ನಗರಸಭೆಗೆ ಸೇರಿಸುವ ವಿಚಾರದಲ್ಲಿ ಸ್ಥಳೀಯ ಶಾಸಕರು ಯಾರ ಅಭಿಪ್ರಾಯವನ್ನೂ ಸಂಗ್ರಹಿಸದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ವಿಚಾರ ವಿಧಾನ ಪರಿಷತ್ತಿನಲ್ಲೂ ಚರ್ಚೆಯಾಗಿಲ್ಲ. ಅಭಿವೃದ್ಧಿ ಹೆಸರಲ್ಲಿ ಶಾಸಕರು ದರೋಡೆ, ದ್ರೋಹದ ಕೆಲಸ ಮಾಡುತ್ತಿದ್ದಾರೆ. ಅದನ್ನು ಸರಿಪಡಿಸುವ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ಗೆಜ್ಜಲಗೆರೆ ಗ್ರಾಪಂ ಅನ್ನು ನಗರಸಭೆ ವ್ಯಾಪ್ತಿಗೆ ಸ್ಥಳೀಯ ಜನರ ಅಭಿಪ್ರಾಯವನ್ನೇ ಸಂಗ್ರಹಿಸದೆ ಏಕಾಏಕಿ ಸೇರಿಸಲಾಗಿದೆ. ಈ ಸರ್ಕಾರದಲ್ಲಿ ಜನಾಭಿಪ್ರಾಯಕ್ಕೆ ಮನ್ನಣೆಯೇ ಇಲ್ಲ ಎಂದು ರೈತ ನಾಯಕಿ ಸುನಂದಾ ಜಯರಾಂ ಆರೋಪಿಸಿದರು.

ನಗರಸಭೆಗೆ ಸೇರಿಸುವ ವಿಚಾರದಲ್ಲಿ ಸ್ಥಳೀಯ ಶಾಸಕರು ಯಾರ ಅಭಿಪ್ರಾಯವನ್ನೂ ಸಂಗ್ರಹಿಸದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಈ ವಿಚಾರ ವಿಧಾನ ಪರಿಷತ್ತಿನಲ್ಲೂ ಚರ್ಚೆಯಾಗಿಲ್ಲ. ಅಭಿವೃದ್ಧಿ ಹೆಸರಲ್ಲಿ ಶಾಸಕರು ದರೋಡೆ, ದ್ರೋಹದ ಕೆಲಸ ಮಾಡುತ್ತಿದ್ದಾರೆ. ಅದನ್ನು ಸರಿಪಡಿಸುವ ಕೆಲಸ ಮಾಡಬೇಕು ಅದು ಶಾಸಕರಿಂದ ಮಾತ್ರ ಸಾಧ್ಯ ಎಂದರು.

ಶಾಸಕರು ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಯಾವ ಕೈಗಾರಿಕೆಯೂ ಬೇಡ, ನಮ್ಮ ಭೂಮಿಯನ್ನ್ನು ನಾವು ಉಳಿಸಿಕೊಳುತ್ತೇವೆ. ಸರ್ಕಾರ ಗ್ರಾಪಂ ಮಟ್ಟದಲ್ಲೇ ಅಭಿವೃದ್ಧಿ ಮಾಡಲಿ. ಗೆಜ್ಜಲಗೆರೆ ಗ್ರಾಪಂನ್ನು ಉಳಿಸಿ ಕೊಟ್ಟು ಹೊಸ ಇತಿಹಾಸ ಸೃಷ್ಟಿಸುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಅವರಲ್ಲಿ ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಗೆಜ್ಜಲಗೆರೆ ಗ್ರಾಪಂ ಅಧ್ಯಕ್ಷೆ ರಾಧ, ರೈತ ಸಂಘದ ಜಿ.ಎ.ಶಂಕರ್, ಲಿಂಗಪ್ಪಾಜಿ, ಜಿ.ಎಸ್.ವೀರಪ್ಪ, ಜಿ.ಟಿ.ಚಂದ್ರಶೇಖರ್, ಮೋಹನ್, ಜಿ.ಡಿ.ಚಂದ್ರಶೇಖರ್, ಸತ್ಯಪ್ರೇಮಕುಮಾರಿ ಗ್ರಾಪಂ ಸದಸ್ಯರು, ಮುಖಂಡರು ಇದ್ದರು.ಗೊರವನಹಳ್ಳಿ ಗ್ರಾಪಂ ಬೀಗ ಮುರಿದ ಪ್ರತಿಭಟನಾಕಾರರು

