ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರದ ಅಸಹಕಾರ, ಅನುದಾನದ ಕೊರತೆಯಿಂದ ತಾಲೂಕಿನ ಅಭಿವೃದ್ಧಿ ಸ್ವಲ್ಪ ಮಟ್ಟಿಗೆ ಕುಂಠಿತವಾಗಿದೆ. ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂದು ಶಾಸಕ ಎಚ್.ಟಿ.ಮಂಜು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ತೆಂಡೇಕೆರೆ ರೈತ ಸಂಪರ್ಕ ಕೇಂದ್ರದ ಬಳಿ ಸುಮಾರು ಎರಡು ಕೋಟಿ ರು. ವೆಚ್ಚದ ನೂತನ ಕಟ್ಟಡ ಕಾಮಗಾರಿ ಹಾಗೂ ಅಕ್ಕಿಮಂಚನಹಳ್ಳಿ, ಕಾಗೇಪುರ, ಭೈರಾಪುರ, ಮಲ್ಕೋನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 4 ಕೋಟಿ ರು. ವೆಚ್ಚದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಶೀಳನೆರೆ ಹೋಬಳಿಯ ತೆಂಡೇಕೆರೆ ಗ್ರಾಮವು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಹಾಗಾಗಿ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರವನ್ನು ಸರ್ಕಾರವು ಆರಂಭಿಸಿದೆ. ಇದಕ್ಕೆ ಸುಮಾರು 2 ಕೋಟಿ ರು. ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಂಡು ರೈತ ಬಾಂಧವರಿಗೆ ಅನುಕೂಲ ಮಾಡಿಕೊಡಬೇಕು. ಕಟ್ಟಡ ನಿರ್ಮಾಣದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೃಷಿ ಅಧಿಕಾರಿಗಳಿಗೆ ಸ್ವಂತ ಕಟ್ಟಡ ಒದಗಿಸಿಕೊಡುವುದರಿಂದ ಸರ್ಕಾರಕ್ಕೆ ಬಾಡಿಗೆ ನೀಡುವ ಆರ್ಥಿಕ ಹೊರೆ ಕಡಿಮೆಯಾಗಲಿದೆ ಎಂದರು.


ತಾಲೂಕಿನ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ಸ್ವಂತ ಕಟ್ಟಡ ಹೊಂದಲು ನಾನು ಜಾಗ ಗುರುತಿಸಿ ಅಗತ್ಯ ಅನುದಾನ ನೀಡಿ ಸ್ವಂತ ಕಟ್ಟಡ ನಿರ್ಮಾಣ ಮಾಡಿ ಕೊಡುವ ಮೂಲಕ ಸರ್ಕಾರಕ್ಕೆ ತಗಲುವ ಆರ್ಥಿಕ ಹೊರೆ ಕಡಿಮೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಕ್ಷೇತ್ರದ ಶಾಸಕರಿಗೆ ನೀಡುವ ವಿಶೇಷ ಅನುದಾನದಲ್ಲಿ ತಾಲೂಕಿನ ಕೆಲವು ಗ್ರಾಮಗಳಿಗೆ ಚರಂಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದೇನೆ. ತಾಲೂಕಿನ ಕೆಲವು ಕಡೆಗಳಲ್ಲಿ ಎಲ್&ಟಿ ಕಂಪನಿಯವರು ಕಾಮಗಾರಿ ವೇಳೆ ರಸ್ತೆಗಳನ್ನು ಕಿತ್ತು ಹಾಳು ಮಾಡಿದ್ದು, ಅವರ ವಿರುದ್ಧ ದೂರು ದಾಖಲಿಸುವಂತೆ ಲೋಕೋಪಯೋಗಿ ಇಲಾಖೆ ಎಇಇಗೆ ಸೂಚನೆ ನೀಡಿದರು.

ಈ ವೇಳೆ ಶೀಳನೆರೆ ಹೋಬಳಿ ಜೆಡಿಎಸ್ ಪಕ್ಷದ ಅಧ್ಯಕ್ಷ ಸ್ವಾಮಿಗೌಡ, ಕೃಷಿ ಸಹಾಯಕ ನಿರ್ದೇಶಕ ಬಿ.ಎಸ್.ದೀಪಕ್, ಕೃಷಿ ಅಧಿಕಾರಿ ಸತೀಶ್‌ಚಂದ್ರ, ಲೋಕೋಪಯೋಗಿ ಇಲಾಖೆಯ ಎಇಇ ರಾಝಿಕಾ, ಕಿರಿಯ ಅಭಿಯಂತರರಾದ ವೆಂಕಟರಾಮು, ಗೌತಮಿ, ಕೃಷ್ಣಮೂರ್ತಿ, ಕೆ.ಆರ್.ಐ.ಡಿ.ಎಲ್. ಇಂಜಿನಿಯರ್ ಚೇತನ್, ಮುಖಂಡರಾದ ರಂಗರಾಜು, ಎಂ.ಜೆ.ಸ್ವಾಮಿ, ಗಂಗಾಧರ, ಮಲ್ಲೇಶ್, ಧರ್ಮೇಶ್, ಎಂ.ಎಂ.ಸತೀಶ್, ಮೋಹನ್, ಎಂ.ಪಿ.ಸತೀಶ್, ರೈತಸಂಘದ ಮುಖಂಡ ನಾಗೇಗೌಡ, ಧೋಣೇಗೌಡ,ರಾಮಣ್ಣ, ಶಾಸಕರ ಆಪ್ತ ಸಹಾಯಕರಾದ ಮರಡಹಳ್ಳಿ ಪ್ರದೀಪ್, ಧ್ರುವಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.