ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಮೂಲ ಸಂಪ್ರದಾಯ ಮತ್ತು ಸಂಸ್ಕೃತಿಗೆ ಯಾರು ಕೂಡ ಧಕ್ಕೆ ತರಬಾರದು. ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಪ್ರತಿಯೊಬ್ಬರೂ ಸಾಗಬೇಕು. ವೃತ್ತಿ ಧರ್ಮ ಮತ್ತು ದೇವರನ್ನು ನಂಬಿದರೆ ಎಂದೂ ಕೂಡ ಕೆಡಕಾಗುವುದಿಲ್ಲ ಎಂದು ಕುರುಬ ಸಮುದಾಯದ ಶ್ರೀನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ ನಡೆಯುತ್ತಿರುವ ಶ್ರೀಹುಚ್ಚಪ್ಪಸ್ವಾಮಿ ಮತ್ತು 14ಕೂಟದ ದೇವರುಗಳ ಜಾತ್ರಾ ಮಹೋತ್ಸವದ ಮೂರನೇ ದಿನದ ಪೂಜೆಯಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಗಳು, 39 ವರ್ಷಗಳ ನಂತರ ನಡೆಯುತ್ತಿರುವ ಈ ಜಾತ್ರಾ ಮಹೋತ್ಸವ ಎಲ್ಲಾ ಭಕ್ತರ ಬಾಳಿನಲ್ಲಿ ಹೊಸಬೆಳಕು ತರಲಿ ಎಂದರು.
ಮೂರು ದಿನಗಳ ಕಾಲ ನಡೆದಿರುವ ಈ ಜಾತ್ರಾ ಮಹೋತ್ಸವಕ್ಕೆ ಶ್ರಮಿಸಿದ ಪ್ರತಿಯೊಬ್ಬರಿಗೂ ಯಶಸ್ಸು ಸಿಗಲಿ. ಇಂತಹ ಧಾರ್ಮಿಕ ಪರಂಪರೆಯನ್ನು ಪ್ರತಿವರ್ಷ ಮುನ್ನಡೆಸುವ ಶಕ್ತಿ ಗ್ರಾಮಸರಿಗೆ ಸಿಗಲೆಂದು ಆಶೀರ್ವದಿಸಿದರು.ಗ್ರಾಮಕ್ಕೆ ಆಗಮಿಸಿದ ಶ್ರೀಗಳಿಗೆ ಮಾಲಾರ್ಪಣೆ ಮಾಡಿ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡ ಗ್ರಾಮಸ್ಥರು ಮೆರವಣಿಗೆ ಮೂಲಕ ಶ್ರೀಹುಚ್ಚಪ್ಪಸ್ವಾಮಿ ದೇವಸ್ಥಾನಕ್ಕೆ ಕರೆದೊಯ್ದರು. ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಿರಂಜನಾನಂದಪುರಿ ಶ್ರೀಗಳು ಗ್ರಾಮಸ್ಥರಿಂದ ಗೌರವ ಸ್ವೀಕರಿಸಿ ಆಶೀರ್ವದಿಸಿದರು.
ಜಾತ್ರಾ ಮಹೋತ್ಸವ ಸಂಪನ್ನ:ಮೂರು ದಿನಗಳ ಜಾತ್ರಾ ಮಹೋತ್ಸವ ಬುಧವಾರ ಸಂಪನ್ನಗೊಂಡಿತು. ಮಂಗಳವಾದ್ಯ, ತಮಟೆ ಮೇಳ, ನಂದಿಕಂಬ, ಪಟದ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ 14 ಕೂಟದ ದೇವರುಗಳ ಉತ್ಸವ ಮೆರವಣಿಗೆ ಹುಚ್ಚಪ್ಪಸ್ವಾಮಿ ದೇವಸ್ಥಾನದಿಂದ ಹೊರಟು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬನ್ನಿ ಮಂಟಪ ತಲುಪುತ್ತಿದ್ದಂತೆ ಹಣ್ಣು ತುಪ್ಪ ಸೇವೆ, ಶಿವಪೂಜೆ ನಡೆಯಿತು. ಗ್ರಾಮದ ಕಲ್ಯಾಣಿಯಲ್ಲಿ ಗಂಗಾಸ್ನಾನ, ಎದುರಾರತಿ ಬೆಳಗಿದ ನಂತರ 14 ಕೂಟದ ದೇವರುಗಳನ್ನು ಆಯಾ ಗ್ರಾಮಗಳಿಗೆ ಬೀಳ್ಕೊಡಲಾಯಿತು.
ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು, ದೊಡ್ಡಾಬಾಲ ಮತ್ತು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರೂ ಸೇರಿದಂತೆ ಸಹಸ್ರಾರು ಮಂದಿ ಭಕ್ತರು ಇದ್ದರು. ಮಂಡ್ಯದಲ್ಲಿ ಮೇ 2ರಂದು ಸಾಮೂಹಿಕ ಉಪನಯನಮಂಡ್ಯ: ಶಂಕರ್ ತತ್ವ ಪ್ರಸಾರ ಸಮಿತಿ ಹಾಗೂ ಮಂಡ್ಯ ನಗರದ ವಿಪ್ರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮುಂಬರುವ ರಾಮಾನುಜಾಚಾರ್ಯರ, ಶಂಕರಾಚಾರ್ಯರ ಜಯಂತಿ ಪ್ರಯುಕ್ತ ವಿದ್ಯಾನಗರದ ವಿದ್ಯಾ ಗಣಪತಿ ದೇವಸ್ಥಾನದ ಆವರಣದಲ್ಲಿ ಮೇ 2ರಂದು ಶುಕ್ರವಾರ ಸಾಮೂಹಿಕ ಉಪನಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಸಕ್ತರು ದೇವಸ್ಥಾನದ ಕಾರ್ಯಾಲಯದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವುದು. ಹೆಚ್ಚಿನ ವಿವರಗಳಿಗೆ ಹೊಳಲು ರಾಘವೇಂದ್ರ ಮೊ.9538760770 ಸಂಪರ್ಕಿಸಿ ಎಂದು ವಿಪ್ರ ಸಂಸ್ಥೆಗಳ ಪದಾಧಿಕಾರಿಗಳು ತಿಳಿದ್ದಾರೆ.