ಮದ್ದೂರು:

ನಗರಸಭೆ ವ್ಯಾಪ್ತಿಗೆ ಗೊರವನಹಳ್ಳಿ ಗ್ರಾಪಂ ಸೇರ್ಪಡೆ ವಿರೋಧಿಸಿ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ನಡೆಸುತ್ತಿರುವ ಧರಣಿಯನ್ನು ಹತ್ತಿಕ್ಕಲು ಗ್ರಾಮ ಪಂಚಾಯ್ತಿ ಕಚೇರಿ ಗೇಟ್‌ಗೆ ಬೀಗ ಹಾಕಿ ಗಾಂಧಿ ಭಾವಚಿತ್ರಕ್ಕೆ ದಿಗ್ಭಂಧನ ವಿಧಿಸಿದ್ದನ್ನು ಖಂಡಿಸಿ, ಪಿಡಿಒ ಪೂರ್ಣಿಮಾ ಕ್ರಮ ವಿರೋಧಿಸಿ ಪ್ರತಿಭಟನಾಕಾರರು ಬೀಗ ಮುರಿದು ಒಳ ನುಗ್ಗಿ ಧರಣಿ ನಡೆಸಿದ ಪ್ರಸಂಗ ಭಾನುವಾರ ನಡೆಯಿತು.

ಗೆಜ್ಜಲಗೆರೆ ಗ್ರಾಪಂ ಆವರಣದಲ್ಲಿ ನಗರಸಭೆ ವ್ಯಾಪ್ತಿಯ ನಾಲ್ಕು ಗ್ರಾಪಂಗಳ ಸೇರ್ಪಡೆ ವಿರೋಧಿಸಿ ಧರಣಿ ಬೆಂಬಲಿಸಿದ್ದ ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್, ವಿಧಾನ ಪರಿಷತ್ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಬಿಜೆಪಿ ಮುಖಂಡರು ಡಿಸಿ, ಎಸ್ಪಿ, ಎಸಿ ಸಮ್ಮುಖದಲ್ಲೇ ಕಚೇರಿಯ ಬೀಗ ಮುರಿದು ಧರಣಿ ನಡೆಸಿದರು.

ನಂತರ ಆರ್.ಅಶೋಕ್ ಅವರು ಗಾಂಧಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗ್ರಾಮಸ್ಥರ ಧರಣಿಗೆ ಬೆಂಬಲ ಸೂಚಿಸಿದರು.

ಈ ವೇಳೆ ಮಾತನಾಡಿದ ಆರ್.ಅಶೋಕ್, ಧರಣಿ ನಡೆಸುವುದು ಎಲ್ಲರ ಹಕ್ಕು. ಅದನ್ನು ಹತ್ತಿಕ್ಕಲು ಪಿಡಿಒ ಪೂರ್ಣಿಮಾ ಅವರು ಯತ್ನಿಸಿರುವು ಖಂಡನೀಯ. ಜೊತೆಗೆ ಜನಪ್ರತಿನಿಧಿಗಳು ಹಾಗೂ ಪ್ರತಿಭಟನಾಕಾರರೊಂದಿಗೆ ಆಕೆ ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಇವರನ್ನು ಅಮಾನತ್ತು ಮಾಡಿ ಶಿಸ್ತು ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಗೊರವನಹಳ್ಳಿ ಉಮೇಶ್, ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.