಡಾ. ಅಂಬೇಡ್ಕರ್ ಸಮುದಾಯ ಭವನ ಹಾಗೂ ಮುಸ್ಲೀಮರಿಗೆ ಸಮುದಾಯ ಭವನದ ಉದ್ಘಾಟನೆ ಮಾಡಲಾಗಿದೆ ಮತ್ತು ಡಾ. ಬಾಬು ಜಗಜೀವನ್‌ರಾಮ್ ಭವನಕ್ಕೆ ೨ ಕೋಟಿ ಹಣ ಮಂಜೂರಾಗಿದ್ದು, ಕಾಮಗಾರಿ ಪ್ರಾರಂಭವಾಗಲಿದೆ ಹಾಗೂ ನಾಯಕ ಜನಾಂಗದ ಸಮುದಾಯ ಭವನ ನಿರ್ಮಾಣವಾಗುತ್ತಿದೆ ಎಂದರು. ಪುರಸಬಾ ಸದಸ್ಯರು ಪುರಸಭಾಧ್ಯಕ್ಷರ ಜತೆಗೆ ತಿಂಗಳಿಗೆ ಒಮ್ಮೆ ಅವರುಗಳ ವಾರ್ಡಿಗೆ ತೆರಳಿ ನಾಗರಿಕರ ಖಾತೆ ಅಥವಾ ಪುರಸಭೆಯ ಸಮಸ್ಯೆಗಳು ಇದ್ದರೆ ಬಗೆಹರಿಸಲು ಕ್ರಮಕೈಗೊಳ್ಳಿ ಎಂದು ತಿಳಿಸಿದರು. ನೂತನ ಪುರಸಭಾಧ್ಯಕ್ಷ ಕೆ.ಶ್ರೀಧರ್ ಅವರು ಪ್ರತಿ ದಿನ ಬೆಳಗ್ಗೆ ವಾರ್ಡ್‌ಗಳ ಭೇಟಿ ಮಾಡಿ, ಜನರ ಸಮಸ್ಯೆ ಆಲಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ, ಅವರ ಕಾರ್ಯ ಶ್ಲಾಘನೀಯ ಮತ್ತು ಶ್ರೀಧರ್ ಅವರು ಪ್ರತಿ ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ೨ ಗಂಟೆ ಕಚೇರಿಯಲ್ಲಿ ಕುಳಿತು ಜನರ ಕೆಲಸಕ್ಕೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ನಗರ ಪೊಲೀಸ್ ಠಾಣೆ ಪಿಎಸ್ಸೈ ಅಭಿಜಿತ್‌ಗೆ ಆಕ್ಟೋಬರ್ ೨ರಂದು ತಾಲೂಕಿನಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ, ಮಾರಾಟ ಮಾಡುವವರ ವಿರುದ್ಧ ಕ್ರಮಕೈಗೊಳ್ಳಿ ಮತ್ತು ರಸ್ತೆ ಬದಿ ವ್ಯಾಪಾರಿಗಳನ್ನು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ತೆರಳುವಂತೆ ತಿಳಿಸಿ ಮತ್ತು ಅಗತ್ಯ ಕ್ರಮಕೈಗೊಂಡು ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು. ಪುರಸಭಾಧ್ಯಕ್ಷ ಕೆ.ಶ್ರೀಧರ್, ಮುಖ್ಯಾಧಿಕಾರಿ ಸಿ.ಡಿ.ನಾಗೇಂದ್ರ ಕುಮಾರ್, ಪುರಸಭೆ ಸದಸ್ಯರಾದ ಎ.ಜಗನ್ನಾಥ್, ಕುಮಾರಸ್ವಾಮಿ, ಶಿವಣ್ಣ, ನಿಂಗಯ್ಯ, ಸೈಯದ್ ವಾಸಿಂ ಹಾಗೂ ಎಚ್.ಡಿ.ಉಮೇಶ್, ಪುರಸಭೆ ಸಿಇಒ ಪಂಕಜಾ, ಪರಿಸರ ಇಂಜಿನಿಯರ್ ರುಚಿದರ್ಶಿನಿ, ಆರೋಗ್ಯಾಧಿಕಾರಿ ವಸಂತ್ ಕುಮಾರ್, ವರ್ತಕರಾದ ಶೇಖರ್, ಭೋಜೇಗೌಡ, ಕೋಳಿ ಕುಮಾರ್, ಇತರರು ಇದ್ದರು.