ಸಾರಾಂಶ
ಬೆಳಗಾವಿ : ಇಡಿ ಪ್ರಕಟಿಸಿದ ತನಿಖೆಯಲ್ಲಿ ಸಿದ್ದರಾಮಯ್ಯ ಅಷ್ಟೆ ಅಲ್ಲದೆ ಬೇರೆ ಬೇರೆ ಸೈಟ್ ಗಳನ್ನೂ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದರಲ್ಲಿ ರಾಜಕಾರಣ ಇಲ್ಲ, ಕಾನೂನು ಪ್ರಕಾರ ಇಡಿ ಕೆಲಸ ಮಾಡುತ್ತಿದೆ. ಮುಡಾ ಹಗರಣದಲ್ಲಿ ಸಿಬಿಐ ತನಿಖೆ ಆಗಲಿ ಎಂದು ಸಂಸದ ಜಗದೀಶ ಶೆಟ್ಟರ್ ಆಗ್ರಹಿಸಿದರು. ನಗರದಲ್ಲಿ ಭಾನುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ.
ಹಗರಣ ಬಂದ್ಮೇಲೆ ಎಷ್ಟೋ ದಿನಗಳ ನಂತರ ಮುಡಾ ಆಸ್ತಿಗಳು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಯಾವುದೇ ಕಂಡೀಶನ್ ಇಲ್ಲದೆ ಸಿದ್ದರಾಮಯ್ಯ ಆಸ್ತಿ ಹಸ್ತಾಂತರ ಮಾಡಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ತಪ್ಪು ಇದೆ, ಸಿಬಿಐ ತನಿಖೆ ಮಾಡಲಿ. ರಾಜ್ಯ ಕಾಂಗ್ರೆಸ್ ಅಧೀನದಲ್ಲಿರೋ ಲೋಕಾಯುಕ್ತ ತನಿಖೆಯಲ್ಲಿ ಅರ್ಥ ಇಲ್ಲ. ಸಿಎಂ ಸಿದ್ದರಾಮಯ್ಯ ಇವತ್ತಲ್ಲ, ನಾಳೆ ರಾಜೀನಾಮೆ ಕೊಡುವ ಪರಿಸ್ಥಿತಿ ಎದುರಾಗುತ್ತೆ. ರಾಜ್ಯ ಕಾಂಗ್ರೆಸ್ ನಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಕಾಂಗ್ರೆಸ್ ಸಮಾವೇಶಕ್ಕೆ ಸರ್ಕಾರದ ಹಣ ಖರ್ಚು:
ಬೆಳಗಾವಿಯಲ್ಲಿ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ಹೆದರಿ ಮುಡಾ ಆಸ್ತಿ ಮುಟ್ಟುಗೋಲು ಎಂಬ ಸುರ್ಜೇವಾಲಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಸುರ್ಜೇವಾಲಾ ಹೇಳಿಕೆಗೂ ಸಮಾವೇಶಕ್ಕೂ ಇಡೀ ದಾಳಿಗೂ ಯಾವುದೇ ಸಂಬಂಧವಿಲ್ಲ. ರಾಜ್ಯ ಸರ್ಕಾರದ ಹಣ ಕರ್ಚು ಮಾಡಿ ಗಾಂಧಿ ಭಾರತ ಸಮಾವೇಶ ಮಾಡ್ತಿದ್ದಾರೆ. ಸಮಾವೇಶದ ಬ್ಯಾನರಗಳಲ್ಲಿ ಕಾಂಗ್ರೆಸ್ ಲೀಡರ್, ಮರಿ ಲೀಡರ್, ಯುವ ಲೀಡರ್ ಬ್ಯಾನರ್ ರಾರಾಜಿಸುತ್ತಿವೆ.
ಬ್ಯಾನರ್‌ಗಳಲ್ಲಿ ಮಹಾತ್ಮ ಗಾಂಧೀಜಿ ಪೋಟೋ ದುರ್ಬಿನಿ ಹಿಡಿದು ನೋಡಬೇಕು. ಸರ್ಕಾರದ ದುಡ್ಡಿನಲ್ಲಿ ಕಾರ್ಯಕ್ರಮ, ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆಮಾಡ್ತಿದ್ದಾರೆ. ಜಾತ್ರೆ ಮಾಡಿಕೊಂಡು ಹೋಗೊದಕ್ಕೆ ಬಂದಿದ್ದಾರೆ. ಬಿಜೆಪಿ ಪಕ್ಷದ ಮೇಲೆ ಆರೋಪ ಮಾಡೋ ಬದಲು ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಲಿ. ದಿನವೂ ಡಿನ್ನರ್ ಪಾರ್ಟಿ, ಲಂಚ್ ಪಾರ್ಟಿಗಳು ನಡೆಯುತ್ತಿವೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೇ ಯಾರನ್ನು ಏನು ಮಾಡಬೇಕು ಅನ್ನೋದು ನಮಗೆ ಬಿಟ್ಟಿದ್ದು. ಯಾರು ಏನು ಮಾತನಾಡೋ ಹಾಗಿಲ್ಲ ಎಂದು ವಾರ್ನಿಂಗ್ ಕೊಡೋ ಮಟ್ಟಿದೆ ಕಾಂಗ್ರೆಸ್ ಒಳಜಗಳ ಬಂದಿದೆ. ಮೊದಲು ನಿಮ್ಮ ಮನೆ ಸರಿ ಮಾಡಿಕೊಳ್ಳಿ. ಬೇರೆದವರ ಬಗ್ಗೆ ಮಾತನಾಡೋದನ್ನ ಬಿಡಿ ಎಂದು ತಿರುಗೇಟು ನೀಡಿದರು.
ಬಿಜೆಪಿ ಬಣ ಬಡಿದಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡೊದಿಲ್ಲ, ಆದರೆ, ಇದೆಲ್ಲವನ್ನೂ ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಜಗದೀಶ ಶೆಟ್ಟರ್ ಹೇಳಿದರು.